ಮಂಗಳೂರು (ಏ.19): ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ರಥೋತ್ಸವದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದು ಬಿದ್ದಿದೆ. ಇದರ ಪರಿಣಾಮ ಭಕ್ತರಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ವ್ಯಕ್ತಿಗೂ ಗಂಭೀರ ಗಾಯಗಳಾಗಿಲ್ಲ.
ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸಲಾಗುವ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಳದ ರಥೋತ್ಸವಕ್ಕೆ ಈ ಬಾರಿಯೂ ಸಹ ಸಾವಿರಾರು ಭಕ್ತರು ಭಾಗಿಯಾಗಿದ್ದರು. ದೇವಸ್ಥಾನದಲ್ಲಿ ನಡೆದ ಜಾತ್ರಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಭಕ್ತರು ದೇವಿಯನ್ನು ದರ್ಶನ ಮಾಡಲು ಹರಿದುಬಂದಿದ್ದರು. ಈ ಉತ್ಸವದ ಸಂದರ್ಭದಲ್ಲಿ ತೇರು ರಾತ್ರಿ ಸುಮಾರು 1.40 ರಿಂದ 2.00 ಗಂಟೆ ವೇಳೆಗೆ ತೇರಿನ ಮೇಲ್ಭಾಗವು ಕುಸಿದ ಘಟನೆ ನಡೆದಿದೆ.
ಅವಘಡ ಸಂಭವಿಸಿದ ವೇಳೆ ಅರ್ಚಕರು ತೇರಿನಲ್ಲೇ ಇದ್ದರೂ, ಅವರಿಗೆ ಯಾವುದೇ ಗಾಯಗಳಾಗಿಲ್ಲ. ಇದು ದೇವಿಯ ಕೃಪೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ. ತೇರಿನ ಮೇಲ್ಭಾಗ ಕುಸಿದ ನಂತರ ತಕ್ಷಣವೇ ಭಕ್ತರೊಂದಿಗೆ ಸ್ಥಳೀಯ ವ್ಯವಸ್ಥಾಪಕರು ಮತ್ತು ಸೇವಕರು ಸಹಾಯಕ್ಕೆ ಧಾವಿಸಿದರು. ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು: ಇಬ್ಬರು ಸಾ*ವು, ಇಬ್ಬರಿಗೆ ಗಂಭೀರ ಗಾಯ
ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಮದ್ದೂರಮ್ಮ ದೇವಿಯ ಜಾತ್ರೆಯಲ್ಲಿ ಭಾರೀ ದುರಂತ ಸಂಭವಿಸಿದೆ. ಮದ್ದೂರಮ್ಮ ದೇವಿಯ ತೇರಿನ ಉತ್ಸವದಲ್ಲಿ ನಡೆದ ಅವಘಡದಿಂದಾಗಿ ಇಬ್ಬರು ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆ ಮಾರ್ಚ್ 22 ರಂದು ಸಂಭವಿಸಿದ್ದು, ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಆತಂಕ ಉಂಟುಮಾಡಿದೆ.
ಅವಘಡದ ಹಿನ್ನೆಲೆ:
ಪ್ರತಿ ವರ್ಷ ನಡೆಯುವ ಮದ್ದೂರಮ್ಮ ದೇವಿಯ ಜಾತ್ರೆಯು ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಲಕ್ಷಾಂತರ ಭಕ್ತರು ಈ ಪವಿತ್ರ ಉತ್ಸವಕ್ಕೆ ಆಗಮಿಸುತ್ತಾರೆ. ಜಾತ್ರೆಯ ಪ್ರಮುಖ ಭಾಗವಾದ ತೇರನ್ನು ಎಳೆದು ದೇವಿಯ ಸನ್ನಿಧಿಗೆ ತಲುಪಿಸಲಾಗುತ್ತದೆ. ಈ ಬಾರಿಯ ತೇರನ್ನು ಎಳೆಯುವಾಗ ಭಾರೀ ಗಾಳಿ ಮತ್ತು ಮಳೆಯ ಪರಿಣಾಮದಿಂದ ನಿಯಂತ್ರಣ ತಪ್ಪಿ ತೇರು ಧರೆಗೆ ಉರುಳಿತು.
ಈ ದುರಂತದಲ್ಲಿ ತಮಿಳುನಾಡಿನ ಹೊಸೂರು ಮೂಲದ 24 ವರ್ಷದ ಲೋಹಿತ್ ಮತ್ತು ಬೆಂಗಳೂರಿನ ಕೆಂಗೇರಿ ಮೂಲದ 14 ವರ್ಷದ ಜ್ಯೋತಿ ಎಂಬುವವರು ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಗಾಯಗೊಂಡಿದ್ದು, ಅವರಲ್ಲಿ ರಾಯಸಂದ್ರ ಗ್ರಾಮದ ರಾಕೇಶ್ ಮತ್ತು ಮತ್ತೋರ್ವ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ದುರ್ಘಟನೆ ಹೇಗೆ ನಡೆದಿದೆ:
ಜಾತ್ರೆಯ ಸಂದರ್ಭ, ತೇರುವನ್ನು ಎಳೆಯಲು ನೂರಾರು ಎತ್ತುಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿತ್ತು. ದೇವಾಲಯದ ಬಳಿ ತೇರು ನಿಲ್ಲಿಸಲಾಗಿತ್ತು. ಸಂಜೆ ವೇಳೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ತೇರು ನಿಯಂತ್ರಣ ತಪ್ಪಿ ಧರೆಗೆ ಉರುಳಿದೆ. ಪರಿಣಾಮ, ತೇರಿನ ಕೆಳಗೆ ಸಿಲುಕಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಲೋಹಿತ್ ಮತ್ತು ಜ್ಯೋತಿ ಮೃತಪಟ್ಟಿದ್ದಾರೆ.
ಹೊಸೂರು ಮೂಲದ ಲೋಹಿತ್ ತಮ್ಮ ಕುಟುಂಬದ ಜೊತೆ ಜಾತ್ರೆಗೆ ಆಗಮಿಸಿದ್ದರು. ಜ್ಯೋತಿ ಕುಟುಂಬದ ಜೊತೆ ಜಾತ್ರೆಯಲ್ಲಿ ಸಮೋಸ ಮಾರಲು ಬಂದಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುರಂತದ ಕಾರಣವನ್ನು ವಿಶ್ಲೇಷಿಸಲು ತನಿಖೆ ನಡೆಯುತ್ತಿದೆ. ಜಾತ್ರೆಯ ಆಯೋಜಕರೂ ಸೇರಿದಂತೆ ಸಂಬಂಧಪಟ್ಟವರು ಈ ಅವಘಡದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಭವಿಷ್ಯದಲ್ಲಿ ಇಂತಹ ದುರಂತಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.