ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಭಾವೀ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತಮಿತ್ರರು. ಯಾವ ಮಟ್ಟಿಗೆ ಆಪ್ತರು ಎಂದರೆ ಕಳೆದ ಬಾರಿ ಚುನಾವಣೆ ನಡೆಯುವ ವೇಳೆ ಅಮೆರಿಕಕ್ಕೆ ಪ್ರವಾಸ ಹೋಗಿದ್ದ ಮೋದಿ, ಅಲ್ಲಿನ ಭಾರತೀಯರನ್ನು ಉದ್ದೇಶಿಸಿ ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಎಂದು ಘೋಷಣೆ ಕೂಗಿ ಬಂದಿದ್ದರು. ಟ್ರಂಪ್ ಕೂಡಾ ಅಷ್ಟೇ.. ಮೋದಿಯ ಜೊತೆ ಸ್ನೇಹವನ್ನು ಕಾಯ್ದಿರಿಸಕೊಂಡಿರುವ ವ್ಯಕ್ತಿ. ಹೀಗಾಗಿಯೇ ಟ್ರಂಪ್ ಗೆಲುವು ಖಚಿತವಾಗುತ್ತಿದ್ದಂತೆಯೇ ಮೋದಿ ನನ್ನ ಸ್ನೇಹಿತನ ಐತಿಹಾಸಿಕ ಗೆಲುವಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು. ದೂರವಾಣಿಯಲ್ಲಿಯೂ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ರಂಪ್ ಇಡೀ ವಿಶ್ವವೇ ನಿಮ್ಮನ್ನು ಪ್ರೀತಿಸುತ್ತೆ ಎಂದು ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಗೆ ಹೇಳಿದ್ದಾರೆ. ಇಬ್ಬರು ವಿಶ್ವ ನಾಯಕರ ನಡುವಿನ ಬಾಂಧವ್ಯವೇನೋ ಸರಿಯೇ, ಇದರಿಂದ ಭಾರತಕ್ಕೆ ನಿಜವಾಗಿಯೂ ಲಾಭವಾ.. ಈ ಬಗ್ಗೆ ನೋಡಿದರೆ ಲಾಭವೂಇದೆ, ನಷ್ಟವೂ ಇದೆ ಎನ್ನಬಹುದು.
ಇದನ್ನು ಓದಿ:ಯುದ್ಧ ಮಾಡದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್..!
ಮೋದಿಗೆ ಭಾರತವೇ ಫಸ್ಟ್. ಟ್ರಂಪ್ಗೆ ಅಮೆರಿಕವೇ ಫಸ್ಟ್
ಇಬ್ಬರೂ ನಾಯಕರ ನಡೆನುಡಿಯಲ್ಲಿ ಎದ್ದು ಕಾಣುವ ಸಾಮಾನ್ಯ ಅಂಶ ಎಂದರೆ ಇಬ್ಬರೂ ತಮ್ಮ ತಮ್ಮ ದೇಶವೇ ಮೊದಲು ಎನ್ನುತ್ತಾರೆ. ಇತ್ತೀಚೆಗೆ ನಡೆದ ಉಕ್ರೇನ್-ರಷ್ಯಾ ಯುದ್ಧದಲ್ಲಿ ರಷ್ಯಾ ಜೊತೆ ವ್ಯವಹಾರ ಬೇಡ ಎಂದು ಹೇಳಿತ್ತು ಅಮೆರಿಕ. ಆದರೆ ಭಾರತ, ತಮ್ಮ ದೇಶಕ್ಕೆ ಲಾಭವೇ ಮೊದಲ ಆದ್ಯತೆ ಎಂದು ಹೇಳಿತ್ತು. ಇರಾನ್ ವಿಷಯದಲ್ಲಿಯೂ ಇದನ್ನು ಪಾಲಿಸಿದ್ದ ಭಾರತ, ಅಮೆರಿಕ ಸೇರಿದಂತೆ ಯೂರೋಪಿಯನ್ ರಾಷ್ಟ್ರಗಳ ವಾದವನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಟ್ರಂಪ್ ಕೂಡಾ ಅಂಥದ್ದೇ ಧಾಟಿಯವರು. ಟ್ರಂಪ್ ಅವರು ಅಧ್ಯಕ್ಷರಾದ ನಂತರ ವಲಸಿಗ ಭಾರತೀಯರಿಗೆ ವೀಸಾ ಕಷ್ಟವಾಗಬಹುದು. ಏಕೆಂದರೆ ಭಾರತೀಯರಿಂದಾಗಿ ಅಮೆರಿಕನ್ನರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ವಾದವನ್ನು ಟ್ರಂಪ್ ನಂಬಿದ್ಧಾರೆ. ಇದು ಕೇವಲ ಭಾರತಕ್ಕಷ್ಟೇ ಅಲ್ಲ, ಚೀನಾಗೂ ಅನ್ವಯವಾಗಲಿದೆ.
ಆದರೆ ಚೀನಾ ಮತ್ತು ಭಾರತದ ನಡುವೆ ಆಯ್ಕೆ ಬಂದರೆ, ಟ್ರಂಪ್ ಚೀನಾವನ್ನು ದೂರ ಇಡುವಂತಹವರು. ಇದನ್ನು ಮೊದಲ ಬಾರಿ ಅಧ್ಯಕ್ಷರಾಗಿದ್ದಾಗ ಮಾಡಿಯೂ ತೋರಿಸಿದ್ದಾರೆ. ಅಮೆರಿಕದಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಪೈಪೋಟಿಯಾಗಿರುವ ಭಾರತದಿಂದ ರಫ್ತಾಗುವ ವಸ್ತುಗಳಿಗೆ ಸುಂಕ ಹೆಚ್ಚಾಗುವ ಸಾಧ್ಯತೆಯೂ ಇದೆ. ಆದರೆ ಚೀನಾ ಮತ್ತು ಭಾರತದ ನಡುವಿನ ವಿಷಯಕ್ಕೆ ಬಂದರೆ ಚೀನಾಕ್ಕೆ ಸುಂಕ ಹೆಚ್ಚಾಗಬಹುದು. ಅಂದರೆ ಭಾರತ ಮತ್ತು ಚೀನಾ ಎರಡೂ ದೇಶಗಳ ಉತ್ಪನ್ನಗಳ ವಿಷಯದಲ್ಲಿ ಭಾರತಕ್ಕೆ ಸ್ವಲ್ಪ ಉಸಿರಾಡುವ ಅವಕಾಶ ಸಿಗಲಿದೆ.
ಇದನ್ನು ಓದಿ:ಚಂದನಾ ಅನಂತಕೃಷ್ಣಗೆ ಕೂಡಿ ಬಂತು ಕಂಕಣ ಭಾಗ್ಯ!
ಇನ್ನು ಭದ್ರತಾ ಮಂಡಳಿ ಖಾಯಂ ಸದಸ್ಯತ್ವ ವಿಚಾರದಲ್ಲಿ ಟ್ರಂಪ್, ಭಾರತದ ಪರವಾಗಿ ನಿಂತಿದ್ದಾರೆ. ಚೀನಾ ಇದುವರೆಗೂ ವೀಟೋ ಚಲಾಯಿಸಿ, ಭಾರತದ ಖಾಯಂ ಸದಸ್ಯತ್ವ ಸ್ಥಾನಕ್ಕೆ ಅಡ್ಡಿ ಪಡಿಸುತ್ತಾ ಬಂದಿದೆ. ಟ್ರಂಪ್ ತಮ್ಮ 2ನೇ ಬಾರಿಯ ಅಧಿಕಾರಾವಧಿಯಲ್ಲಿ ಇದನ್ನು ನಿವಾರಿಸುವ ನಿರೀಕ್ಷೆ ಇದೆ. ಪಾಕಿಸ್ತಾನ, ಬಾಂಗ್ಲಾದೇಶದ ವಿಷಯಗಳಲ್ಲಿ ಟ್ರಂಪ್ ಭಾರತದ ಪರ ನಿಂತಿದ್ದಾರೆ. ತಾನು ಅಧ್ಯಕ್ಷರಾಗಿದ್ದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಇಷ್ಟು ಹೀನಾಯವಾಗಿ ಇರುತ್ತಿರಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿರುವ ಟ್ರಂಪ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಾರೆ ಎಂಬ ನಿರೀಕ್ಷೆಯೂ ಇದೆ.
ಆದರೆ ಒತ್ತಡಕ್ಕೆ ಒಳಗಾಗಿರುವುದು ಭಾರತದ ಔಟ್ ಸೋರ್ಸಿಂಗ್ ಉದ್ಯಮ. ಇದಕ್ಕೆ ಕಡಿವಾಣ ಹಾಕುವುದು ಹಾಗೂ ಅಮೆರಿಕನ್ನರಿಗೆ ಉದ್ಯೋಗ ಕೊಡಿಸುವುದು ಟ್ರಂಪ್ ಗುರಿ. ಆದರೆ ಇದನ್ನು ಸರಿಪಡಿಸಲು 4 ವರ್ಷಗಳ ಅವಧಿ ಸಾಕಾಗುವುದಿಲ್ಲ. ಏನೇ ಕ್ರಮ ತೆಗೆದುಕೊಂಡರೂ, ಅದು ಪರಿಣಾಮ ಬೀರುವ ಹೊತ್ತಿಗೆ ಟ್ರಂಪ್ ಅಧಿಕಾರಾವಧಿ ಮುಗಿಯುತ್ತದೆ ಎಂಬ ಆಶಾವಾದ ಉದ್ಯಮಿಗಳದ್ದು. ಯುದ್ಧೋಪಕರಣಗಳ ಖರೀದಿ ವ್ಯವಹಾರದಲ್ಲಿ ಭಾರತಕ್ಕೆ ಟ್ರಂಪ್ ಬೆಂಬಲ ನೀಡುವ ನಿರೀಕ್ಷೆ ಇದೆ. ಏಕೆಂದರೆ ಟ್ರಂಪ್ ಅವರಿಗೆ ಚೀನಾ ಇಷ್ಟವಿಲ್ಲ. ಅಮೆರಿಕ ಫಸ್ಟ್ ಎನ್ನುವ ವಾದಕ್ಕೆ, ಜಗತ್ತಿನಲ್ಲಿ ಅಮೆರಿಕವೇ ಬಲಿಷ್ಠವಾಗಿರಬೇಕು ಎಂಬ ಟ್ರಂಪ್ ಅವರ ಕನಸಿಗೆ ವಿರೋಧಿಯಾಗಿ ಬೆಳೆಯುತ್ತಿರುವ ಚೀನಾದ ಅಭಿವೃದ್ಧಿ ಅವರಿಗೆ ಇಷ್ಟವಿಲ್ಲ. ಹೀಗಾಗಿ ಚೀನಾದ ಶತ್ರು ರಾಷ್ಟ್ರ ಎಂಬ ಕಾರಣಕ್ಕೆ, ಭಾರತಕ್ಕೆ ಬೆಂಬಲ ನೀಡುತ್ತಾರೆ ಎಂದು ನಿರೀಕ್ಷೆ.
ಇದನ್ನು ಓದಿ: ಹೈಟೆಕ್ ಆಗಿ ಬರುತ್ತಿದೆ ಹೊಸ ಮಾರುತಿ ಡಿಜೈರ್!
ಇನ್ನು ಪಾಕಿಸ್ತಾನದ ವಿಷಯದಲ್ಲಿಯೂ ಕೂಡಾ ಟ್ರಂಪ್ ಕಠುವಾಗಿಯೇ ಇದ್ದಾರೆ. ಭಾರತಕ್ಕೆ ಬಂದ ಅಮೆರಿಕ ಅಧ್ಯಕ್ಷ, ಪಾಕಿಸ್ತಾನಕ್ಕೆ ಭೇಟಿ ಕೊಡಲೇಬೇಕು ಎಂಬ ಸಂಪ್ರದಾಯವನ್ನು ಮುರಿದಿದ್ದವರು ಟ್ರಂಪ್. ಅಲ್ಲದೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದ ಟ್ರಂಪ್, ಅದೇ ಮನಸ್ಥಿತಿ ಮುಂದುವರಿಸಿದರೆ ಭಾರತಕ್ಕೆ ಲಾಭ. ಪಾಕಿಸ್ತಾನಕ್ಕೆ ನಷ್ಟ. ಗ್ಯಾರಂಟಿ ನ್ಯೂಸ್ ಎಕ್ಸಕ್ಲೂಸಿವ್..!