ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಮೈಸೂರು ಅರಮನೆ ಅಂಗಳದಲ್ಲಿ ಐತಿಹಾಸಿಕ ಜಂಬೂಸವಾರಿಗೆ ಮಲ್ಲಿಗೆ ನಗರಿ ಖ್ಯಾತಿಯ ಮೈಸೂರು ಸಜ್ಜಾಗಿದ್ದು, ಗಜಪಡೆಗಳ ಕ್ಯಾಪ್ಟನ್ ಅಭಿಮನ್ಯು ಹೊತ್ತು ಸಾಗುವ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗೋ ತಾಯಿ ಚಾಮುಂಡೇಶ್ವರಿಯನ್ನ ಕಣ್ತುಂಬಿಕೊಳ್ಳಲು ಕ್ಯೋಟ್ಯಾಂತರ ಜನ ತುದಿಗಾಲಿನಲ್ಲಿ ನಿಂತಿದ್ದಾರೆ.
ಐದನೇ ಬಾರಿಗೆ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯು
ಕ್ಯಾಪ್ಟನ್ ಅಭಿಮನ್ಯು ಐದನೇ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಲು ರೆಡಿಯಾಗಿದ್ದು, ನಾಳೆ ಮಧ್ಯಾಹ್ನ 1.41 ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದ್ದು, ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಜಂಬೂಸವಾರಿಯ ಉದ್ಘಾಟನೆ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಮೈಸೂರು ಕೊಡಗು ಸಂಸದ ಹಾಗೂ ರಾಜವಂಶಸ್ಥರಾದ ಯದುವೀರ್ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ, ಸಾಥ್ ನೀಡಲಿದ್ದಾರೆ.
140 ಕ್ಕೂ ಹೆಚ್ಚು ಕಲಾ ತಂಡ ಹಾಗೂ 51 ಸ್ತಬ್ಧ ಚಿತ್ರ
ಐದನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಸಾಗೋ ಕ್ಯಾಪ್ಟನ್ ಅಭಿಮನ್ಯುವಿಗೆ ಲಕ್ಷ್ಮೀ, ಹಿರಣ್ಯ ಕುಮ್ಕಿ ಆನೆಗಳಾಗಿ ಸಾಥ್ ನೀಡಿದರೆ, ಧನಂಜಯ ನಿಶಾನೆ ಆನೆಯಾಗಲಿದ್ದಾನೆ. ಇದರೊಂದಿಗೆ ಗೋಪಿ ನೌಪತ್ ಆನೆಯಾಗಲಿದ್ದು 9 ಆನೆಗಳು ದಸರಾ ಮೆರವಣಿಗೆಯಲ್ಲಿ ಸಾಗಲಿವೆ. ಜಂಬುಸಾವರಿಗೂ ಮೊದಲಿಗೆ ನಂದಿ ಧ್ವಜ ಉದ್ಘಾಟನೆಯಾಗಲಿದ್ದು, ಬಳಿಕ ವಿವಿಧ ಜಿಲ್ಲೆಗಳು ಕಲಾತಂಡಗಳು, ಕಿಲುಕುದುರೆ, ಗೊರವರ ಕುಣಿತ, ದೊಳ್ಳು ಕುಣಿತ, ಯಕ್ಷಗಾನ, ಕೀಲುಗೊಂಬೆ, ಮರಗಾಲು, ವೀರಗಾಸೆ, ಹಾಡಿ ಮಕ್ಕಳ ಕುಣಿತ ಸೇರಿದಂತೆ 140 ಕ್ಕೂ ಹೆಚ್ಚು ಕಲಾ ತಂಡಗಳು ಹಾಗೂ 51 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸ್ತಬ್ಧ ಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿದ್ದು, ರಾಜ್ಯದ 31 ಜಿಲ್ಲೆಗಳ ಸ್ತಬ್ಧ ಚಿತ್ರಗಳ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಸಹ ಸಾಗಲಿವೆ.
ಅರಮನೆ ನಗರಿಯಲ್ಲಿ ಪೊಲೀಸ್ ಬಂದೋಬಸ್ತ್
ಜಂಬೂ ಸವಾರಿ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲಾಗಿದೆ. ಇಬ್ಬರೂ ಡಿಐಜಿ, 27 ಜನ ಎಸ್ಪಿ, 989 ಡಿವೈಎಸ್ಪಿ ಹಾಗೂ ಎಸಿಪಿ ಮತ್ತು ಇನ್ಸ್ಪೆಕ್ಟರ್, ಎಎಸ್ಐ, ಹೆಡ್ ಕಾನ್ಸ್ಟೆಬಲ್, ಪೋಲೀಸ್ ಪೇದೆಗಳು ಸೇರಿದಂತೆ ಒಟ್ಟು 4999 ಸಿಬ್ಬಂದಿ, 1500 ಹೋಂ ಗಾರ್ಡ್ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರ ಜತೆಗೆ 10 ಸಿಎಆರ್, 33 ಕೆಎಸ್ಆರ್ಪಿ, 29 ಎಎಸ್ಸಿ, 3 ಬಿಡಿಡಿಎಸ್, 1 ಗರುಡಾಪಡೆ, 1 ಐಎಸ್ಡಿ, ಸಿಐಇಡಿ ತುಕಡಿ ನಿಯೋಜಿಸಲಾಗುತ್ತಿದೆ. ಜತೆಗೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ 150 ಸಿಸಿ ಟಿವಿ ಅಳವಡಿಸಲಾಗಿದೆ. ಅದರೊಂದಿಗೆ ಜಂಬೂಸವಾರಿಗೆಂದು ಅರಮನೆಗೆ ಪ್ರವೇಶ ಮಾಡುವ ದ್ವಾರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದು. ಗಣ್ಯರು, ಸಾರ್ವಜನಿಕರು ಪ್ರವೇಶಿಸುವ ಕಡೆ ತಪಾಸಣೆ ಮಾಡಲಾಗುತ್ತದೆ. ಇನ್ನೂ, ಅರಮನೆ ಅಂಗಳದಲ್ಲಿ ಗಣ್ಯರು ಸಾರ್ವಜನಿಕರಿಗೆ 40 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಇಂದು ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿತು. ಖಾಸಾ ಆಯುಧಗಳಿಗೆ ರಾಜ ವಂಶಸ್ಥ ಯದುವೀರ್ ಒಡೆಯರ್ ಪೂಜೆ ಸಲ್ಲಿಸುವ ಮೂಲಕ ನವರಾತ್ರಿಯ ಒಂಭತ್ತನೇ ದಿನದ ಪೂಜಾ ಕೈಂಕರ್ಯಗಳು ಮುಕ್ತಾಯಗೊಂಡವು. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಪಟ್ಟದ ಕತ್ತಿ ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು. ದೇವಾಲಯದಲ್ಲಿ ಪೂಜೆಯ ಬಳಿಕ ಖಾಸಾ ಆಯುಧಗಳನ್ನು ಮೆರವಣಿಗೆಯಲ್ಲಿ ಅರಮನೆಗೆ ತರಲಾಯಿತು. ನಂತರ ಪಟ್ಟದಾನೆ, ಪಟ್ಟದಕುದುರೆ, ಪಟ್ಟದ ಹಸು ಹಾಗೇ ಅರಮನೆಯಲ್ಲಿರುವ ಆಯುಧಗಳಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸತತ 9ನೇ ಬಾರಿಗೆ ನವರಾತ್ರಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.