ಕರ್ನಾಟಕದ ಮಕ್ಕಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ವಿಚಾರ ಪರಿಷತ್ ಕಲಾಪದಲ್ಲಿ ಚರ್ಚೆಯಾಗಿದ್ದು ರಾಜ್ಯದ ಪೋಷಕರಿಗೆ ಶಾಕ್ ನೀಡಿದೆ. 14 ವರ್ಷದೊಳಗಿನ ಮಕ್ಕಳಲ್ಲಿ ಪ್ರತಿ ವರ್ಷ 1533 ಕ್ಯಾನ್ಸರ್ ಪ್ರಕರಣಗಳು ಕಂಡು ಬರುತ್ತಿದ್ದು ಹೆಚ್ಚಾಗಿ ಗಂಡು ಮಕ್ಕಳೇ ಈ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಅನ್ನೋದು ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ. ಹೆಚ್ಚುತ್ತಿರುವ ಆಧುನಿಕ ಜೀವನಶೈಲಿಯಿಂದ ಮಕ್ಕಳ ಆರೋಗ್ಯ ದಿನೇ ದಿನೇ ಹದಗೆಡುತ್ತಿದ್ದು ಪೋಷಕರು ತ್ವರಿತವಾಗಿ ಮಕ್ಕಳ ಆರೋಗ್ಯದ ಕಡೇ ಗಮನಕೊಡಲೇ ಬೇಕಾಗಿದೆ.
ರಾಜ್ಯದ ಮಕ್ಕಳಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತಿರುವ ಆತಂಕಕಾರಿ ಬೆಳವಣಿಗೆ ಬಗ್ಗೆ ವಿಧಾನಪರಿಷತ್‌ನಲ್ಲಿ ಸದಸ್ಯೆ ಉಮಾಶ್ರೀ ಪ್ರಶ್ನೆ ಎತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ನಮ್ಮ ರಾಜ್ಯವೊಂದರಲ್ಲೇ ಪ್ರತಿ ವರ್ಷ 1533 ಪ್ರಕರಣ ದೃಢಪಡುತ್ತಿದೆ. ಬೆಂಗಳೂರ ಕಿದ್ವಾಯಿ ಆಸ್ಪತ್ರೆ ಒಂದರಲ್ಲೇ 630 ರೋಗಿಗಳು ದಾಖಲಾಗ್ತಿದ್ದಾರೆ. ಇನ್ನೂ ಶಾಕಿಂಗ್ ಅಂದ್ರೆ ರಾಜ್ಯದ ಗಂಡುಮಕ್ಕಳಲ್ಲೇ ಹೆಚ್ಚು ಕ್ಯಾನ್ಸರ್ ಪ್ರಕರಣ ಪತ್ತೆಯಾಗುತ್ತಿದೆ.
ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರು ನೀಡಿರುವ ಅಂಕಿ ಅಂಶಗಳ ಪ್ರಕಾರ ಕರ್ನಾಟಕವೊಂದರಲ್ಲೇ ಪ್ರತಿ ವರ್ಷ 1533 ಕ್ಯಾನ್ಸರ್ ಪ್ರಕರಣಗಳು 14 ವರ್ಷದೊಳಗಿನ ಮಕ್ಕಳಲ್ಲಿ ದೃಢಪಡುತ್ತಿದೆ. 876 ಗಂಡು ಮಕ್ಕಳು, 657 ಹೆಣ್ಣು ಮಕ್ಕಳು ಇದರಲ್ಲಿ ಸೇರ್ಪಡೆಯಾಗಿದೆ. ಹೆಚ್ಚಿನ ಮಕ್ಕಳಲ್ಲಿ ಬರುವ ಕ್ಯಾನ್ಸರ್‌ಗೆ ಕಾರಣವೇ ತಿಳಿಯುತ್ತಿಲ್ಲ. ಜೆನೆಟಿಕಲ್ ಕಾರಣಗಳು, ಪರಿಸರ ಹಾಗೂ ಮಾಡ್ರನ್ ಲೈಫ್ ಸ್ಟೈಲ್ ಕ್ಯಾನ್ಸರ್‌ಗೆ ಕಾರಣ ಎನ್ನಲಾಗಿದೆ.
ಗಂಡು ಮಕ್ಕಳಲ್ಲಿ ಶೇಕಡ 45ರಷ್ಟು ರಕ್ತದ ಕ್ಯಾನ್ಸರ್, ಶೇಕಡ 14.5ರಷ್ಟು ಲಿಂಪೋಮಾ ಕ್ಯಾನ್ಸರ್, ಶೇಕಡ 12.9ರಷ್ಟು ಮೆದುಳು ಹಾಗೂ ನರಗಳಿಗೆ ಸಂಬಂಧಿಸಿದ ಕ್ಯಾನ್ಸರ್ , ಶೇಕಡ 5.6 ಮೂಳೆಗೆ ಸಂಬಂಧಿಸಿದ ಕ್ಯಾನ್ಸರ್ , ಶೇಕಡ 3.6ರಷ್ಟು ಮೂತ್ರ ಪಿಂಡದ ಕ್ಯಾನ್ಸರ್ ಹಾಗೂ ಕಣ್ಣಿಗೆ ಸಂಬಂಧಪಟ್ಟ ಕ್ಯಾನ್ಸರ್ ಶೇಕಡ 2.6 ರಷ್ಟು ಕಂಡು ಬರುತ್ತಿದೆ.
ಹೆಣ್ಣು ಮಕ್ಕಳಲ್ಲಿ ಶೇಕಡ 44.6ರಷ್ಟು ರಕ್ತಕ್ಕೆ ಸಂಬಂಧಿಸಿದ ಕ್ಯಾನ್ಸರ್, ಶೇಕಡ 12.1ರಷ್ಟು ಮೆದುಳು ಹಾಗೂ ನರಗಳಿಗೆ ಸಂಬಂಧಪಟ್ಟ ಕ್ಯಾನ್ಸರ್, ಶೇಕಡ 5.8ರಷ್ಟು ಲಿಂಪೋಮಾ ಕ್ಯಾನ್ಸರ್ ಹಾಗೂ ಶೇಕಡ 3.4ರಷ್ಟು ಮೃದು ಅಂಗಾಂಶಕ್ಕೆ ಸಂಬಂಧಿಸಿದ ಕ್ಯಾನ್ಸರ್ ಕಂಡು ಬರುತ್ತದೆ.
ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಬೆಂಗಳೂರಿನ ಕಿದ್ವಾಯಿ ಸಂಸ್ಥೆಯಲ್ಲಿ ಪ್ರತ್ಯೇಕ ಮಕ್ಕಳ ಕ್ಯಾನ್ಸರ್ ಚಿಕಿತ್ಸೆ ಮತ್ತು ಆರೈಕೆ ವಿಭಾಗವಿದ್ದು ಆಧುನಿಕ ಚಿಕಿತ್ಸೆಯನ್ನು ಸರ್ಕಾರ ವಿವಿಧ ಯೋಜನೆಗಳ ಅಡಿಯಲ್ಲಿ ನೀಡಲಾಗುತ್ತಿದೆ. ಮುಖ್ಯವಾಗಿ ಕಿಮೋಥೆರಪಿ ಚಿಕಿತ್ಸಾ ವಿಧಾನವನ್ನು ಶೇಕಡ 73 ರಷ್ಟು ಅನುಸರಿಸಲಾಗುತ್ತಿದೆ. ಶೇಕಡ 12 ರಷ್ಟು ರೋಗಿಗಳಿಗೆ ಲೇಜರ್ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದಾರೆ.
ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಪ್ರಾರಂಭಿಕ ಹಂತದಲ್ಲೇ ಅರಿವು ಮೂಡಿಸುವ ಕೆಲಸವಾಗಬೇಕು. ಸರ್ಕಾರ ಸೇರಿದಂತೆ ಸಂಘಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸುವ ಮೂಲಕ ಕ್ಯಾನ್ಸರ್ ತಡೆಗಟ್ಟಬಹುದು ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಬಹುದಾಗಿದೆ.
ಮಕ್ಕಳಲ್ಲಿ ವರ್ಷದಿಂದ ವರ್ಷಕ್ಕೆ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಬೋನ್ ಮ್ಯಾರೊ ಆಸ್ಪಿರೇಟ್ ಅಂಡ್ ಟ್ರಿಪೈನ್ ಬಯಾಪ್ಸಿ (ಬಿಎಂಎಟಿ) ಸಂಸ್ಥೆಗಳನ್ನು ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಲಾಗುವುದು, ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ಈ ಕೇಂದ್ರಗಳನ್ನು ಸ್ಥಾಪಿಸಬೇಕೆಂಬ ಉದ್ದೇಶವಿದೆ. ಪ್ರಾರಂಭಿಕ ಹಂತದಲ್ಲಿ ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಈಗಾಗಲೇ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಪಾಸಣಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಇದೇ ರೀತಿ ಕಲಬುರಗಿಯಲ್ಲೂ ಕೇಂದ್ರವನ್ನು ಪ್ರಾರಂಭ ಮಾಡಿದ್ದೇವೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲೂ ಇದನ್ನು ತೆರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಆಧುನಿಕ ಜೀವನಶೈಲಿ ಹಾಗೂ ಒತ್ತಡದಿಂದ ಮಕ್ಕಳಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿರೋ ಬಗ್ಗೆ ಪೋಷಕರೇ ಹೆಚ್ಚಿನ ಗಮನ ವಹಿಸಬೇಕಾಗಿದೆ. ಮಕ್ಕಳು ತಿನ್ನುವ ಆಹಾರದಿಂದ ಹಿಡಿದು ಅವರ ಆಟ-ಪಾಠ-ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ತಂದೆ-ತಾಯಂದಿರು ಹೆಚ್ಚಿನ ನಿಗಾ ವಹಿಸಬೇಕಾಗಿದೆ. ಇಂದಿನ ಪೋಷಕರು ಜಾಗರೂಕರಾಗಿ ಆರೋಗ್ಯವಂತ ಜೀವನಶೈಲಿಯನ್ನು ಮಕ್ಕಳಲ್ಲಿ ಅಳವಡಿಸಿದರೆ ನಮ್ಮ ಮುಂದಿನ ಪೀಳಿಗೆಯನ್ನು ಕ್ಯಾನ್ಸರ್ ಮುಕ್ತ ಮಾಡಬಹುದಾಗಿದೆ.