ವೈಯಕ್ತಿಕ ದ್ವೇಷದ ಶಂಕೆ: ನಗರಸಭೆ ಮಾಜಿ ಸದಸ್ಯನ ಬರ್ಬರ ಹ*ತ್ಯೆ

Untitled design 2025 04 20t123240.846
ADVERTISEMENT
ADVERTISEMENT

ಕಾರವಾರ, ಏಪ್ರಿಲ್ 20: ನಗರಸಭಾ ಮಾಜಿ ಸದಸ್ಯನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ನಡೆದಿದೆ. ನಗರಸಭಾ ಮಾಜಿ ಸದಸ್ಯ ಹಾಗೂ ಸಿವಿಲ್ ಗುತ್ತಿಗೆದಾರ ಸತೀಶ್ ಕೋಳಂಕರ್ ಎಂಬುವವರನ್ನು ದುಷ್ಕರ್ಮಿಗಳು ಚಾಕು ಇರಿದು ಹತ್ಯೆ ಮಾಡಿದ್ದಾರೆ.

ಸತೀಶ್ ಕೋಳಂಕರ್ ಅವರು ಪ್ರತಿದಿನದಂತೆ ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗಿದ್ದ ಸಂದರ್ಭ ದುಷ್ಕರ್ಮಿಗಳಿಂದ ಚಾಕು ಇರಿದು ಕೊಲೆ ಮಾಡಲಾಗಿದೆ. ತಕ್ಷಣ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಾರುಣ ಸಾವನ್ನಪ್ಪಿದ್ದಾರೆ. ಕೊಲೆಯ ಹಿಂದೆ ವೈಯಕ್ತಿಕ ದ್ವೇಷವೇ ಕಾರಣವೆಂದು ಶಂಕಿಸಲಾಗುತ್ತಿದೆ.

ಘಟನೆಯ ನಂತರ ಕಾರವಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಈ ಕುರಿತು ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ. ನಾರಾಯಣ್ ಮಾಧ್ಯಮದವರೊಂದಿಗೆ ಮಾತನಾಡಿ, “ಸತೀಶ್ ಕೋಳಂಕರ್ ಅವರು ರೌಡಿ ಶೀಟರ್ ಆಗಿದ್ದು, ಅವರ ವಿರುದ್ಧ 9ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಕೊಲೆಯ ಹಿಂದಿರುವ ಕಾರಣ ವೈಯಕ್ತಿಕ ದ್ವೇಷ ಹಾಗೂ ಹಣದ ವ್ಯವಹಾರ” ಎಂದು ಹೇಳಿದ್ದಾರೆ.

ಹಣದ ಲೆಕ್ಕಾಚಾರವೇ ಕೊಲೆಗೆ ಕಾರಣ?

ಪ್ರಾಥಮಿಕ ತನಿಖೆಯಲ್ಲಿ ಸತೀಶ್ ಅವರು ಎರಡು ಲಕ್ಷ ರೂಪಾಯಿ ಹಣವನ್ನು ಯಾರೋ ವ್ಯಕ್ತಿಗಳಿಗೆ ಸಾಲವಾಗಿ ನೀಡಿದ್ರು ಎಂಬ ಮಾಹಿತಿ ಲಭಿಸಿದ್ದು, ಆ ಹಣವನ್ನು ಮರಳಿ ಪಡೆಯುವ ವಿಚಾರವಾಗಿ ಹಲವು ದಿನಗಳಿಂದ ಗಲಾಟೆ ನಡೆಯುತ್ತಿತ್ತು. ಕೆಲವು ದಿನಗಳ ಹಿಂದೆ ಕಾರವಾರದ ಪ್ರೀಮಿಯರ್ ಹೋಟೆಲ್‌ನಲ್ಲಿ ಹಣ ವಾಪಸ್ ಕೊಡುವ ವಿಚಾರವಾಗಿ ಜಗಳ ನಡೆದಿದ್ದು, ಇದೇ ವಿಚಾರಕ್ಕೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯಯಾಗಿರುವ ಶಂಕೆ ಇದೆ. “ಆರೋಪಿಗಳ ಬಗ್ಗೆ ನಮ್ಮ ಬಳಿ ಖಚಿತ ಮಾಹಿತಿ ಇದೆ. ಶೀಘ್ರದಲ್ಲಿ ಬಂಧಿಸಲಾಗುವುದು. ನಗರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆ” ಎಂದು ಎಸ್.ಪಿ. ತಿಳಿಸಿದ್ದಾರೆ.

ಸತೀಶ್ ಕೋಳಂಕರ್ ಅವರ ಮಗಳು ಪೂರ್ಣಿಮಾ ಮಾಧ್ಯಮದೊಂದಿಗೆ ಮಾತನಾಡಿ, “ನಿತೇಶ್ ತಾಂಡೆಲ್ ಮತ್ತು ದರ್ಶನ ಎಂಬವರು ಸೇರಿ ನನ್ನ ತಂದೆಯ ಹತ್ಯೆ ಮಾಡಿದ್ದಾರೆ. ನಾನು ಇದನ್ನು ರಕ್ತದಲ್ಲಿ ಬರೆದು ಹೇಳಬಹುದು. 10 ದಿನಗಳ ಹಿಂದೆ ಪ್ರೀಮಿಯರ್ ಹೋಟೆಲ್‌ನಲ್ಲಿ ನನ್ನ ತಂದೆಯ ಮೇಲೆ ಹಲ್ಲೆ ಮಾಡಲಾಗಿತ್ತು. ಅವರ ಮುಖ ಸಂಪೂರ್ಣ ಕೆಂಪಾಗಿತ್ತು. ಅವರೇ ಹಲವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದರು”.

“ಇಂದು ಬೆಳಿಗ್ಗೆ ನನ್ನ ತಂದೆ ಸ್ನಾನಮಾಡಿ ವಾಯುವಿಹಾರಕ್ಕೆ ತೆರಳಿದ್ದರು. ಆ ವೇಳೆಯೇ ಚಾಕು ಇರಿದು ಕೊಲೆ ಮಾಡಿದ್ದಾರೆ. ನಿತೇಶ್ ಎಂಬವನೇ ಈ ಕೃತ್ಯಕ್ಕೆ ಜವಾಬ್ದಾರರಾಗಿದ್ದಾರೆ. ಅವರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ, ಆದರೆ ನನ್ನ ತಂದೆಗೆ ಅವರೊಂದಿಗೆ ಯಾವುದೇ ವ್ಯವಹಾರವಿಲ್ಲ. ಕ್ಷುಲ್ಲಕ ಕಾರಣಕ್ಕೆ ಈ ರೀತಿಯ ಭೀಕರ ಕೃತ್ಯ ನಡೆದಿದೆ” ಎಂದು ಅವರು ಹೇಳಿದರು.

Exit mobile version