ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಎಲ್ಬಿ ನಗರ ಪೊಲೀಸ್ ವ್ಯಾಪ್ತಿಯ ಶಿವಗಂಗಾ ಕಾಲೋನಿಯಲ್ಲಿ ಹಣದ ಕುರಿತಾದ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ನೆರೆಮನೆಯಲ್ಲಿ ವಾಸಿಸುತ್ತಿದ್ದ ಇನ್ನೊಬ್ಬ ಮಹಿಳೆಯನ್ನು ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ಮೃತ ನರಸಮ್ಮ ತನ್ನ ನೆರೆಮನೆಯ ಸರೋಜಿನಿ ಎಂಬುವರಿಗೆ 20 ಸಾವಿರ ರೂ. ನೀಡಿದ್ದರು. ನೀಡಿದ ಸಾಲವನ್ನು ನರಸಮ್ಮ ವಾಪಸ್ ಕೇಳಿದಾಗ ಇಬ್ಬರು ಮಹಿಳೆಯರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಅದೇ ಕೋಪದಲ್ಲಿ ಸರೋಜಿನಿ ನರಸಮ್ಮನ ಮುಖಕ್ಕೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾಳೆ. ಇದರ ಪರಿಣಾಮವಾಗಿ ನರಸಮ್ಮ ದಾರುಣವಾಗಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ 9.30ಕ್ಕೆ ಈ ಬಗ್ಗೆ ಪೊಲೀಸರಿಗೆ ಕರೆ ಬಂದಿದ್ದು, ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಸರೋಜಿನಿ ಅವರು ನರಸಮ್ಮ ಅವರ ಮುಖಕ್ಕೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸರೋಜಿನಿಯನ್ನು ವಶಕ್ಕೆ ಪಡೆದಿದ್ದೇವೆ ಎಂದು ಎಲ್ಬಿ ನಗರ ಠಾಣೆಯ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.