ವಿವಿಧ ಅಡಿಗೆಗಳಿಗೆ ಸಂಬಂಧಿಸಿದ ವಿಡಿಯೋ ಶೇರ್ ಮಾಡುತ್ತಿದ್ದ ಯೂಟ್ಯೂಬರ್ ಸಾಂಪ್ರಾದಾಯಿಕ ರೀತಿಯಲ್ಲಿ ನವಿಲು ಮಾಸವನ್ನು ಬೇಯಿಸುವುದು ಹೇಗೆ ಎಂದು ಹೇಳುವ ವಿಡಿಯೋವನ್ನು ತನ್ನ ಯೂಟ್ಯೂಬ್ ಚಾನಲ್ನಲ್ಲಿ ಶೇರ್ ಮಾಡಿ ಅರೆಸ್ಟ್ ಆಗಿದ್ದಾನೆ. ತೆಲಂಗಾಣದ ಸಿರ್ಸಿಲ್ಲಾದ ವ್ಯಕ್ತಿಯೊಬ್ಬ ‘ನವಿಲು ಮಾಂಸದ ಸಾರು’ ತಯಾರಿಸಿ ಸೇವಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ಭಾನುವಾರ ಆತನನ್ನು ಬಂಧಿಸಲಾಗಿದೆ. ಯೂಟ್ಯೂಬರ್ ಕೋಡಂ ಪ್ರಣಯ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ.
ಈತ ಅಕ್ರಮವಾಗಿ ವನ್ಯಜೀವಿ ಸೇವನೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದದ ನಂತರ ಕುಮಾರ್ ಅವರ ಯೂಟ್ಯೂಬ್ ಚಾನೆಲ್ನಿಂದ ವೀಡಿಯೊವನ್ನು ತೆಗೆದುಹಾಕಲಾಗಿದೆ. ಅರಣ್ಯ ಇಲಾಖೆಯು ಕುಮಾರ್ನನ್ನು ಬಂಧಿಸಿ, ಆತ ನವಿಲು ಮಾಂಸದ ಸಾರು ತಯಾರಿಸಿದ ಜಾಗದಲ್ಲಿ ಪರಿಶೀಲನೆ ನಡೆಸಿ ವಿಡಿಯೋ ಚಿತ್ರೀಕರಿಸಿದೆ. ಕುಮಾರ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಸಂರಕ್ಷಿತ ಪ್ರಬೇಧ ಹತ್ಯೆಯನ್ನು ವಿಡಿಯೋ ಪ್ರಚಾರ ಮಾಡಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಅರಣ್ಯ ಅಧಿಕಾರಿಗಳು ವಿಡಿಯೋದ ಸತ್ಯಾಸತ್ಯತೆಯನ್ನು ತನಿಖೆ ನಡೆಸುತ್ತಿದ್ದು, ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ . ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಅವರ ವಿರುದ್ಧ ಮತ್ತು ಅಂತಹ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆಂದು ವರದಿಯಾಗಿದೆ. ಯೂಟ್ಯೂಬರ್ನ ರಕ್ತದ ಮಾದರಿಗಳು ಮತ್ತು ಸಾಂಬಾರ್ನ ಕೆಲ ಅಂಶಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಯಲ್ಲಿ ನವಿಲು ಮಾಂಸ ಎಂದು ಸಾಭೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿ ಹೇಳಿದೆ. ಪ್ರಣಯ್ ಕುಮಾರ್ ಅವರ ಚಾನೆಲ್ ಅನ್ನು ಹೆಚ್ಚಿನ ಪರಿಶೀಲನೆ ನಡೆಸಿದ ನಂತರ, ಕಾಡುಹಂದಿ ಮಾಂಸವನ್ನು ಒಳಗೊಂಡಿರುವ ಮತ್ತೊಂದು ವಿಡಿಯೋ ಪತ್ತೆಯಾಗಿದೆ. ಇದು ವಿವಾದಾಸ್ಪದ ಮತ್ತು ಕಾನೂನುಬಾಹಿರವಾಗಿದೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.