ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬಿಜೆಪಿ ಎಂಎಲ್ಸಿ ಸಿಟಿ ರವಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಫೆಬ್ರವರಿ 13ಕ್ಕೆ ಮುಂದೂಡಿದೆ. ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿಕೆ ಮಾಡಿದರು. ವಾದ, ಪ್ರತಿವಾದದ ವಿವರ ಇಲ್ಲಿದೆ.
ಎಫ್ಐಆರ್ ರದ್ದು ಕೋರಿ ಸಿಟಿ ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಿತು. ತನಿಖೆಯ ವ್ಯಾಪ್ತಿಯ ಪ್ರಶ್ನೆಯನ್ನು ತೀರ್ಮಾನಿಸಬೇಕಿದೆ ಎಂದು ಅಭಿಪ್ರಾಯಪಟ್ಟು ಫೆ.20 ರವರೆಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿ ದೂರುದಾರೆ ಲಕ್ಷ್ಮಿ ಹೆಬ್ಬಾಳ್ಕರ್ ನೋಟಿಸ್ ಜಾರಿ ಮಾಡಿದೆ.
ಸಿಟಿ ರವಿ ಪರ ವಕೀಲರ ವಾದವೇನು?
ಸದನದ ಸದಸ್ಯರಿಗೆ ನೀಡಿದ ರಕ್ಷಣೆ ಏನು? ಸಭಾಪತಿಗಳು ಪೀಠದಲ್ಲಿ ಇಲ್ಲದೆ ಇದ್ದ ಸಂದರ್ಭದಲ್ಲಿಯೂ ಅದು ಅನ್ವಯವಾಗುತ್ತದೆಯೇ? ಶಾಸಕಾಂಗವು ಈ ಪ್ರಕರಣದ ಬಗ್ಗೆ ಗಮನಹರಿಸಿ ತೀರ್ಪು ನೀಡಿದ ನಂತರ, ಸಿಐಡಿಯಂತಹ ಸಂಸ್ಥೆ ಇನ್ನೂ ತನಿಖೆ ನಡೆಸಬಹುದೇ ಎಂದು ಪ್ರಭುಲಿಂಗ ನಾವದಗಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ನಾಗಪ್ರಸನ್ನ, ಆದರೆ ಮಾತನಾಡಿದ ವಿಷಯಕ್ಕೂ ಶಾಸಕಾಂಗಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಆಗ ಸೀತಾ ಸೊರೇನ್ ಹಾಗೂ ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ನಾವದಗಿ ಉಲ್ಲೇಖಿಸಿದರು. ಸಂವಿಧಾನದ ಆರ್ಟಿಕಲ್ 194(2) ರ ಅನ್ವಯ ಸದನದಲ್ಲಿದ್ದಾಗ ಸದಸ್ಯರು ಅಲ್ಲಿನ ಕಾನೂನು ವ್ಯಾಪ್ತಿಗೇ ಬರುತ್ತಾರೆ. ಪರಿಸ್ಥಿತಿಯ ಆಧಾರದ ಮೇಲೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದರು. ಆರ್ಟಿಕಲ್ 194(2) ಶಾಸಕನಿಗೆ ನಿರ್ಭೀತಿಯಿಂದ ಮಾತನಾಡಲು ಅವಕಾಶ ನೀಡುತ್ತದೆ. ಅವರಿಗೆ ಸದನದ ಒಳಗೆ ಸಂಪೂರ್ಣ ಹಕ್ಕಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಏನನ್ನೂ ಮಾತನಾಡಲು ಸಂಪೂರ್ಣ ಸ್ವಾತಂತ್ರ್ಯ ಇದಯೇ? ಈ ಪ್ರಕರಣದಲ್ಲಿ ಆಡಿದ್ದಾರೆ ಎನ್ನಲಾದ ಮಾತುಗಳನ್ನೂ ಆಡಬಹುದೇ ಎಂದು ಪ್ರಶ್ನಿಸಿದರು.
ಮಾತನಾಡಿದ ವಿಷಯವನ್ನು ಕಾನೂನಿನಡಿಯಲ್ಲಿ ದೂಷಣೆ ಎಂದು ಪರಿಗಣಿಸಿದರೂ, ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಸದನ ಹೊಂದಿರುತ್ತದೆ ಮತ್ತು ಯಾವುದೇ ಬಾಹ್ಯ ಸಂಸ್ಥೆ ಅಲ್ಲ ಎಂದು ನಾವದಗಿ ವಾದ ಮಂಡಿಸಿದರು.
ಎಸ್ಪಿಪಿ ವಾದವೇನು?
ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಉಳಿದಿರುವ ಪ್ರಕ್ರಿಯೆಗಳ ಮೇಲೆ ವಿಧಿಸಲಾದ ತಡೆಯಾಜ್ಞೆಯನ್ನು ತೆರವು ಮಾಡಲು ಎಸ್ಪಿಪಿ ನ್ಯಾಯಾಲಯವನ್ನು ಮನವಿ ಮಾಡಿದರು. ಹೈಕೋರ್ಟ್ ಆದೇಶದ ಕಾರಣ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಕೈಗಳನ್ನು ಕಟ್ಟಿಹಾಕಿದಂತಾಗಿದೆ. ಸಿಟಿ ರವಿ ಅವರ ವಾಯ್ಸ್ ಸ್ಯಾಂಪಲ್ ಪಡೆಯುವುದಕ್ಕೆ ಸಂಬಂಧಿಸಿದ ಅರ್ಜಿ ಬಾಕಿ ಇದೆ ಎಂದರು.
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಫೆಬ್ರವರಿ 13ಕ್ಕೆ ನಿಗದಿಪಡಿಸಿದೆ. ಈ ಹಿಂದೆ ಸಿಟಿ ರವಿ ವಿರುದ್ಧ ಜನವರಿ 30 ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿತ್ತು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc