ಮುಸ್ಲಿಮರಿಗೆ ಶೇ.4 ಮೀಸಲಾತಿಯನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇದನ್ನು ನಾವು ವಿರೋಧಿಸುತ್ತೇವೆ. ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಿದ್ದೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಸ್ಲಿಂ ಬಂಧುಗಳಿಗೆ ಶೇ 4ರಷ್ಟು ಮೀಸಲಾತಿ ಹಿಂದೆ ಇತ್ತು. ಧಾರ್ಮಿಕ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶ ಇಲ್ಲ, ಧಾರ್ಮಿಕ ಮೀಸಲಾತಿ ನೀಡಿದರೆ ಅದು ಸಂವಿಧಾನಕ್ಕೆ ವಿರುದ್ಧವಾದ ನಡೆ ಎಂದರು.
ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಾಗ ಧಾರ್ಮಿಕ ಮೀಸಲಾತಿಯನ್ನು ಹಿಂದಕ್ಕೆ ಪಡೆಯಲಾಗಿತ್ತು. ಕಾಂಗ್ರೆಸ್ಸಿನವರು ತಾವು ಅಧಿಕಾರಕ್ಕೆ ಬಂದರೆ ಮತ್ತೆ ಧಾರ್ಮಿಕ ಮೀಸಲಾತಿ ನೀಡುವುದಾಗಿ ಘೋಷಿಸಿದ್ದರು. ಈಗ ಗುತ್ತಿಗೆಯಲ್ಲಿ ಶೇ 4 ಮೀಸಲಾತಿಯನ್ನು ಕೊಟ್ಟಿದ್ದಾರೆ. ಇದು ಕಾನೂನುಬಾಹಿರ, ಸಂವಿಧಾನ ವಿರೋಧಿ ಎಂದು ಆಕ್ಷೇಪಿಸಿದರು.
ನಮ್ಮ ರಾಷ್ಟ್ರೀಯ ನಾಯಕರು ಕೂಡ ಇದಕ್ಕೆ ಉತ್ತರ ನೀಡಿದ್ದಾರೆ. ಜೈನರು ಮತ್ತು ಇತರ ಅಲ್ಪಸಂಖ್ಯಾತರನ್ನು ನೆಪಕ್ಕಾಗಿ ಸೇರಿಸಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಓಲೈಕೆ ರಾಜಕಾರಣಕ್ಕಾಗಿ ಮತ್ತು ಮತಬ್ಯಾಂಕ್‌ನ್ನು ಯಥಾಸ್ಥಿತಿ ಉಳಿಸಿಕೊಳ್ಳುವ ಉದ್ದೇಶದಿಂದ ನೀವು ಈ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದೀರಿ ಎಂದು ಟೀಕಿಸಿದರು. ಮೊದಲು ನೀವು ಶೇ 4 ಕೊಟ್ಟದ್ದನ್ನು ನಾವು ರದ್ದು ಮಾಡಿದ್ದೆವು. ಜೈನರು ಸೇರಿ ಇತರರೆಲ್ಲ ಸೇರಿದ ಮೇಲೆ ಶೇ 4 ಯಾಕಿದೆ? ಮುಸಲ್ಮಾನ ಬಂಧುಗಳಿಗೆ ಕೊಡಬೇಕೆನ್ನುವುದೇ ಅವರ ಉದ್ದೇಶ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ದೇಶವನ್ನು ಕೆಡಿಸುವ ಕೆಲಸ ಎಂದು ದೂರಿದರು.
ಇದು ದೇಶವಿರೋಧಿ ನೀತಿ ಎಂದು ನಮ್ಮ ರಾಷ್ಟ್ರೀಯ ನಾಯಕರು ಹೇಳಿದ್ದಾರೆ. ನಿನ್ನೆ, ಮೊನ್ನೆ ಸಾಮಾಜಿಕ ಜಾಲತಾಣಗಳು, ಪತ್ರಿಕೆಗಳಲ್ಲಿ ರಾರಾಜಿಸುತ್ತಿದೆ. ನಾವು ಈಗಾಗಲೇ ಪಶ್ಚಿಮ ಬಂಗಾಲದಲ್ಲಿ ಶೇ 41 ದಾಟಿದ್ದೇವೆ. ನಮಗೆ ಯಾರ ಹಂಗೂ ಬೇಕಿಲ್ಲ ನಾವೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ. 1947ರಲ್ಲಿ ನಮಗೆ ಸ್ವಾತಂತ್ರ್ಯ ಬಂದಿದೆ. ಆವತ್ತು ಈ ದೇಶ ವಿಭಜನೆ ಆಗಿತ್ತು. ಈಗ 2047ಕ್ಕೆ 100 ವರ್ಷ ತುಂಬಿದಾಗ ನಾವು ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದನ್ನು ಯಾರು ಹೇಳುತ್ತಿದ್ದಾರೆ ಎಂದು ಕೇಳಿದರು.
ಮುಸಲ್ಮಾನ ಬಂಧುಗಳಿಂದಲೇ ಈ ದೇಶಕ್ಕೆ ಗಂಡಾಂತರ ಇದೆ ಎಂದು ನಾನು ಹೇಳುತ್ತಿಲ್ಲ. ಆದರೆ, ಮುಸ್ಲಿಮರ ಜೊತೆಗೇ ಇದ್ದು ಮುಸ್ಲಿಂ ಮನಸ್ಥಿತಿ ಇರುವ ಹಿಂದೂಗಳಿಂದ ಈ ದೇಶಕ್ಕೆ ಗಂಡಾಂತರ ಇದೆ ಎಂದರು.
ಮುಸ್ಲಿಮರಿಗೆ ಮೀಸಲಾತಿ ವಿರುದ್ಧ ಬಿಜೆಪಿ ಹೋರಾಟ: ಛಲವಾದಿ ನಾರಾಯಣಸ್ವಾಮಿ!

ADVERTISEMENT
ADVERTISEMENT