ಬೆಂಗಳೂರು, ಏಪ್ರಿಲ್ 24: ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಪೂರ್ವ ಮುಂಗಾರು ಮಳೆ ಕೊಂಚ ತಗ್ಗಿದ್ದು, ಉತ್ತರ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಮಳೆ ಈಗಾಗಲೇ ಆರಂಭವಾಗಿದೆ. ಬುಧವಾರದಂದು ಉತ್ತರ ಕರ್ನಾಟಕದ ಹಲವೆಡೆ ಉತ್ತಮ ಮಳೆ ದಾಖಲಾಗಿದ್ದು, ಹವಾಮಾನ ಇಲಾಖೆ ಮುಂದಿನ 3ರಿಂದ 5 ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ ಏಪ್ರಿಲ್ 27ರಿಂದ 29ರ ವರೆಗೆ ಬೆಂಗಳೂರಿನಲ್ಲಿ ವ್ಯಾಪಕ ಮಳೆ ಆಗಲಿದೆ. ಈ ದಿನಗಳಲ್ಲಿ ಸಂಜೆ ಬಳಿಕ ಗುಡುಗು ಮಿಂಚು ಸಹಿತ ಜೋರು ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ನಗರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆ. KSNDMC (ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ) ನೀಡಿರುವ ಮಾಹಿತಿ ಪ್ರಕಾರ, ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಉಷ್ಣತೆಯ ಅಲೆ ಎಚ್ಚರಿಕೆ
ರಾಜ್ಯದ ಹಲವೆಡೆ ಈಗಾಗಲೇ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಕಲಬುರಗಿ, ಬೀದರ್, ಹಾವೇರಿ, ಬಳ್ಳಾರಿ, ದಕ್ಷಿಣ ಕನ್ನಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ತೀವ್ರ ಇಳಿಕೆ ಕಂಡುಬಂದಿಲ್ಲ. ಇಡೀ ದಿನ ಉಷ್ಣ ಅಲೆ, ಸೆಕೆ, ಮಂಜಿನ ವಾತಾವರಣದೊಂದಿಗೆ ಇರಲಿದೆ.
ಭಾರೀ ಮಳೆ ದಾಖಲಾಗಿರುವ ಪ್ರದೇಶಗಳು
ಕಳೆದ 24 ಗಂಟೆಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕವಾಗಿ 64 ಮಿಲಿ ಮೀಟರ್ ಮಳೆ ದಾಖಲಾಗಿದ್ದು, ಇದರೊಂದಿಗೆ ದಕ್ಷಿಣ ಕನ್ನಡದಲ್ಲಿ 57.5 ಮಿ.ಮೀ, ಧಾರವಾಡದಲ್ಲಿ 44.5 ಮಿ.ಮೀ, ಉಡುಪಿ – 31.5 ಮಿ.ಮೀ, ಚಿಕ್ಕಮಗಳೂರು – 24.5 ಮಿ.ಮೀ, ವಿಜಯಪುರದಲ್ಲಿ 23.5 ಮಿ.ಮೀ ಮಳೆ ಸುರಿದಿದೆ. ಶಿವಮೊಗ್ಗ, ಉತ್ತರ ಕನ್ನಡ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳೂ ಸಾಧಾರಣ ಮಳೆಯ ದಾಖಲೆಗೆ ಸಾಕ್ಷಿಯಾಗಿವೆ.
ಚಂಡಮಾರುತದ ಪ್ರಭಾವ
ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೊಂಚ ಮಳೆಯ ಪ್ರಮಾಣ ಕಡಿಮೆಯಾಗಿದೆಯಾದರೂ, ಸಮುದ್ರ ಮಟ್ಟದಿಂದ ಸರಾಸರಿ 0.9 ಕಿಮೀ ಎತ್ತರದಲ್ಲಿ ಹರಿಯುವ ವೈಪರೀತ್ಯದ ಗಾಳಿಯ ಪರಿಣಾಮದಿಂದಾಗಿ ಮುಂಬರುವ ವಾರದ ಒಳಗೆ ಮತ್ತೆ ಭಾರೀ ಮಳೆಯ ಸಂಭವವಿದೆ. ತಮಿಳುನಾಡಿನ ದಕ್ಷಿಣ ಕರಾವಳಿಯ ಮೇಲೆ 1.5 ಕಿಮೀ ರಿಂದ 3.1 ಕಿಮೀ ಎತ್ತರದ ವ್ಯಾಪ್ತಿಯಲ್ಲಿ ಚಂಡಮಾರುತ ಪರಿಚಲನೆ ಇದೆ. ಈ ವೈಪರೀತ್ಯದ ಗಾಳಿಯ ಪರಿಣಾಮದಿಂದಾಗಿ ಚತ್ತೀಸ್‌ಗಢದಿಂದ ಮನ್ನಾರ್ ಕೊಲ್ಲಿಗೆವರೆಗೆ ತೆಲಂಗಾಣ, ವಿದರ್ಭ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ವಾತಾವರಣದ ಅಸ್ಥಿರತೆ ಹೆಚ್ಚಾಗಿದೆ.
ಉತ್ತರ ಕರ್ನಾಟಕದ ಪರಿಸ್ಥಿತಿ
ವಿಜಯಪುರ, ಕೊಪ್ಪಳ, ಯಾದಗಿರಿ, ಕಲಬುರಗಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಗುಡುಗು ಮಿಂಚು ಸಹಿತ ಲಘು ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 50-60 ಕಿಲೋಮೀಟರ್‌ನಷ್ಟು ಬೀಸಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಜಿಲ್ಲಾವಾರು ಮುನ್ಸೂಚನೆ
-
ದಾವಣಗೆರೆ, ಚಿತ್ರದುರ್ಗ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ, ಬಳ್ಳಾರಿ, ತುಮಕೂರು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣದಿಂದ ಜೋರು ಮಳೆ ಸಾಧ್ಯವಿದೆ.
-
ಕಲಬುರಗಿ, ಬೀದರ್, ಕಾರವಾರ, ಹಾವೇರಿ, ಬೆಂಗಳೂರು ಭಾಗಗಳಲ್ಲಿ ಮಳೆಯ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಚಂಡಮಾರುತ ಪರಿಚಲನೆ, ವೈಪರೀತ್ಯದ ಗಾಳಿ ಹಾಗೂ ಸಮುದ್ರ ಮಟ್ಟದ ವಾತಾವರಣ ಬದಲಾವಣೆಯ ಪರಿಣಾಮದಿಂದಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಬಹುಪಾಲು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ.