ಬೆಂಗಳೂರು :ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಬದಲಾಗಿ ಫೆಬ್ರವರಿ-2025 ರ ತಿಂಗಳಿನಿಂದ ಜಾರಿಗೆ ಬರುವಂತೆ, ಅರ್ಹ ಫಲಾನುಭವಿಗಳಿಗೆ 05 ಕೆ.ಜಿ ಅಕ್ಕಿಯನ್ನ, ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲು ಸರ್ಕಾರ ಆದೇಶಿಸಿದೆ.
ಅದರಂತೆ ಫೆಬ್ರವರಿ-2025 ತಿಂಗಳಲ್ಲಿ ವಿತರಿಸಬೇಕಾದ ಅಕ್ಕಿ ಪ್ರಮಾಣವನ್ನು ಸೇರಿ ಮಾರ್ಚ್-2025 ತಿಂಗಳಲ್ಲಿ ವಿತರಿಸಲಾಗುವುದು. ಮಾರ್ಚ್ 1 ರಿಂದ ಮಾರ್ಚ್ 31 ರ ವರಗೆ ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ-ಕೆವೈಸಿ ಮಾಡುವ ಹಾಗೂ ಪಡಿತರ ವಿತರಣೆ ಕಾರ್ಯ ಜರುಗಲಿದ್ದು, ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಬೇಕು.
ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ಯಾವುದೇ ಶುಲ್ಕ ನೀಡುವಂತಿಲ್ಲ. ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಿ ಕ್ರಮಕೈಗೊಳ್ಳಲಾಗುವುದು. ಅನಧಿಕೃತವಾಗಿ ಕಾಳಸಂತೆಯಲ್ಲಿ ಆಹಾರಧಾನ್ಯವನ್ನು ದಾಸ್ತಾನು/ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಕ್ರಮ ಕೈಗೊಳ್ಳಲಾಗುವುದು.
ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.