ವಿಜಯಪುರ: ವಿಜಯಪುರ ಜಿಲ್ಲೆಯ 18 ವರ್ಷದ ಯುವತಿಯೊಬ್ಬಳು ದೇಶದ ಅತ್ಯಂತ ಕಿರಿಯ ಪೈಲಟ್ ಆಗಿ ಇತಿಹಾಸ ನಿರ್ಮಿಸಿದ್ದು, ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಉದ್ಯಮಿ ಅಮೀನ್ ಹುಲ್ಲೂರ್ ಅವರ ಪುತ್ರಿ, 18 ವರ್ಷದ ಸಮೈರಾ ಹುಲ್ಲೂರು ಅವರು ಕಮರ್ಶಿಯಲ್ ಪೈಲಟ್ ಲೈಸನ್ಸ್ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದು, ಈ ಮೂಲಕ ವಿಜಯಪುರ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ.
ಸಮೀರಾ ಅವರ ವಾಯುಯಾನ ಪ್ರಯಾಣವು ವಿನೋದ್ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ ಆರು ತಿಂಗಳ ತರಬೇತಿ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಮತ್ತು ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಎಲ್ಲಾ ಸಿಪಿಎಲ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಉತ್ತೀರ್ಣರಾದರು.
ತರಬೇತಿಯು ಕಠಿಣವಾಗಿತ್ತು. ಆದರೆ, ಬೋಧಕರ ನಿರಂತರ ಬೆಂಬಲ ಮತ್ತು ಮಾರ್ಗದರ್ಶನದಿಂದ ಅದು ಸುಲಭವಾಯಿತು. ನನ್ನ ಸಾಧನೆಯ ಎಲ್ಲಾ ಶ್ರೇಯಸ್ಸು ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ವಿನೋದ್ ಯಾದವ್ ಅವರಿಗ ಸಲ್ಲುತ್ತದೆ ಎಂದು ಸಮೈರಾ ಹೇಳಿದ್ದಾರೆ.
ಸಮೈರಾಳ ಸಾಧನೆಗೆ ಜಿಲ್ಲೆ, ರಾಜ್ಯ ಹಾಗೂ ದೇಶದ ಹಲವೆಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಹೆಣ್ಣು ಮಕ್ಕಳನ್ನು ಕಡೆಗಣೆಸುವ ಜನರಿಗೆ ಸಮೈರಾ ಕುಟುಂಬ ಮಾದರಿ ಆಗಿದೆ. ಜೊತೆಗೆ ಇಂದಿನ ಕಾಲದ ಯುವ ಪೀಳಿಗೆಗೆ ಸಮೈರಾ ಸಾಧನೆ ಪ್ರೇರಣೆ ಆಗಿದೆ.
ಐತಿಹಾಸಿಕ ಜಿಲ್ಲೆಯಾಗಿ ವಿಜಯಪುರ ಜಗತ್ ವಿಖ್ಯಾತಿ ಪಡೆದಿದೆ. ಜೊತೆಗೆ ಜಿಲ್ಲೆಯ ಅನೇಕರು ರಾಜ್ಯ ಸೇರಿದಂತೆ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡೆ, ವಿಜ್ಞಾನ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಸಾಧನೆಗೈದವರಿದ್ದಾರೆ. ಇದೀಗ ಮತ್ತೊಂದು ಸಾಧನೆಯಿಂದ ಜಿಲ್ಲೆಯ ಹಾಗೂ ರಾಜ್ಯದ ಹಿರಿಮೆ ಹೆಚ್ಚಿದೆ.