ಒಂದು ಕಾಲದಲ್ಲಿ ಜನರು ಭಾನುವಾರ ಮಾತ್ರ ಮಾಂಸಾಹಾರ ಸೇವಿಸುತ್ತಿದ್ದರೆ, ಈಗ ದಿನೇದಿನೇ ಕೋಳಿ, ಮಟನ್, ಮೀನು ಮೊದಲಾದ ಮಾಂಸಾಹಾರ ಸೇವನೆಯು ಸಾಮಾನ್ಯವಾಗಿದೆ. ಕೆಲವರಿಗೆ ಪ್ರತಿದಿನ ಚಿಕನ್ ಸೇವನೆ ಇಲ್ಲದೆ ದಿನ ಪೂರ್ಣವಾಗುವುದೇ ಇಲ್ಲ.
ಇಂತಹ ಚಿಕನ್ ಪ್ರಿಯರಿಗಾಗಿ ಶಾಕಿಂಗ್ ಸುದ್ದಿ ಹೊರಬಂದಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ವಾರಕ್ಕೆ 300 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಕೋಳಿ ಮಾಂಸ ತಿನ್ನುವವರಲ್ಲಿ ಜಠರ ಕರುಳಿನ ಕ್ಯಾನ್ಸರ್ (ಕೊಲೊನ್ ಕ್ಯಾನ್ಸರ್) ಅಪಾಯ ಹೆಚ್ಚಾಗುತ್ತದೆ ಎಂಬುವುದು ಬೆಳಕಿಗೆ ಬಂದಿದೆ.
ಚಿಕನ್ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಲಾಭದಾಯಕ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್ B12 ಮತ್ತು ಕೋಲೀನ್ ಇದೆ. ಇದು ನರಮಂಡಲ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಶಕ್ತಿವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಕೆಂಪು ಮಾಂಸಕ್ಕೆ ಹೋಲಿಸಿದರೆ ಕೋಳಿ ಮಾಂಸವು ಕಡಿಮೆ ಹಾನಿಕರವೆಂದು ತಜ್ಞರು ಹೇಳುತ್ತಾರೆ.
ಆದರೆ, ಪ್ರತಿದಿನ ಹೆಚ್ಚು ಪ್ರಮಾಣದಲ್ಲಿ ಚಿಕನ್ ಸೇವನೆಯು ದೀರ್ಘಕಾಲೀನ ಅಪಾಯಗಳನ್ನು ತಂದೊಡ್ಡಬಲ್ಲದು. ಅಧ್ಯಯನಗಳ ಪ್ರಕಾರ, ವಾರಕ್ಕೆ 300 ಗ್ರಾಂ ಗಿಂತ ಹೆಚ್ಚು ಕೋಳಿ ಮಾಂಸ ಸೇವಿಸಿದರೆ, ಜಠರಗರುಳಿನ ಕ್ಯಾನ್ಸರ್ ಅಪಾಯ 27% ಹೆಚ್ಚು ಇರಬಹುದೆಂದು ಕಂಡುಬಂದಿದೆ. ವಿಶೇಷವಾಗಿ ಪುರುಷರಲ್ಲಿ ಈ ಅಪಾಯ ಹೆಚ್ಚು ಕಂಡುಬಂದಿದೆ.
ವಿಜ್ಞಾನಿಗಳ ತಂಡವು 19 ವರ್ಷಗಳ ಕಾಲ 4000ಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಅಧ್ಯಯನದ ವಿವರಗಳು ಹೀಗಿವೆ. ಹೆಚ್ಚು ಬಿಳಿ ಮಾಂಸ (ಕೋಳಿ, ಟರ್ಕಿ, ಬಾತುಕೋಳಿ) ಸೇವಿಸಿದವರು ಜಠರಗರುಳಿನ ಕ್ಯಾನ್ಸರ್, ಯಕೃತ್ತಿನ ಸಮಸ್ಯೆ, ಹೊಟ್ಟೆ ನೋವು, ಮತ್ತು ಗುದನಾಳ ಕ್ಯಾನ್ಸರ್ ಮುಂತಾದ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇದೆ. ಮಿತಿಮೀರಿ ಮಾಂಸ ಸೇವನೆ ಮಾಡುವವರಲ್ಲಿ ಸುಮಾರು 27% ಜನರು ಯಾವುದೇ ಒಂದು ರೀತಿಯ ಗಂಭೀರ ಕಾಯಿಲೆಯಿಂದ ಪೀಡಿತರಾಗಿದ್ದಾರೆ.
ವಾರಕ್ಕೆ 200 ಗ್ರಾಂ ಕೋಳಿ ತಿನ್ನುವವರಿಗೂ ಜಠರಗರುಳಿನ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಆದರೆ 300 ಗ್ರಾಂ ಮೀರಿದಾಗ ಅಪಾಯದ ಪ್ರಮಾಣ ಬಹಳಷ್ಟು ಹೆಚ್ಚುತ್ತದೆ. ಆದ್ದರಿಂದ ತಜ್ಞರು 2 ಅಥವಾ 3 ದಿನ ಮಾತ್ರ ಕೋಳಿ ಮಾಂಸ ತಿನ್ನಬೇಕು ಮತ್ತು ಒಟ್ಟಾರೆ ವಾರಕ್ಕೆ 100 ಗ್ರಾಂ ಮೀರಬಾರದು ಎಂದು ಶಿಫಾರಸು ಮಾಡುತ್ತಾರೆ.