ಬೆಂಗಳೂರು: ನಗರದಲ್ಲಿ ಮತ್ತೆ ನಮ್ಮ ಮೆಟ್ರೋ ಕಾಮಗಾರಿ ವೇಳೆ ಭೀಕರ ದುರಂತ ಸಂಭವಿಸಿದೆ. ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದ ಈ ಅಪಘಾತದಲ್ಲಿ ಆಟೋ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೃಹತ್ ವೈಯಾಡೆಕ್ಟ್ (ತಡೆಗೋಡೆ) ಸಾಗಿಸುತ್ತಿದ್ದ ಲಾರಿ ತಿರುವು ಪಡೆಯುವ ವೇಳೆ ಅತಿಯಾದ ಓವರ್‌ಲೋಡ್ ಅಥವಾ ನಿರ್ಲಕ್ಷ್ಯದ ಕಾರಣದಿಂದಾಗಿ ವೈಯಾಡೆಕ್ಟ್ ನೆಲಕ್ಕುರುಳಿದಿದ್ದು, ಪಕ್ಕದಲ್ಲೇ ನಿಂತಿದ್ದ ಆಟೋ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
35 ವರ್ಷದ ಆಟೋ ಚಾಲಕ ಕಾಸಿಂ ಸಾಬ್ ಎಂಬುವವರು ಈ ದುರಂತದಲ್ಲಿ ಸಾವನ್ನಪ್ಪಿದ ದುರ್ದೈವಿ. ಘಟನೆ ಮಧ್ಯರಾತ್ರಿ ಸುಮಾರು 12 ಗಂಟೆ ಸುಮಾರಿಗೆ ನಡೆದಿದೆ. ಆಟೋ ಚಾಲಕ ಪ್ಯಾಸೆಂಜರ್‌ನ್ನು ಇಳಿಸಿದ ಬಳಿಕ ಹಣ ಪಡೆಯುತ್ತಿದ್ದ ಸಮಯದಲ್ಲೇ, ವೈಯಾಡೆಕ್ಟ್ ಆಟೋ ಮೇಲೆ ಉರುಳಿದ್ದು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಪ್ಯಾಸೆಂಜರ್ ಆ ಸಂದರ್ಭದಲ್ಲಿ ಆಟೋದಿಂದ ಇಳಿದಿರುವುದು ಮತ್ತೊಂದು ಅನಾಹುತ ತಪ್ಪಿದೆ.
ಈ ಅವಘಡವನ್ನು ಕಂಡ ಜನರು ತಕ್ಷಣವೇ ರಕ್ಷಣೆಗೆ ಮುಂದಾದರೂ, ಬೃಹತ್ ತಡೆಗೋಡೆ ತೆಗೆದು ಹಾಕಲು ಕ್ರೇನ್ ಅಗತ್ಯವಿತ್ತು. ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದರೂ, ಕ್ರೇನ್‌ನ ಮೂಲಕ ವೈಯಾಡೆಕ್ಟ್ ತೆರವು ಕಾರ್ಯಾಚರಣೆ ನಡೆಯಿತು. ಎರಡು ಗಂಟೆಗಳ ಕಾಲ ತಡೆಗೋಡೆನ್ನು ಸ್ಥಳಾಂತರಿಸಿ ಮೃತದೇಹವನ್ನು ಹೊರ ತೆಗೆಯಲಾಯಿತು. ಇದಾದ ಬಳಿಕ ಸ್ಥಳೀಯರು ಮತ್ತು ಮೃತ ವ್ಯಕ್ತಿಯ ಕುಟುಂಬಸ್ಥರು ಬಿಎಂಆರ್ಸಿಎಲ್ ಹಾಗೂ ಕಾಮಗಾರಿ ಗುತ್ತಿಗೆ ಪಡೆದಿದ್ದ ಎನ್‌ಸಿಸಿ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರು ಲಾರಿ ಒನ್ ವೇನಲ್ಲಿ ಬಂದಿತ್ತು, ಸೆಕ್ಯುರಿಟಿ ವಾಹನ ಇರಲಿಲ್ಲ, ಸಾರ್ವಜನಿಕರನ್ನು ಎಚ್ಚರಿಸುವ ಯಾವುದೇ ಸೂಚನಾ ಫಲಕ ಇರಲಿಲ್ಲ ಎಂಬ ಹಲವು ಆರೋಪಗಳನ್ನು ಹೊರಹಾಕಿದ್ದಾರೆ. ಈ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣವೆಂದು ಆರೋಪಿಸಿದ್ದಾರೆ.
ಲಾರಿ ಚಾಲಕ ದುರಂತದ ನಂತರ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತ್ತೆಗೆ ಬಲೆ ಬೀಸಿದ್ದಾರೆ. ಇಂದು ಸ್ಥಳೀಯರು ಮತ್ತು ಸಂಬಂಧಿತ ಸಂಘಟನೆಗಳು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಬಿಎಂಆರ್ಸಿಎಲ್ ಹಾಗೂ ಎನ್‌ಸಿಸಿ ಕಂಪನಿಯಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.