ಬೆಂಗಳೂರು: ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣ ಬಯಲಾದ ಬೆನ್ನಲ್ಲೆ ಭೋವಿ ನಿಗಮದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿರುವುದು ಸಿಐಡಿ ತನಿಖೆಯಿಂದ ಬಹಿರಂಗವಾಗಿದೆ. ಐದು ಖಾಸಗಿ ಕಂಪನಿಗಳಿಗೆ 34 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಪತ್ತೆಯಾಗಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಅನೇಕ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆ ಎದುರಿಸಿದ್ದ ಜೀವಾ ಅವರ ಖಾತೆಗೆ 7 ಕೋಟಿ 16 ಲಕ್ಷ ರೂ. ಜಮೆಯಾಗಿದೆ.
ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ, ನಿಗಮದ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ, ಮಾಜಿ ಅಧೀಕ್ಷಕ ಸುಬ್ಬಪ್ಪ ಅವರು ತಮ್ಮ ನೆರೆಹೊರೆಯವರು, ಬಾಡಿಗೆದಾರರು ಸಂಬಂಧಿಕರ ಹೆಸರಿನಲ್ಲಿ ನಕಲಿ ಕಂಪನಿ ತೆರೆದಿದ್ದು, ಅವರ ಖಾತೆಗಳಿಗೆ ಹಣ ಜಮೆಯಾಗಿದೆ.
ಇದೇ ಹಗರಣ ಸಂಬಂಧ ಸಿಐಡಿ ತನಿಖೆ ಎದುರಿಸಿದ್ದ ಉದ್ಯಮಿ ಜೀವಾ ಅವರು, ಐದು ದಿನಗಳ ಹಿಂದೆ ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋವಿ ಅಕ್ರಮ ಹಣ ವರ್ಗಾವಣೆ ಶೋಧಿಸಿರುವ ಸಿಐಡಿ, ಐದು ಕಂಪನಿಗಳಿಗೆ 34.18 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ.
ಇದರಲ್ಲಿ ಜೀವಾ ಅವರಿಗೆ ಸೇರಿದ್ದು ಎನ್ನಲಾದ ಅನ್ನಿಕಾ ಎಂಟರ್ ಪ್ರೈಸ್ (₹7.16 ಕೋಟಿ) ಹಾಗೂ ಅವರ ಸೋದರಿ ಹೆಸರಿನಲ್ಲಿರುವ ಹರ್ನಿತಾ ಕ್ರಿಯೇಷನ್ಸ್ (₹3.79 ಕೋಟಿ) ಸೇರಿ ಒಟ್ಟು ₹10.9 ಕೋಟಿ ಸಂದಾಯವಾಗಿದೆ. ಇನ್ನುಳಿದ ಮೂರು ಕಂಪನಿಗಳಲ್ಲಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ ಅವರ ಆಪ್ತರ ಪಾಲುದಾರಿಕೆ ಇದೆ. ಅಲ್ಲದೆ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕಿ ಲೀಲಾವತಿ ಅವರ ಸೋದರಿ ಮಂಗಳಾ ರಾಮು ಅವರಿಗೆ ಹಂತ ಹಂತವಾಗಿ ಕಳ್ಳ ಹಾದಿಯಲ್ಲಿ ₹1.48 ಕೋಟಿ ವರ್ಗಾವಣೆಯಾಗಿದೆ ಎಂದು ಮೂಲಗಳು ಹೇಳಿವೆ.
ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕನ ಆಪ್ತ ಸಿ.ಸಂತೋಷ ಹೆಸರಿನಲ್ಲಿನ ಸೋಮನಾಥೇಶ್ವರ ಎಂಟರ್ ಪ್ರೈಸಸ್ ಕಂಪೆನಿಗೆ ಬರೋಬ್ಬರಿ 9 ಕೋಟಿ 66 ಲಕ್ಷ ರೂ. ಕಾಂತ ಒಡೆಯರ್ ಹೆಸರಿನ ನ್ಯೂ ಡ್ರೀಮ್ ಎಂಟರ್ ಪ್ರೈಸಸ್ ಕಂಪನಿ 11 ಕೋಟಿ 40 ಲಕ್ಷ ರೂ. ಪದ್ಮಾ ಎಂಬಾಕೆ ಬ್ಯಾಂಕ್ ಅಕೌಂಟ್ಗೆ ನಿಗಮ ಮತ್ತು ಬ್ಯಾಂಕ್ ಪಿಆರ್ಒ ಅಭಿಲಾಶ್ ಅವರಿಗೆ ಸೇರಿದ ಎನ್ನಲಾಗಿರುವ ಕಂಪನಿಗೆ 1 ಕೋಟಿ 26 ಲಕ್ಷ ರೂ.
ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಸೋದರಿ ಮಂಗಳ ರಾಮು ಬ್ಯಾಂಕ್ ಅಕೌಂಟ್ ಗೆ 1 ಕೋಟಿ 48 ಲಕ್ಷ ರೂ. ಸಂದಾಯವಾಗಿದೆ. ಈ ಮೂಲಕ ಬರೊಬ್ಬರಿ 90 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ.
ದನದ ಕೊಟ್ಟಿಗೆಯಲ್ಲಿ ಕಂಪನಿಗಳು
ಬೆಂಗಳೂರು ನಗರದಲ್ಲೇ ಕಾರ್ಯಚಟುವಟಿಕೆ ಹೊಂದಿವೆ ಎಂದು ಬಿಂಬಿಸಿಕೊಂಡಿದ್ದ ಈ ಕಂಪನಿಗಳ ಬೆನ್ನತ್ತಿ ಹೋಗಿದ್ದ ಅಧಿಕಾರಿಗಳು, ಕೆಲ ಕಂಪನಿಗಳ ಕಚೇರಿಗಳು ದನದ ಕೊಟ್ಟಿಗೆಯಲ್ಲಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ.
ಬರೊಬ್ಬರಿ 90 ಕೋಟಿಗೂ ಅಧಿಕ ಅವ್ಯವಹಾರ
ಸರ್ಕಾರವು ಭೋವಿ ಸಮುದಾಯದ ಅಭ್ಯುದಯಕ್ಕೆ ರೂಪಿಸಿದ್ದ ಆರ್ಥಿಕ ಯೋಜನೆಗಳಲ್ಲಿ ನಿಗಮದ ಕೆಲ ಅಧಿಕಾರಿಗಳು ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ. 2018-2023ರವರೆಗೆ ಐದು ವರ್ಷಗಳಲ್ಲಿ ಸುಮಾರು 90 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆದಿರುವುದು ಗೊತ್ತಾಗಿದೆ.
ಯಾರ್ಯಾರು ಪಾಲುದಾರರು
ಮಾಜಿ ಜಿಎಂ ಬಿ.ಕೆ.ನಾಗರಾಜಪ್ಪ ಅವರ ಆಪ್ತ ಸಹಾಯಕಿ (ಹೊರಗುತ್ತಿಗೆ ಆಧಾರ) ಯಶಸ್ವಿನಿ ಹೆಸರಿನಲ್ಲಿ ನ್ಯೂ ಡ್ರೀಮ್, ಆಕೆಯ ಸೋದರ ಕಾರ್ತಿಕ್ ಗೌಡ ಹೆಸರಿನಲ್ಲಿ ಆದಿತ್ಯಾ, ತಮ್ಮ ಮನೆ ಬಾಡಿಗೆದಾರರಾದ ಜೀವಾ ಹೆಸರಿನಲ್ಲಿ ಅನ್ನಿಕಾ ಎಂಟರ್ಪ್ರೈಸಸ್, ಆಕೆಯ ಸೋದರಿ ಸಂಗೀತಾ ಹೆಸರಿನಲ್ಲಿ ಹರ್ನಿತಾ ಕ್ರಿಯೇಷನ್ಸ್ ಹಾಗೂ ಆಪ್ತ ಸಿ.ಸಂತೋಷ್ ಹೆಸರಿನಲ್ಲಿ ಸೋಮೇಶ್ವರ ಎಂಟರ್ಪ್ರೈಸಸ್ ಎಂಬ ಕಂಪನಿಗಳನ್ನು ಸ್ಥಾಪಿಸಿ ಮಾಜಿ ಜಿಎಂ ನಾಗರಾಜಪ್ಪ ಹಣ ಲಪಟಾಯಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ.
ಭೋವಿ ನಿಗಮದ ಅಕ್ರಮ ಪ್ರಕರಣದ ತನಿಖೆಗೆ ಒಳಗಾಗಿದ್ದ ಜೀವಾ ಆತ್ಮಹತ್ಯೆ ಪ್ರಕರಣದ ಕುರಿತು ಸಿಸಿಬಿ ಎಸಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.