ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲೂ ದಿಗ್ವಿಜಯ ಸಾಧಿಸಿರುವ ಕಾಂಗ್ರೆಸ್ ರಣೋತ್ಸಾಹದಲ್ಲಿದೆ. ಇದರ ನಡುವೆ ಕಾಂಗ್ರೆಸ್ನಲ್ಲಿ ಸಂಪುಟ ಪುನಾರಚನೆ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ನಾಯಕರ ನಿಗೂಢ ನಡೆ ಇಂತಹದೊಂದು ಚರ್ಚೆಗೆ ಕಾರಣ ಆಗಿದೆ. ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ. ಹೀಗಾಗಿ ಸಂಪುಟ ಸರ್ಜರಿಯ ಕುತೂಹಲ ಮತ್ತಷ್ಟು ಗರಿಗೆದರಿದೆ.
ಮಂತ್ರಿಗಳಿಗೆ ಸಂದೇಶ ಕೊಟ್ಟಿದ್ದೇವೆ ಎನ್ನುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಬುಧವಾರ ಸಂಪುಟ ಸರ್ಜರಿ ಸುಳಿವು ಕೊಟ್ಟಿದ್ದರು. ದೆಹಲಿಯಲ್ಲೇ ಅವ್ರು ಬೀಡು ಬಿಟ್ಟಿದ್ದು, ಹೈಕಮಾಂಡ್ ನಾಯಕರ ಜತೆಗೆ ಆಪರೇಷನ್ ಹಸ್ತ, ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಸಂಪುಟ ಪುನಾರಚನೆಯ ಚರ್ಚೆ ಇಂದು ನೆನ್ನೆಯದಲ್ಲ. ಈ ಹಿಂದೆಯೇ ಹೈಕಮಾಂಡ್ ರಾಜ್ಯ ಕೈ ನಾಯಕರ ಜತೆ ಚರ್ಚೆ ಮಾಡಿದೆಯಂತೆ. ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ಪುನಾರಚನೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಶೀಘ್ರದಲ್ಲೇ ಅಧಿಕೃತ ಸೂಚನೆ ನೀಡಲಿದೆ. ಈಗಾಗಲೇ ಹೈಕಮಾಂಡ್ ನಾಯಕರು ಸಿಎಂ, ಕೆಪಿಸಿಸಿ ಅಧ್ಯಕ್ಷರ ಬಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿದೆ. 1 ತಿಂಗಳ ಹಿಂದೆಯೇ ಸಂಪುಟ ಪುನಾರಚನೆಗೆ ಸೂಚನೆ ಕೊಟ್ಟಿದೆ. ಆದರೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕಾರಣಕ್ಕೆ ಸಿಎಂ ಸಮಯ ಕೋರಿದ್ದರು. ಹೀಗಾಗಿ ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ಪುನಾರಚನೆ ಬಹುತೇಕ ಪಕ್ಕ ಎನ್ನಲಾಗಿದೆ. ಕೆಲ ಶಾಸಕರು ಈಗಾಗಲೇ ದೆಹಲಿ ಮಟ್ಟದಲ್ಲೂ ಲಾಬಿ ನಡೆಸುತ್ತಿದ್ದು, ದೆಹಲಿ ನಾಯಕರನ್ನ ಭೇಟಿಯಾಗಿ ಮಾತುಕತೆ ಮಾಡುತ್ತಿದ್ದಾರೆ.