ಗ್ರೇಟರ್ ಬೆಂಗಳೂರು ಭೂಸ್ವಾಧೀನಕ್ಕೆ ಮಾಜಿ ಪ್ರಧಾನಿ ಹೆಚ್‌‌.ಡಿ ದೇವೇಗೌಡ ವಿರೋಧ

Untitled design 2025 04 24t174820.302

ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿಗಳು ಪತ್ರ ಬರೆದಿದ್ದಾರೆ.

ಮಾಜಿ ಪ್ರಧಾನಿಗಳು ಪತ್ರದಲ್ಲಿ ಏನಿದೆ? 

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಡದಿ ಹೋಬಳಿಯ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿನ ಹಲವಾರು ಸರ್ವೆ ನಂಬರುಗಳಲ್ಲಿರುವ ಸುಮಾರು 10 ಸಾವಿರ ಎಕರೆ ಜಮೀನನ್ನು ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೌನ್‌ಶಿಪ್ ಯೋಜನೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವುದಾಗಿ ವರದಿಯಾಗಿದೆ.

ADVERTISEMENT
ADVERTISEMENT

ರಾಮನಗರ ಜಿಲ್ಲೆಯ ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ ಕೈಗಾರಿಕಾಭಿವೃದ್ಧಿಗಾಗಿ ಸಾವಿರಾರು ಎಕರೆ ರೈತರ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕಾಭಿವೃದ್ಧಿ ಪ್ರದೇಶವನ್ನು ಸ್ಥಾಪಿಸಿದೆ.

ರಾಮನಗರ ಜಿಲ್ಲೆ ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂದಂತೆ ಇದ್ದು, ಇದ್ದು ಹಲವಾರು ಉದ್ಯಮಗಳು ಖಾಸಗಿಯಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ.

ಉಳಿದಂತೆ ಇರುವ ಕೃಷಿ ಭೂಮಿಯಲ್ಲಿ ರೈತರು ತಮ್ಮ ಜೀವನ ನಿರ್ವಹಣೆಗೆ ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ಕೃಷಿಗಾಗಿ ಅವಲಂಬಿತರಾಗಿದ್ದಾರೆ. ಬಹುಪಾಲು ರೈತರು ಅತೀ ಸಣ್ಣ ಮತ್ತು ಸಣ್ಣ ಹಿಡುವಳಿದಾರರಾಗಿದ್ದು ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಮತ್ತು ಜಮೀನಿನ ಸುತ್ತ ಲಕ್ಷಾಂತರ ಮರ-ಗಿಡಗಳನ್ನು ಬೆಳೆಸಿದ್ದಾರೆ. ಇಂತಹ ಪ್ರದೇಶವನ್ನು ಟೌನ್‌ಶಿಪ್ ಯೋಜನೆಗೆ ಸ್ವಾಧೀನ ಪಡಿಸಿಕೊಂಡರೆ ಪರಿಸರಕ್ಕೆ ಅಪಾರ ಹಾನಿ ಉಂಟಾಗುತ್ತದೆ.

ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಗೆ ದಕ್ಕೆ ಉಂಟಾಗಿ, ರೈತ ಕುಟುಂಬದ ಯುವಕರು ನಿರುದ್ಯೋಗಿಗಳಾಗಿ ಬೀದಿಪಾಲಾಗುತ್ತಾರೆ. ಈ ಬಡ ರೈತರ ಜೀವನೋಪಾಯಕ್ಕೆ ಕೃಷಿ ಭೂಮಿಯೇ ಆಧಾರವಾಗಿದೆ. ಇದಲ್ಲದೆ, ಕರ್ನಾಟಕ ಹೌಸಿಂಗ್ ಬೋರ್ಡ್ ಹಾಗೂ ಇತರೆ ಸರ್ಕಾರಿ ಪ್ರಾಧಿಕಾರಗಳು ರಾಮನಗರ ಜಿಲ್ಲೆಯ ಬಿಡದಿ ಸುತ್ತ-ಮುತ್ತಲು ಹಲವಾರು ವಸತಿ ಯೋಜನೆಗಳನ್ನು ರೂಪಿಸಿ, ರೈತರ ಜಮೀನ್ನು ಸ್ವಾಧೀನಪಡಿಸಿಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ.

ಅದ್ದರಿಂದ, ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಟೌನ್‌ಶಿಪ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ರೈತರ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಬಡ ರೈತರ ಹಿತದೃಷ್ಠಿಯಿಂದ ಕೈಬಿಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಮಾಜಿ ಪ್ರಧಾನಿಗಳು ಪತ್ರದಲ್ಲಿ ಹೇಳಿದ್ದಾರೆ.

Exit mobile version