ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ ಮದುವೆಗೆ ಎರಡು ಕುಟುಂಬದ ಸದಸ್ಯರು ಮತ್ತು ಅತ್ಯಾಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಬುಧವಾರ ಸಂಜೆಯಿಂದಲೇ ವರಪೂಜೆ ಸೇರಿದಂತೆ ಮದುವೆ ಶಾಸ್ತ್ರಗಳು ನಡೆದಿದ್ದವು. ಇಂದು ಬೆಳಗ್ಗೆ 10.45 ತುಲಾ ಲಗ್ನದಲ್ಲಿ ಶಿವಶ್ರಿ ಕೊರಳಿಗೆ ತೇಜಸ್ವಿ ಸೂರ್ಯ ಮಾಂಗಲ್ಯಧಾರಣೆ ಮಾಡಿದ್ದಾರೆ.
ಇಂದು ಬೆಂಗಳೂರು ದಕ್ಷಿಣದ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್‌ನಲ್ಲಿ ತೇಜಸ್ವಿ ಸೂರ್ಯ ಮತ್ತು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಮದುವೆ ನಡೆದಿದೆ.
ಇಂದೇ ಶಿವಶ್ರೀ ಅವರನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆಯಲಿದೆ. ಮದುವೆಗೆ ಕೇಂದ್ರ ಸಚಿವ ವಿ,ಸೋಮಣ್ಣ ತೆರಳಿ ನವಜೋಡಿಗೆ ಆಶೀರ್ವದಿಸಿದ್ದಾರೆ. ಮಾರ್ಚ್ 9ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ಆರತಕ್ಷತೆ ನಡೆಯಲಿದೆ. ಈ ವೇಳೆ ರಾಜ್ಯ-ದೇಶದ ರಾಜಕೀಯ ಗಣ್ಯರು ಭಾಗಿಯಾಗುವ ಸಾಧ್ಯತೆಗಳಿವೆ.
ರಾಜ್ಯದ ಯಂಗ್ ಆ್ಯಂಡ್ ಎನರ್ಜಿಟಿಕ್ ಸಂಸದ, ಸದಾ ನಗುಮೊಗದಿಂದಲೇ ಇರುವ ತೇಜಸ್ವಿ ಸೂರ್ಯ ಮದುವೆ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದೀಗ ಆ ಪ್ರಶ್ನೆಗೆ ಫುಲ್‌ಸ್ಟಾಪ್ ಬಿದ್ದಂತಾಗಿದೆ. ತಮಿಳುನಾಡು ಮೂಲದ ಶಿವಶ್ರೀ ಅವರು ಈಗಾಗಲೇ ಗಾಯನದಿಂದ ಖ್ಯಾತರಾಗಿದ್ದಾರೆ.
ಇತ್ತೀಚೆಗೆ ಆರ್ಟ್ ಆಫ್ ಲಿವಿಂಗ್‌ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಶಿವಶ್ರೀ ಅವರು ಗಾಯನವಲ್ಲದೆ ಭರತನಾಟ್ಯ ಕಲಾವಿದೆ ಕೂಡ ಹೌದು. ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಪದವಿಯನ್ನೂ ಗಳಿಸಿದ್ದಾರೆ. ಆಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಶಿವಶ್ರೀ ಅವರು ಹಾಡಿದ ರಾಮನ ಕುರಿತ ಗೀತೆಯನ್ನು ಮೆಚ್ಚಿ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.