ಬೆಂಗಳೂರು, ಏ.22: “ಬಿಜೆಪಿ ಶಾಸಕ ಮುನಿರತ್ನ ಇದೇ ರೀತಿ ನಮ್ಮ ವಿರುದ್ಧ ಇಲ್ಲಸಲ್ಲದ್ದನ್ನು ಮಾತನಾಡುವುದು ಮುಂದುವರೆಸಿದರೆ, ಆತನ ವಿರುದ್ಧ ಇರುವ ಪ್ರಕರಣದ ಮಾಹಿತಿಗಳನ್ನು ರಾಜರಾಜೇಶ್ವರಿ ನಗರ ಕ್ಷೇತ್ರದ ಪ್ರತಿ ಮನೆ ಮನೆಗೆ ಹಂಚಬೇಕಾಗುತ್ತದೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದರು.
ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಂಗಳವಾರ ಮಾತನಾಡಿದರು.
“ಆತನ ಕರ್ಮಾಕಾಂಡಗಳನ್ನು ನಮ್ಮ ಕಾರ್ಯಕರ್ತರು ಕೇವಲ ಒಂದು ದಿನ ಹಂಚಿ ಸುಮ್ಮನಾಗುವುದಿಲ್ಲ, ನಿರಂತರವಾಗಿ ಹಂಚಲಿದ್ದಾರೆ. ಒಕ್ಕಲಿಗರ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯಲು ಆತನಿಗೆ ನಾಚಿಕೆಯಾಗುವುದಿಲ್ಲವೇ? ಮತಕ್ಕಾಗಿ ದಲಿತರನ್ನು ಬಳಸಿಕೊಂಡು ಅವರಿಗೆ ಅವಾಚ್ಯವಾಗಿ ನಿಂದಿಸುತ್ತಾನೆ. ಮಾಧ್ಯಮದವರ ಮುಂದೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ನಾನು ಮಾಧ್ಯಮ ನಡೆಸುತ್ತಿದ್ದೇನೆ, ನನ್ನ ಬಗ್ಗೆಯೇ ಮಾತನಾಡುತ್ತೀರಾ, ನನ್ನ ಮೇಲೆ ಕೇಸ್ ಹಾಕುತ್ತೀರಾ ಎಂದು ಬೆದರಿಕೆ ಹಾಕುತ್ತಾನೆ” ಎಂದು ಹರಿಹಾಯ್ದರು.
“ಮುನಿರತ್ನ ವಿರುದ್ಧ ಸಾಕಷ್ಟು ದಾಖಲೆ ಇಟ್ಟುಕೊಂಡಿದ್ದೀರಿ ಎಂದು ಕೇಳಿದಾಗ, “ಆತ ಬಾಯಿ ಬಡಿದುಕೊಳ್ಳುತ್ತಿದ್ದಾನೆ ಎಂದು ನೀವು ನನಗೆ ಕೇಳಿದಿರಿ. ನಾನು ಮಂಗಳವಾರ ಉತ್ತರ ಕೊಡುತ್ತೇನೆ ಎಂದು ಹೇಳಿದೆ. ಹೀಗಾಗಿ ಆತನ ಚಾರ್ಜ್ ಶೀಟ್ ಗಳನ್ನು ಆರು ಆವೃತ್ತಿಗಳಾಗಿ ನಿಮ್ಮ ಮುಂದೆ ಇಟ್ಟಿದ್ದೇನೆ. ಆತನ ವಿಚಾರವನ್ನು ಎಲ್ಲಿಂದ ಶುರು ಮಾಡಲಿ? ಆತನ ಕಾಮಗಾರಿಯ ಕಾಂಪೌಂಡ್ ವಾಲ್ ಬಿದ್ದು ವಿದ್ಯಾರ್ಥಿನಿ ಸತ್ತ ವಿಚಾರವಾಗಿ ಮಾತನಾಡಲೇ? ಆ ಸಂದರ್ಭದಲ್ಲಿ ಆತನ ವಿರುದ್ಧ ಕನ್ನಡಪ್ರಭ ಪತ್ರಿಕೆಯಲ್ಲಿ ನೂರು ಸಂಚಿಕೆಗಳು ಬಂದಿದ್ದವು. ಇನ್ನು ಬಿಬಿಎಂಪಿಯಲ್ಲಿ ಬೆಂಕಿ ಬಿತ್ತಲ್ಲ ಅದರ ಬಗ್ಗೆ ಮಾತನಾಡಲೇ?” ಎಂದು ಪ್ರಶ್ನಿಸಿದರು.
ಹಳೆಯದು ಬೇಡ ಹೊಸ ಪ್ರಕರಣದ ಬಗ್ಗೆ ಹೇಳಿ ಎಂದಾಗ, “ನೀವು ಮರೆತುಹೋಗುತ್ತೀರಲ್ಲಾ. ನಿಮಗೆ ಆತ ಯಾರು ಎಂದು ಪರಿಚಯ ಮಾಡಬೇಕಾದರೆ ಹಳೆಯ ವಿಚಾರ ಹೇಳಬೇಕಲ್ಲವೇ? ರಾಜರಾಜೇಶ್ವರಿನಗರದ ಜನ ಶಾಸಕ, ಮಂತ್ರಿ ಮಾಡಿದರು ಎಂದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಒಂದು ಹೆಣ್ಣುಮಗಳನ್ನು ಐದು ಬಾರಿ ಅತ್ಯಾಚಾರ ಮಾಡಿರುವ ಬಗ್ಗೆ ವರದಿಗಳಿವೆ ಎಂದು ಹೇಳಲೇ? ಅವರು ಬಿಜೆಪಿಯ ಕಿರೀಟ ಎಂದು ಹೇಳಲೇ?” ಎಂದು ತಿಳಿಸಿದರು.
ದೂರುದಾರರ ಆಣೆ ಪ್ರಮಾಣ ಸವಾಲು ಸ್ವೀಕರಿಸಲಿಲ್ಲ ಯಾಕೆ?
ಆಣೆ ಪ್ರಮಾಣದ ಸವಾಲಿನ ಬಗ್ಗೆ ಕೇಳಿದಾಗ, “ಆತ ಯಾರ ಮೇಲೆ ಆಣೆ ಪ್ರಮಾಣ ಮಾಡಿಲ್ಲ? ನೀವು ಹೋದರೆ ನಿಮ್ಮ ಮೇಲೂ ಆಣೆ ಪ್ರಮಾಣ ಮಾಡುತ್ತಾನೆ. ಆತ ಆಣೆ ಪ್ರಮಾಣ ಮಾಡುವುದರಲ್ಲಿ ನಿಪುಣ. ದೂರುದಾರರೇ ಆದಿ ಚುಂಚನಗಿರಿ ಮಠದಲ್ಲಿ ಆಣೆ ಪ್ರಮಾಣಕ್ಕೆ ಕರೆದಿದ್ದರಲ್ಲ. ಅಲ್ಲಿಗೆ ಹೋಗಿ ಆಣೆ ಪ್ರಮಾಣ ಮಾಡಬೇಕಿತ್ತು. ವಿಧಾನಸೌಧದ 344, 345ನೇ ಕೊಠಡಿಯಲ್ಲಿ ಅತ್ಯಾಚಾರ ಮಾಡಲಾಗಿದೆ ಎಂಬ ಹೇಳಿಕೆಯನ್ನು ಮಾಧ್ಯಮಗಳು ಮುಚ್ಚಿಟ್ಟುಕೊಂಡಿದ್ದೀರಲ್ಲಾ ಅದು ಸರಿಯೇ? ಈ ವಿಚಾರವನ್ನು ನೀವು ಸಾರ್ವಜನಿಕರಿಗೆ ತಿಳಿಸುತ್ತಿಲ್ಲವಲ್ಲ ಎಂಬ ವ್ಯಥೆಯಾಗುತ್ತಿದೆ. ವಿಧಾನಸೌಧ ಕಟ್ಟಿರುವುದು ಏಕೆ? ರಾಜ್ಯದ ಜನರ ಕಷ್ಟಸುಖ ನೋಡಲು, ರಾಜ್ಯದ ಹಿತ ಕಾಯಲು. ಹೀಗಾಗಿ ಅದು ರಾಜ್ಯದ ಹಿರಿಮೆಯ ಪ್ರತೀಕವಾಗಿದೆ. ಅಂತಹ ವಿಧಾನಸೌಧದಲ್ಲಿ ಈತ ಇಂತಹ ಹೀನ ಕೃತ್ಯ ಮಾಡಿದ್ದಾನೆ. ಈ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಅವರು ಆತನನ್ನು ಚಂಗ್ಲು ಎಂದು ಕರೆದಿದ್ದಾರೆ. ಆತನನ್ನು ಜತೆಯಲ್ಲಿ ಇಟ್ಟುಕೊಳ್ಳಲು ಬಿಜೆಪಿಯವರಿಗೆ ನಾಚಿಕೆ ಇಲ್ಲವೇ? ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲು ಗೊತ್ತಿಲ್ಲವೇ? ಹಾಗಿದ್ದರೆ ಇಂತಹ ಕೃತ್ಯಕ್ಕೆ ಅವರು ಬೆಂಬಲ ನೀಡುತ್ತಾರಾ?” ಎಂದು ವಾಗ್ದಾಳಿ ನಡೆಸಿದರು.
ಮುನಿರತ್ನ ಅಮಾನತುಗೊಂಡಿರುವ ಶಾಸಕ
“ಏಡ್ಸ್ ಪ್ರಕರಣದಲ್ಲಿ ಸೋಂಕಿತರನ್ನು ಬಳಸಿ ಬೇರೆಯವರಿಗೆ ಏಡ್ಸ್ ಹರಡಿಸಲು ಷಡ್ಯಂತ್ರ ರೂಪಿಸಿರುವ ಬಗ್ಗೆ ವರದಿಗಳಿವೆಯಲ್ಲ. ಉಪಮುಖ್ಯಮಂತ್ರಿಗಳು ನನ್ನ ಕ್ಷೇತ್ರದಲ್ಲಿ ಬಂದು ಪೋಸ್ಟರ್ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಾನೆ. ಆತ ಅಮಾನತುಗೊಂಡಿರುವ ಶಾಸಕ. ಆತನನ್ನು ಯಾವುದಕ್ಕೂ ಕರೆಯದೇ ಕೆಲಸ ಮಾಡಬೇಕು. ಉಪಮುಖ್ಯಮಂತ್ರಿಗಳು ಗೌರವಯುತವಾಗಿ ಎಲ್ಲಾ ಶಾಸಕರನ್ನು ಕರೆದಿದ್ದಾರೆ. ತಾನು ಅಮಾನತುಗೊಂಡಿದ್ದೇನೆ ಎಂದು ಆತನಿಗೆ ತಿಳಿದಿಲ್ಲವೇ? ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಲು ಆತನಿಗೆ ಅರ್ಹತೆಯಿಲ್ಲ. ಅಮಾನತುಗೊಂಡ ನಂತರ ಸಮಿತಿಗಳ ಸಭೆ, ಪ್ರಕ್ರಿಯೆ, ಶಿಷ್ಟಾಚಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ” ಎಂದು ತಿಳಿಸಿದರು.
ಇಡಿ ಹೆಸರೇಳಿ ಅಧಿಕಾರಿಗಳಿಗೆ ಬೆದರಿಕೆ
“ಆತ ಟ್ಯಾಬ್ಲೆಟ್ ತಗೋತಿನಿ ಎಂದು ಹೇಳುತ್ತಾನೆ. ನಿದ್ದೆ ಬರುವುದಿಲ್ಲ ಹೀಗಾಗಿ ತಗೋತಾನೆ. ಬೆಳಗಿನ ಜಾವ 4 ಗಂಟೆಯಲ್ಲೂ ಯಾರಿಗೆ ಏನು ಮಾಡಬೇಕು ಎಂದು ಸ್ಕೆಚ್ ಹಾಕುವ ನೀಚ ಪ್ರವೃತ್ತಿ ಇರುವಂತಹವನು ಆತ. ವೋಟರ್ ಐಡಿ ಪ್ರಕರಣದಲ್ಲಿ ಏನೆಲ್ಲಾ ಆಗಿದೆ, ಆತ ಯಾರಿಗೆಲ್ಲಾ ಲಂಚ ಕೊಟ್ಟಿದ್ದಾನೆ ಎಂದು ಚರ್ಚೆ ಮಾಡಿಸೋಣವೇ? ಮಾತೆತ್ತಿದರೆ ರಾಜ್ಯಪಾಲರ ಕಚೇರಿ ಗೊತ್ತು, ಸಿಬಿಐ, ಇಡಿಯವರು ಗೊತ್ತು ಎಂದು ಹೇಳುತ್ತಾನೆ. ರಾಜ್ಯಪಾಲರು ಈತನನ್ನು ಗೇಟ್ ಒಳಗೂ ಬಿಟ್ಟುಕೊಳ್ಳಬಾರದಿತ್ತು. ಇಡಿ ತೋರಿಸಿ ಅಧಿಕಾರಿಗಳನ್ನು ಬೆದರಿಸುತ್ತಾನೆ. ಇಡಿಗೆ ದೂರು ನೀಡಲಿ, ನಾವು ಇಡಿ ನೋಡಿಲ್ಲವೇ? ಇವನ ಕ್ಷೇತ್ರದಲ್ಲಿ ಬೋರ್ ವೆಲ್ ಹಗರಣ ನಡೆದು, ಬೋರ್ ವೆಲ್ ಇಲ್ಲ ಎಂದು ಸಾಬೀತಾಯ್ತು. ನಂತರ ರಾತ್ರೋರಾತ್ರಿ ಬೋರ್ ವೆಲ್ ಕೊರೆದ. 250 ಕೋಟಿ ಅಕ್ರಮ ಬಿಲ್ ಪ್ರಕರಣದಲ್ಲಿ ಲೋಕಾಯುಕ್ತರ ತನಿಖೆಗೆ ಹೆದರೆ ರಾತ್ರೋರಾತ್ರಿ ರಸ್ತೆಗೆ ಡಾಂಬಾರ್ ಹಾಕಿಸಿದ. ಇಷ್ಟೆಲ್ಲಾ ಮಾಡಿ ಇನ್ನೊಬ್ಬರ ಬಗ್ಗೆ ಮಾತನಾಡಲು ನಾಚಿಕೆಯಾಗುವುದಿಲ್ಲವೇ?” ಎಂದು ಕಿಡಿಕಾರಿದರು.
ಮೊಟ್ಟೆಯಲ್ಲಿ ಹೊಡೆಸಿಕೊಂಡು ಮೆಂಟಲ್ ಆಗಿದ್ದಾನೆ
“ಲಂಚ ಕೇಳುವುದು, ಒಕ್ಕಲಿಗರ ಮನೆ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವುದು ಈತ. ಶೂಟಿಂಗ್ ಮಾಡಲು ಹೋಗಿ ಮೊಟ್ಟೆಯಲ್ಲಿ ಹೊಡೆಸಿಕೊಂಡು ಮೆಂಟಲ್ ಆಗಿದ್ದಾನೆ. ಆತನ ಬಗ್ಗೆ ಮಾತನಾಡಬಾರದು ಎಂದು ಇದ್ದರೆ ಇಲ್ಲದ್ದೇ ಮಾತನಾಡುತ್ತಿದ್ದಾನೆ. ಸಿದ್ದರಾಮಯ್ಯ ಅವರ, ಕುಮಾರಸ್ವಾಮಿ ಅವರ, ಶಿವಕುಮಾರ್ ಅವರ ಬಳಿ ಕಾಲು ಕಟ್ಟಿಕೊಳ್ಳುವುದನ್ನು ಮಾಡುತ್ತಾನೆ. ಈತನಿಗೆ ಮಾನ ಮರ್ಯಾದೆ ಇದೆಯಾ? ಪ್ರಧಾನಮಂತ್ರಿಗಳು ಹಾಗೂ ಅವರ ತಾಯಿ ಬಗ್ಗೆ ಹಾಡಿಹೊಗಳಿರುವ ವಿಡಿಯೋಗಳಿವೆ. ಪ್ರಧಾನಮಂತ್ರಿ ಮನೆಯಲ್ಲಿ 132 ಕೊಠಡಿಗಳಿವೆ ಆದರೂ ತಾಯಿ, ಹೆಂಡತಿಗೆ ಊಟ ಹಾಕಲು ಆಗುವುದಿಲ್ಲ ಎಂದವನು ಈತ. ತನ್ನ ಅಪ್ಪ ಅಮ್ಮನ ಸಮಾಧಿಗೆ ಪೂಜೆ ಮಾಡದವನು, ಬೇರೆಯವರ ಸಮಾಧಿಗೆ ಹೋಗಿ ಪೂಜೆ ಮಾಡುತ್ತಾನೆ. ಎಂತಹಾ ಕಲಾವಿದ? ಏನೆಲ್ಲಾ ಕಲಿತಿದ್ದಾನೆ ಅಬ್ಬಬ್ಬಾ” ಎಂದು ವಾಗ್ದಾಳಿ ನಡೆಸಿದರು.
ಆತ ರಾಜಕೀಯವಾಗಿ ಆರೋಪ ಮಾಡುತ್ತಿದ್ದು ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದಾಗ, “ನಾಯಿ ರೀತಿ ಬೊಗಳುವವರಿಗೆ ಕಾನೂನೇನಿದೆ? ಕಾನೂನು ಮೀರಿದ ವ್ಯಕ್ತಿ ಆತ. ಕಾನೂನು ಮಾಡುವ ಸ್ಥಳದಲ್ಲಿ ಅತ್ಯಾಚಾರ ಮಾಡುವವನಿಗೆ ಎಲ್ಲಪ್ಪಾ ಕಾನೂನು?” ಎಂದು ಕೇಳಿದರು.
ಹಳೇ ಸ್ನೇಹಿತರು ಮತ್ತೆ ಒಂದಾಗುತ್ತಾರಾ ಎಂದು ಕೇಳಿದಾಗ, “ಅಯ್ಯೋ ಶಿವ, ಪಾಂಡುರಂಗ ಆ ಪುಣ್ಯಾತ್ಮನ ಜತೆ ಮತ್ತೆ ಸ್ನೇಹ ಮಾಡಿದರೆ ಅಷ್ಟೇ. ಆತನಿಗೆ ಯಾರ ಮೇಲೂ ನಂಬಿಕೆ ಇಲ್ಲ. ಆತ ಅನುಮಾನದ ಪಿಶಾಚಿ” ಎಂದು ತಿಳಿಸಿದರು.
ಡಿಸಿಎಂ ಪೋಸ್ಟರ್ ನೋಡಿದರೆ ಶೋಲೆ ಪಿಚ್ಚರ್ ಅಮಿತಾಬ್ ಬಚ್ಚನ್, ಹೇಮಮಾಲಿನ ನೆನಪಾಗುತ್ತಾರೆ ಎಂಬ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ, “ಆತನಿಗೆ ರಾತ್ರಿಯಾದರೆ ಹೇಮಮಾಲಿನಿ ನೆನಪಾಗುತ್ತಾರೆ. ಅಮಿತಾಬ್ ಬಚ್ಚನ್ ಆತನ ಎದೆ ಮೇಲೆ ಕುಣಿಯುತ್ತಿರುವಂತೆ, ಗಬ್ಬರ್ ಸಿಂಗ್ ಆತನ ಮುಖಕ್ಕೆ ಗುದ್ದುತ್ತಿರುವಂತೆ ಭಾಸವಾಗುತ್ತದೆ. ಹೀಗಾಗಿ ಆತ ನಿದ್ದ ಬರಲ್ಲ ಎಂದು ಮಾತ್ರೆ ತೆಗೆದುಕೊಳ್ಳುತ್ತಾನೆ. ರಾತ್ರಿಯಾದರೆ ರಕ್ತ ಕಣ್ಣೀರು ಚಿತ್ರದ ಕೊನೆಯಲ್ಲಿ ಉಪೇಂದ್ರ ಆಡಿರುವ ರೀತಿ ಆಡುತ್ತಿರುತ್ತಾನೆ” ಎಂದು ವ್ಯಂಗ್ಯವಾಡಿದರು.
ನನ್ನ ಕಂಡರೆ ಯಾಕಿಷ್ಟು ದ್ವೇಷ ಎಂಬ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ, “ಆತ ನೀಚ ಹಾಗೂ ದ್ವೇಷ ರಾಜಕಾರಣಿ. ನಾನು ಇದುವರೆಗೂ ಎಂದಾದರೂ ಆತನ ಬಗ್ಗೆ ಮಾತನಾಡಿದ್ದೀನಾ. ನಮ್ಮ ವಿರುದ್ಧ ದೂರು ನೀಡಿದರೆ ಹಿರೋ ಆಗಬಹುದು ಎಂದು ಆತ ಭಾವಿಸಿದ್ದಾನೆ. ಗುತ್ತಿಗೆ ಸಿಗಲಿಲ್ಲ ಎಂದು ಇಡಿಗೆ ದೂರು ನೀಡಿದ್ದಾನೆ. ಅದನ್ನು ಬಿಟ್ಟು ಬೇರೇನು ಮಾಡಿದ್ದಾನೆ. ಕಳ್ಳ ಬಿಲ್ ಬರೆಸಿಕೊಂಡು ದರ್ಬಾರು ಮಾಡುತ್ತಿದ್ದ. ಈಗ ಎಲ್ಲವೂ ಬಿಗಿಯಾಗಿದೆ ಅದಕ್ಕೆ ಇಡಿಗೆ ದೂರು ನೀಡಿದ್ದಾನೆ” ಎಂದರು.