ಕೋಲಾರ: ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಿನ್ನದ ನಾಡಿನ ಹುಡುಗಿ ಕೋಲಾರದ ಯುವತಿಯೊಬ್ಬಳು ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ.
ಕೋಲಾರದ ಕೆ.ಎಂ. ಶ್ರುತಿ ಅವರು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಗಾಯಕಿಯಾಗಿ ಆಯ್ಕೆಯಾಗಿದ್ದಾರೆ. ಎನ್ಸಿಸಿ ಕೆಡೆಟ್ ಆಗಿರುವ ಶ್ರುತಿ ಅವರು ಬೆಂಗಳೂರಿನ ಅಂಬೇಡ್ಕರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಗೀತದಲ್ಲಿ ಜೂನಿಯರ್ ಹಾಗೂ ಸೀನಿಯರ್ ಪೂರ್ಣಗೊಳಿಸಿರುವ ಶ್ರುತಿ, ಸದ್ಯ ವಿದ್ವತ್ ಕಲಿಯುತ್ತಿದ್ದಾರೆ.
ಜ.26 ರಂದು ಗಣರಾಜ್ಯೋತ್ಸವದ ದಿನ ದೇಶದ ಗಮನ ಸೆಳೆಯುವ ಗಣರಾಜ್ಯೋತ್ಸವ ಪರೇಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ವರ್ಷ ಚಿನ್ನದ ನಾಡಿನ ಗಾಯಕಿ ಎನ್ಸಿಸಿ ಕೆಡೆಟ್ ಕೋಲಾರದ ಕೆ.ಎಂ.ಶ್ರುತಿ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಶಿಬಿರದಲ್ಲಿ ಮುಖ್ಯ ಗಾಯಕಿ ಅಂದರೆ ಲೀಡ್ ಸಿಂಗರ್ ಆಗಿ ಶ್ರುತಿಗೆ ಅವಕಾಶ ಸಿಕ್ಕಿದೆ.ಶ್ರುತಿ ಎನ್ಸಿಸಿ ಬೆಂಗಳೂರು ಗ್ರೂಪ್ ‘ಎ’ನಿಂದ ಆಯ್ಕೆಯಾಗಿದ್ದು, ಇವರು ಕರ್ನಾಟಕ ಗೋವಾ ಎನ್ಸಿಸಿ ನಿರ್ದೇಶನಾಲಯವನ್ನು ಪ್ರತಿನಿಧಿಸಲಿದ್ದಾರೆ.
ಸಂಗೀತ ಶಿಕ್ಷಕಿಯಾಗಿರುವ ಕೆ.ಎಂ.ಶ್ರುತಿ ಅವರು ಎನ್.ಮಹದೇವ್ ಹಾಗೂ ಸಿ.ಎನ್.ಕಸ್ತೂರಿ ಅವರ ಜೇಷ್ಠ ಪುತ್ರಿ. ಸದ್ಯ ಬೆಂಗಳೂರಿನ ನಾಗರಬಾವಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಇ. ಐದನೇ ಸೆಮಿಸ್ಟರ್ ಓದುತ್ತಿದ್ದಾರೆ. ಎನ್ಸಿಸಿ ಕೆಡೆಟ್ ಆಗಿರುವ ಶ್ರುತಿ ಅವರು ಪ್ರೌಢ ಶಿಕ್ಷಣವನ್ನು ಕೋಲಾರದ ಸುವರ್ಣ ಸೆಂಟ್ರಲ್ ಶಾಲೆಯಲ್ಲಿ ಪೂರ್ಣಗೊಳಿಸಿ, ವಿದ್ಯಾಜ್ಯೋತಿ ಶಾಲೆಯಲ್ಲಿ ಪಿಯುಸಿ ವ್ಯಾಸಾಂಗ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಅಂಬೇಡ್ಕರ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದಷ್ಟೇ ಶ್ರುತಿ ಎನ್ಸಿಸಿಗೆ ಸೇರಿದ್ದರು.
ಕಳೆದ ಆರು ತಿಂಗಳಿಂದ ವಿವಿಧೆಡೆ ಒಂಬತ್ತು ಶಿಬಿರಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದ ನಂತರ ಈ ಅವಕಾಶ ಶ್ರುತಿ ಅವರ ಪಾಲಿಗೆ ಒಲಿದು ಬಂದಿದೆ. ರಾಜ್ಯದಲ್ಲಿ ಸುಮಾರು 80 ಸಾವಿರ ಎನ್ಸಿಸಿ ಕೆಡೆಟ್ಗಳಿದ್ದಾರೆ. ಅವರಲ್ಲಿ ಶ್ರುತಿ ಕರ್ನಾಟಕ ಗೋವಾ ಎನ್ಸಿಸಿ ನಿರ್ದೇಶನಾಲಯ ಪ್ರತಿನಿಧಿಸಿಯಾಗಿ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ-ಗೋವಾ ಎನ್ಸಿಸಿ ನಿರ್ದೇಶನಾಲಯದಿಂದ ಶ್ರುತಿ ಸೇರಿದಂತೆ ಒಟ್ಟು 124 ಕೆಡೆಟ್ಗಳು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.