ಬೆಂಗಳೂರು, ಏಪ್ರಿಲ್ 16: ರಾಜ್ಯದ ಜನತೆಗೆ ಸರಕಾರಿ ಸಾರಿಗೆ ದರ ಏರಿಕೆಯ ಬೆನ್ನಲ್ಲೇ ಮತ್ತೊಂದು ಶಾಕ್ ಎದುರಾಗಲಿದೆ. ಇದೀಗ ಖಾಸಗಿ ಬಸ್‌ಗಳ ಟಿಕೆಟ್ ದರವನ್ನು ಶೇ.15 ರಿಂದ ಶೇ.20ರಷ್ಟು ಏರಿಸುವ ಸಾಧ್ಯತೆ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆ, ಸರ್ಕಾರದ ಶಕ್ತಿ ಯೋಜನೆಯ ಪರಿಣಾಮ, ಮತ್ತು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ದರ ಏರಿಕೆಯನ್ನು ಖಾಸಗಿ ಬಸ್ ಮಾಲೀಕರು ಈ ನಿರ್ಧಾರಕ್ಕೆ ಕಾರಣಗಳಾಗಿ ಮುಂದಿಟ್ಟಿದ್ದಾರೆ.
ಖಾಸಗಿ ಬಸ್ ಮಾಲೀಕರು ಹೇಳುವಂತೆ, ಪ್ರತಿ ಬಸ್ ನಿರ್ವಹಣೆಗೆ ಪ್ರತಿದಿನವು ಸರಾಸರಿ 18,000 ರಿಂದ 20,000 ರೂಪಾಯಿವರೆಗೆ ವೆಚ್ಚವಾಗುತ್ತಿದೆ. ಡೀಸೆಲ್ ದರದಲ್ಲಿ ನಿರಂತರ ಏರಿಕೆ, ಇತರ ನಿರ್ವಹಣಾ ವೆಚ್ಚಗಳಿಂದಾಗಿ ಟಿಕೆಟ್ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಸರ್ಕಾರ ಡೀಸೆಲ್ ಮೇಲಿನ ತೆರಿಗೆಗಳನ್ನು ಇಳಿಸುವುದಿಲ್ಲವಾದರೆ, ಟಿಕೆಟ್ ದರ ಹೆಚ್ಚಳ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಗೆ ನಾವಿದ್ದೇವೆ” ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ತರಾಜ್ ಶರ್ಮಾ ತಿಳಿಸಿದ್ದಾರೆ.
ಶಕ್ತಿ ಯೋಜನೆಯಿಂದ ಖಾಸಗಿ ಬಸ್‌ಗಳಿಗೆ ನಷ್ಟ?
ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗುತ್ತಿದೆ. ಈ ಯೋಜನೆಯು ಸಾರ್ವಜನಿಕ ಸಾರಿಗೆ ಸಂಸ್ಥೆಗಳಿಗೆ ಲಾಭದಾಯಕವಾದರೂ, ಖಾಸಗಿ ಬಸ್ ಮಾಲೀಕರಿಗೆ ಇದು ಹೊಡೆತವಾಗಿದೆ ಎಂದು ದೂರಿದ್ದಾರೆ. ಶಕ್ತಿ ಯೋಜನೆಯ ಆರಂಭದಿಂದ ಇಂದಿನವರೆಗೆ ಸುಮಾರು 429 ಕೋಟಿ ಟಿಕೆಟ್‌ಗಳನ್ನು ವಿತರಿಸಲಾಗಿದೆ. ಇದರ ಪರಿಣಾಮವಾಗಿ ಖಾಸಗಿ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯದಲ್ಲಿ ಕುಸಿತ ಕಂಡುಬಂದಿದೆ.
ಪ್ರಯಾಣಿಕರಿಂದ ತೀವ್ರ ವಿರೋಧ
ಸಾಮಾನ್ಯ ಜನತೆಗೆ ಈ ಹೊಸ ದರ ಏರಿಕೆ ತೀವ್ರ ಆಘಾತವನ್ನುಂಟುಮಾಡಲಿದೆ. ಹಬ್ಬದ ಸಮಯದಲ್ಲಿ ಟಿಕೆಟ್ ದರ ಏರಿಸುವುದು ಖಾಸಗಿ ಬಸ್‌ಗಳಿಗೆ ಸಾಮಾನ್ಯವಾಗಿದೆ. ಆದರೆ ಈಗ ದರ ಹೆಚ್ಚಳ ಮಾಡುವ ನಿರ್ಧಾರ ಜನಸಾಮಾನ್ಯರಿಗೆ ಬೃಹತ್ ಆರ್ಥಿಕ ಹೊರೆ ಆಗಲಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಗೆ ಪ್ರತಿದಿನವೂ ಸಾವಿರಾರು ಜನರು ಖಾಸಗಿ ಬಸ್‌ಗಳ ಮೂಲಕ ಪ್ರಯಾಣಿಸುತ್ತಿದ್ದಾರೆ. ಈಗಾಗಲೇ ಮೆಟ್ರೋ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಟಿಕೆಟ್ ದರ ಏರಿಕೆಯ ನಂತರ ಖಾಸಗಿ ಬಸ್‌ಗಳ ದರ ಹೆಚ್ಚಳವು ಸಾರ್ವಜನಿಕರ ಮೇಲೆ ಎರಡುಪಟ್ಟು ಬಿಸಿಲಾಗಲಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯ ಸರ್ಕಾರ ಈ ದರ ಏರಿಕೆಗೆ ಅವಕಾಶ ನೀಡುತ್ತದೆಯೇ ಅಥವಾ ಖಾಸಗಿ ಬಸ್ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸಮಾಧಾನಕಾರಿ ನಿರ್ಧಾರಕ್ಕೆ ಬರುತ್ತದೆಯೇ ಎಂಬುದು ಕಾದು ನೋಡಬೇಕಾಗಿದೆ. ಸಾರ್ವಜನಿಕರು ಈ ನಿರ್ಧಾರವನ್ನು ವಿರೋಧಿಸುತ್ತಿದ್ದು, ಸರಕಾರವು ತಕ್ಷಣ ಹಸ್ತಕ್ಷೇಪ ಮಾಡಬೇಕೆಂಬ ಆಗ್ರಹವೂ ವ್ಯಕ್ತವಾಗುತ್ತಿದೆ.