ಎಚ್.ಡಿ.ಕೋಟೆ: ತಾಲ್ಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ರೈತರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎರಡು ಕುರಿಗಳನ್ನು ಕೊಂದು ಹಾಕಿರುವ ಘಟನೆ ನಡೆದಿದೆ. ಗ್ರಾಮದ ರೈತ ನಿಕೋಲಾಸ್ ರಾಜ್ ಎಂಬವವರ ಮನೆಯಲ್ಲಿ ಎರಡು ಮೂರು ಕುರಿಗಳನ್ನು ಸಾಕಲಾಗಿತ್ತು.
ಜಮೀನಿನಲ್ಲಿ ಕುರಿ ಮತ್ತು ಹಸುಗಳನ್ನು ಮೇಯಿಸಿಕೊಂಡು ಬಂದು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದರು.ಆದರೆ ಗುರುವಾರ ಮಧ್ಯರಾತ್ರಿ ಚಿರತೆ ಬಂದು ಕುರಿಗಳ ಮೇಲೆ ದಾಳಿ ನಡೆಸಿ ಒಂದು ಕುರಿಯನ್ನು ಕೊಂದು, ರಕ್ತ ಕುಡಿದು ಮತ್ತೊಂದು ಕುರಿಯನ್ನು ಹೊತ್ತೊಯ್ದಿದೆ. .ಇದರಿಂದ ರೈತನಿಗೆ ಲಕ್ಷಾಂತರ ನಷ್ಟ ಸಂಭವಿಸಿದೆ.
ಚಿರತೆಯ ಆರ್ಭಟ ಮತ್ತು ದನ, ಕುರಿಗಳ ಕಿರುಚಾಟದಿಂದ ನಿವಾಸಿಗಳು ಆತಂಕಗೊಂಡು ಜೋರಾಗಿ ಚೀರಾಟ ನಡೆಸಿದ್ದರಿಂದ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಬೆಳಿಗ್ಗೆ ಅರಣ್ಯ ಅಧಿಕಾರಿಗಳಿಗೆ ವಿಚಾರ ತಿಳಿಸಿದಾಗ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.