ಮಂಡ್ಯ: ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ‘ನಂದಿನಿ ಹಾಲು’ ಈಗ ರಾಜ್ಯದ ಆಚೆಗೂ ಕಾಲಿರಿಸಿದ್ದು, 6 ರಾಜ್ಯಗಳಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ನವದೆಹಲಿಯ ಮಾರುಕಟ್ಟೆಗೆ ಕರ್ನಾಟಕದ ಕೆಎಂಎಫ್ನ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರವೇಶವಾಗಿದೆ. ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು ಸಿಗಲಿದೆ.ಹೌದು, ಈಗ ಹಳ್ಳಿಯಿಂದ ದಿಲ್ಲಿವರೆಗೂ ‘ನಂದಿನಿ’ ಕ್ಷೀರಧಾರೆ ಹರಿಯುತ್ತಿದೆ. ‘ರಾಷ್ಟ್ರದ ರಾಜಧಾನಿ’ ದೆಹಲಿಗೆ ಮಂಡ್ಯದಿಂದ ನಂದಿನಿ ಹಾಲು ಪೂರೈಕೆಯಾದರೆ, ‘ವಾಣಿಜ್ಯ ರಾಜಧಾನಿ’ ಮುಂಬೈಗೆ ತುಮಕೂರಿನಿಂದ ಹಾಲು ಸಾಗಣೆಯಾಗುತ್ತಿದೆ.
ದೆಹಲಿಗೆ ಮಂಡ್ಯ ಕೆಎಂಎಫ್ ಹಾಲು ಪೂರೈಕೆ
ಭಾರತದಲ್ಲಿ ರೈತರ ಉಪಕಸುಬು ಪಶುಸಂಗೋಪನೆ, ಗುಜರಾತ್ನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘವನ್ನು ಆರಂಭಿಸಿದರು. ತಾನು ಹಿಂದೆ ಪಶುಸಂಗೋಪನಾ ಸಚಿವನಾಗಿ, ಕರ್ನಾಟಕ ಹಾಲು ಮಹಾ ಮಂಡಲದ ಅಧ್ಯಕ್ಷನೂ ಆಗಿ ಕೆಲಸ ಮಾಡಿದ್ದೆ. ಈಗ ದೇಶದ ರಾಜಧಾನಿ ದೆಹಲಿ ನಗರಕ್ಕೂ ಕರ್ನಾಟಕದ ಹಾಲು ಪೂರೈಕೆ ಶುರುವಾಗಿದೆ. ಮಂಡ್ಯ, ಕೆಎಂಎಫ್ನಿಂದ ಹಾಲು ಪೂರೈಕೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆ.ಎಂ.ಎಫ್) ‘ನಂದಿನಿ ಬ್ರಾಂಡ್’ ವಿಸ್ತರಿಸುವ ಉದ್ದೇಶದಿಂದ ರಾಜ್ಯದ ವಿವಿಧ ಹಾಲು ಉತ್ಪಾದಕರ ಒಕ್ಕೂಟಗಳಿಂದ 6 ರಾಜ್ಯಗಳಿಗೆ ನಿತ್ಯ 4.35 ಲಕ್ಷ ಲೀಟರ್ ಹಾಲು, 66 ಸಾವಿರ ಲೀಟರ್ ಮೊಸರು ಪೂರೈಸುತ್ತಿದೆ. ಇದರಿಂದ ನಿತ್ಯ 2.47 ಕೋಟಿ ವಹಿವಾಟು ನಡೆಸುತ್ತಿದೆ. ತಿಂಗಳಿಗೆ ಸರಾಸರಿ ₹75 ಕೋಟಿ ವಹಿವಾಟು ಇದೆ.
ಕರ್ನಾಟಕದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀಟರ್ಗೆ 32 ರೂಪಾಯಿಗೆ ಹಾಲು ಖರೀದಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂಪಾಯಿ ಪ್ರೋತ್ಸಾಹಧನವನ್ನು ನೀಡುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ 2 ರೂಪಾಯಿ ಇದ್ದ ಪ್ರೋತ್ಸಾಹಧನ, ನಂತರ 3 ರೂಪಾಯಿ ಆಯಿತು. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂಪಾಯಿಗೆ ಹೆಚ್ಚಿಸುವ ಘೋಷಣೆ ಮಾಡಿದೆ.
26 ಲಕ್ಷ ಹಾಲು ಉತ್ಪಾದಕರು:
ರಾಜ್ಯದ 15 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಡಿ, ಗ್ರಾಮೀಣ ಮಟ್ಟದಲ್ಲಿ ಕಾರ್ಯಾಚರಣೆಯಲ್ಲಿರುವ 15,779ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಎಂಎಫ್ 26.89 ಲಕ್ಷ ಹಾಲು ಉತ್ಪಾದಕರನ್ನು ಹೊಂದಿದೆ. ಮಂಡ್ಯಕ್ಕೆ 4ನೇ ಸ್ಥಾನ: ನಿತ್ಯ ಹಾಲು ಸಂಗ್ರಹಣೆಯಲ್ಲಿ ರಾಜ್ಯದಲ್ಲಿರುವ 15 ಹಾಲು ಒಕ್ಕೂಟಗಳ ಪೈಕಿ ಬೆಂಗಳೂರು (ಪ್ರಥಮ), ಹಾಸನ (ದ್ವಿತೀಯ), ಕೋಲಾರ (ತೃತೀಯ) ಹಾಗೂ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್) 4ನೇ ಸ್ಥಾನದಲ್ಲಿದೆ. ಮೈಸೂರು 6ನೇ ಸ್ಥಾನ ಮತ್ತು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ 9ನೇ ಸ್ಥಾನದಲ್ಲಿದೆ.