ಬೆಂಗಳೂರು: ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಿಬ್ಬಂದಿ ಒಳಗೊಂಡಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಗರಣದಲ್ಲಿ ಪ್ರತಿಷ್ಠಿತ ಕಾಲೇಜುಗಳು ಭಾಗಿಯಾಗಿರುವ ಶಂಕೆ ಇದೆ. 2024-2025ನೇ ಸಾಲಿನ ವಿವಿಧ ಪದವಿಪೂರ್ವ ಎಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಪಟ್ಟಂತೆ ಸೀಟ್ ಬ್ಲಾಕಿಂಗ್ ಹಗರಣದ ಬಗ್ಗೆ ಕೆಇಎ ಅಧಿಕಾರಿಗಳು ನವೆಂಬರ್ 13 ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಮೂರು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯನ್ನು ವಿಚಾರಣೆ ನಡೆಸಿ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಒಟ್ಟು 10 ಜನರನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳ ಪೈಕಿ ಕೆಲವರನ್ನು ಹರ್ಷ, ಪ್ರಕಾಶ್, ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್, ಅವಿನಾಶ್ ಎಂದು ಗುರುತಿಸಲಾಗಿದೆ.
ಕೆಇಎ (KEA) ನೌಕರ ಅವಿನಾಶ್ನ ಸಹಾಯದಿಂದ ಪಡೆದ ಪಾಸ್ವರ್ಡ್ನಿಂದ ಸರ್ಕಾರಿ ಸೀಟ್ ಪಡೆದು ಕಾಲೇಜು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಸೀಟ್ ಬ್ಲಾಕ್ ಮಾಡುತ್ತಿದ್ದರು. ಆ ಸೀಟ್ಗಳನ್ನು ಲಕ್ಷಾಂತರ ರೂ.ಗೆ ಮ್ಯಾನೇಜ್ಮೆಂಟ್ ಕೋಟಾದಡಿ ಬೇರೆಯವರಿಗೆ ಡೀಲ್ ಮಾಡುತ್ತಿದ್ದರು. ಕಾಲೇಜಿನ ಮ್ಯಾನೇಜ್ಮೆಂಟ್ ಹಾಗೂ ಮಧ್ಯವರ್ತಿಗಳ ಸಹಾಯದಿಂದ ಡೀಲ್ ಮಾಡುವುದರಲ್ಲಿ ತೊಡಗಿದ್ದರು.
ಕರ್ನಾಟಕ ಪರೀಕ್ಷಾ ಪ್ರಾಧೀಕಾರದ ಕೌನ್ಸಿಲಿಂಗ್ಗೆ ಆಯ್ಕೆಯಾಗಿ ಕಾಲೇಜು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಸೀಟುಗಳು ಮತ್ತು ಸರಕಾರದ ಅಡಿಯಲ್ಲಿ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆದ ಬಳಿಕ ದಾಖಲಾತಿ ಪಡೆಯದೆ ಇದ್ದ ವಿದ್ಯಾರ್ಥಿಗಳನ್ನು ಈ ಆರೋಪಿಗಳು ಬ್ಲಾಕ್ ಮಾಡುತ್ತಿದ್ದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಸದ್ಯ ಮಲ್ಲೇಶ್ವರಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.