ಕೋಲ್ಕತ್ತಾದ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಸಾಮೂಹಿಕ ಅತ್ಯಚಾರವಲ್ಲ. ಇದು ಓರ್ವ ವ್ಯಕ್ತಿಯಿಂದ ನಡೆದಿದೆ ಎಂದು ಸಿಬಿಐ ಮೂಲಗಳು ಹೇಳಿವೆ. 5 ದಿನಗಳ ಪ್ರಾಥಮಿಕ ತನಿಖೆಯಲ್ಲಿ ಈ ಮಾಹಿತಿ ಲಭ್ಯವಾಗಿದ್ದು ಆಸ್ಪತ್ರೆಯಲ್ಲಿದ್ದ ನಾಗರಿಕ ಸ್ವಯಂ ಸೇವಕ ಸಂಜೋಯ್ ರಾಯ್ ಎಂಬ ವ್ಯಕ್ತಿ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.
ನಾಗರಿಕ ಸ್ವಯಂ ಸೇವಕ ಸಂಜೋಯ್ ರಾಯ್ ಎಂಬಾತ ವೈದ್ಯರ ಮೇಲೆ ಅತ್ಯಾಚಾರ ಎಸಗಿ ಕೊಂದಿದ್ದಾನೆ ಎಂದು ವಿಧಿವಿಜ್ಞಾನ ವರದಿಯೂ ಸೂಚಿಸಿದೆ. ಒಬ್ಬ ವ್ಯಕ್ತಿಯ ಕೈವಾಡವನ್ನು ಡಿಎನ್ಎ ವರದಿಯೂ ದೃಢಪಡಿಸಿದೆ. ವೈದ್ಯೆಯನ್ನು ಹತ್ಯೆಗೈದ ಕಟ್ಟಡಕ್ಕೆ ರಾಯ್ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನ ಸಿಬಿಐ ಪರಿಶೀಲಿಸಿದೆ ಎಂದು ಮೂಲಗಳು ಹೇಳಿವೆ. ಕೌಟುಂಬಿಕ ದೌರ್ಜನ್ಯದ ಇತಿಹಾಸ ಹೊಂದಿರುವ ಮತ್ತು ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಪ್ರವೇಶವನ್ನು ಹೊಂದಿದ್ದ ರಾಯ್ ಅವರ ಬ್ಲೂಟೂತ್ ಹೆಡ್ಸೆಟ್ ಅಪರಾಧದ ಸ್ಥಳದಲ್ಲಿ ಪತ್ತೆಯಾದ ನಂತರ ಅವರನ್ನು ಬಂಧಿಸಲಾಯಿತು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಕುರಿತು ಸಿಬಿಐ ತನಿಖೆಯನ್ನು ಇನ್ನೂ ಮುಕ್ತಾಯಗೊಳಿಸಿಲ್ಲ. ಅಂತಿಮ ಅಭಿಪ್ರಾಯ ಪಡೆಯಲು ಸ್ವತಂತ್ರ ತಜ್ಞರಿಗೆ ಫೊರೆನ್ಸಿಕ್ ವರದಿಯನ್ನು ಕಳುಹಿಸುವ ಸಾಧ್ಯತೆಯಿದೆ.
ಈ ಹಿಂದೆ ಸಂತ್ರಸ್ತೆಯ ಯೋನಿ ಸ್ವ್ಯಾಬ್ ಪರೀಕ್ಷೆಯಲ್ಲಿ 151 ಗ್ರಾಂ ದ್ರವ ಕಂಡು ಬಂದಿದ ಹಿನ್ನಲೆ ಸಾಮೂಹಿಕ ಅತ್ಯಾಚಾರ ನಡೆದಿರಬಹುದು ಎಂದು ವೈದ್ಯರು ಹೇಳಿದ್ದರು. ಸಂತ್ರಸ್ತೆಯ ಪೋಷಕರು ಕೋಲ್ಕತ್ತಾ ಹೈಕೋರ್ಟ್ನಲ್ಲಿ ಇದೇ ಅಂಶವನ್ನು ಮುಖ್ಯವಾಗಿ ವಾದವನ್ನು ಮಂಡಿಸಿದ್ದರು. ಪ್ರಶಿಕ್ಷಣಾರ್ಥಿ ವೈದ್ಯರ ಮೇಲೆ ಉಂಟಾಗುವ ಗಾಯಗಳ ಸ್ವರೂಪವು ಒಬ್ಬ ವ್ಯಕ್ತಿಯ ಕೈ ಕೆಲಸವಾಗಿರಲು ಸಾಧ್ಯವಿಲ್ಲ ಎಂದು ಡಾ. ಸುವರ್ಣ ಗೋಸ್ವಾಮಿ ಅಭಿಪ್ರಾಯಪಟ್ಟಿದ್ದರು.