ಚಿಕ್ಕಬಳ್ಳಾಪುರ: ಅಬ್ಬಬ್ಬಾ ಮೂರು ದಿನಗಳಿಂದ ಚಳಿಗೆ ಜನ ಗಡ ಗಡ ನಡುಗುವಂತಾಗಿದೆ.. ಬಿಸಿ ಬಿಸಿ ಕಾಫಿ ಟೀ ಕುಡಿದು ಬೆಚ್ಚಗೆ ಇದ್ರೆ ಸಾಕು ಅನಿಸುತ್ತಿದೆ.. ಅದ್ರಲ್ಲೂ ನಾನ್ ವೆಜ್ ಪ್ರಿಯರಿಗಂತೂ ಚಳಿಗೆ ಚಿಕನ್-ಮಟನ್ ತಿಂದು ಬೆಚ್ಚಗೆ ಇರೋಣ ಅಂತಿದ್ದಾರೆ. ಆದ್ರೆ ನಾನ್ ವೆಜ್ ಮಾಡಬೇಕು ಅಂದ್ರೆ ಮಸಾಲ ಮಾಂತ್ರಿಕ ಬೆಳ್ಳುಳ್ಳಿ ಬೇಕೇ ಬೇಕು. ದಿನೇ ದಿನೇ ಬೆಳ್ಳುಳ್ಳಿ ರೇಟ್ ದುಬಾರಿಯಾಗುತ್ತಿದೆ. ಇದ್ರಿಂದ ಮಾರುಕಟ್ಟೆಗೆ ಭಾರತ ಬ್ಯಾನ್ ಮಾಡಿರೋ ಚೀನಾ ಬೆಳ್ಳುಳ್ಳಿ ಎಂಟ್ರಿಯಾಗಿರೋ ಅನುಮಾನ ಮೂಡಿದ್ದು ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಬೆಳ್ಳುಳ್ಳಿ ದರ ಭಾರೀ ಏರಿಕೆಯಾಗಿದ್ದು, ಕೆಜಿಗೆ 400-500 ರೂ. ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ದಪ್ಪನೆಯ, ವಾಸನೆ ಮತ್ತು ರುಚಿ ಕಡಿಮೆ ಇರುವ ಬೆಳ್ಳುಳ್ಳಿ ಚೀನಾದಿಂದ ಬಂದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಭಾರತ ನಿಷೇಧಿಸಿರುವ ಚೈನೀಸ್ ಬೆಳ್ಳುಳ್ಳಿ ಕಳ್ಳ ಮಾರ್ಗದ ಮೂಲಕ ಪ್ರವೇಶಿಸುತ್ತಿರಬಹುದು ಎಂಬ ಆತಂಕ ಶುರುವಾಗಿದೆ.
ಅಂದ ಹಾಗೆ ದೇಸಿ ಬೆಳ್ಳುಳ್ಳಿ ರುಚಿ ಇರುತ್ತದೆ. ವಾಸನೆಯಲ್ಲಿ ಬಹಳಷ್ಟು ಘಾಟು ಇರುತ್ತದೆ. ಬಿಳಿ ಬಣ್ಣದಿಂದ ಕೂಡಿದ್ರೂ ಬೆಳ್ಳುಳ್ಳಿ ಎಸಳುಗಳು ಕಾರ್ನರ್ಗಳಲ್ಲಿ ಗುಲಾಬಿ ಕೆಂಬಣ್ಣದಿಂದ ಕೂಡಿರಲಿದೆ. ಆದ್ರೆ ಈ ದಪ್ಪನೆಯ ಬೆಳ್ಳುಳ್ಳಿ ಶುಭ್ರ ಬಿಳಿ ಬಣ್ಣದಿಂದ ಕೂಡಿದ್ದು, ವಾಸನೆ ರುಚಿ ಇಲ್ಲ, ದೇಸಿ ಬೆಳ್ಳುಳ್ಳಿಯಂತೆ ಘಾಟು ಸಹ ಇಲ್ಲ. ಇದ್ರಿಂದ ಇದು ಭಾರತ ನಿಷೇಧ ಮಾಡಿರೋ ಚೀನಾ ಬೆಳ್ಳುಳ್ಳಿ ಅನ್ನೋ ಅನುಮಾನ ಎಲ್ಲರನ್ನ ಕಾಡತೊಡಗಿದೆ. ಹಾಗಾಗಿ ಅಧಿಕಾರಿಗಳು ಸಹ ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಕ್ರಮ ಕೈಗೊಳ್ತೇವೆ ಅಂತಿದ್ದಾರೆ.
ಒಟ್ಟಿನಲ್ಲಿ ಬೆಳ್ಳುಳ್ಳಿ ಬೆಲೆ ದುಬಾರಿಯಾಗಿದ್ದೇ ದೇಶಕ್ಕೆ ಚೀನಾ ಗಾರ್ಲಿಕ್ ಕಳ್ಳ ಮಾರ್ಗದಲ್ಲಿ ಎಂಟ್ರಿಯಾಗ್ತಿರೋ ಬಲವಾದ ಅನುಮಾನಗಳು ಮೂಡುತ್ತಿವೆ. ಸಗಟು ವ್ಯಾಪಾರಿಗಳು ಕಡಿಮೆ ಬೆಲೆ ಅಂತ ಚೈನೀಸ್ ಬೆಳ್ಳುಳ್ಳಿ ತಂದು ಮಾರಾಟ ಮಾಡ್ತಿದ್ದಾರೆ ಎನ್ನಲಾಗಿದೆ. ಇದ್ರಿಂದ ಸಂಬಂಧಪಟ್ಟ ಅಧಿಕಾರಿಗಳು ಭಾರತ ಬ್ಯಾನ್ ಮಾಡಿರೋ ರಾಸಾಯನಿಕಯುಕ್ತ ಚೈನೀಸ್ ಬೆಳ್ಳುಳ್ಳಿಯ ಮಾರಾಟಕ್ಕೆ ಬ್ರೇಕ್ ಹಾಕಬೇಕಿದೆ.