ನುಡಿದಂತೆ ನಡೆಯುವ ಮೂಲಕ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ

Untitled design (96)

ಬೆಂಗಳೂರು, ಮಾರ್ಚ್ 18 : ನುಡಿದಂತೆ ನಡೆಯುವ ಮೂಲಕ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ತಿಳಿಸಿದರು.

ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ವಂದಾರ್ಪಣೆ ಸಲ್ಲಿಸುವ ಪ್ರಸ್ತಾವದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳಿಗೆ ಸರಿದಾರಿ ತೋರಲು ಟೀಕೆಗಳು ಇರಬೇಕು.ಸತ್ಯವನ್ನು ಮರೆಮಾಚಿ ಟೀಕೆ ಮಾಡಬಾರದು. ಇದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ. ವಿರೋಧ ಪಕ್ಷಗಳು ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಬೇಕು ಹಾಗೂ ದಾಖಲಾತಿಗಳನ್ನು ಸದನದ ಮುಂದಿಡಬೇಕು. ಅದೇ ಸರಿಯಾದ ಮಾರ್ಗ ಎಂದರು.

ADVERTISEMENT
ADVERTISEMENT

ನಮ್ಮ ಪಕ್ಷ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರೆಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಜಾರಿಗೆ ತರುವ ಮೂಲಕ ಜನರ ನಂಬಿಕೆ ಉಳಿಸಿಕೊಂಡಿದ್ದೇವೆ ಎಂದರು.

ಶಕ್ತಿ ಯೋಜನೆಯಡಿ 409 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ. ಇದು ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ ಶಕ್ತಿ ನೀಡಿದೆ. 1.26 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯಡಿ 170 ರೂ.ಗಳನ್ನು ನೇರ ನಗದು ಪಾವತಿ (ಡಿಬಿಟಿ ) ಮಾಡಲಾಗಿದೆ. ಒಟ್ಟಾರೆಯಾಗಿ 4 ಕೋಟಿಗೂ ಹೆಚ್ಚು ಜನ ಗ್ಯಾರಂಟಿಗಳಿಂದ ಲಾಭ ಪಡೆದಿದ್ದಾರೆ.

ನಾವು ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದರಿಂದ ಆರ್ಥಿಕತೆಗೆ ಚೈತನ್ಯ ಬಂದು ರಾಜ್ಯಕ್ಕೆ ತೆರಿಗೆಯೂ ಹೆಚ್ಚುತ್ತಿದೆ. 2024-25 ರ ಬಜೆಟ್ ನಲ್ಲಿ 52009 ಕೋಟಿಗಳನ್ನು ಗ್ಯಾರಂಟಿಗಳಿಗೆ ಇರಿಸಲಾಗಿದ್ದು, ಅದರಲ್ಲಿ 41560 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ಈ ಬಾರಿಯ ಬಜೆಟ್ ಗಾತ್ರ 4,09,549 ಕೋಟಿಯಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಆರೋಗ್ಯಕರವಾಗಿರಲು Fiscal responsibility Act ದಂತೆ ಇರುವ ಮಾನದಂಡಗಳನ್ನು ಪೂರೈಸಿರಬೇಕು. ನಾವು ಪೂರೈಸಿದ್ದೇವೆ. ಆರ್ಥಿಕ ಹೊಣಗಾರಿಕೆ ಅಧಿನಿಯಮದ ಮಾನದಂಡದಂತೆ, ಸಾಲದ ಮೊತ್ತ GSDP ಯ ಶೇ.25 ರಷ್ಟಿರಬೇಕು, ರಾಜ್ಯ ಶೇ.24.91 ರಷ್ಟರ ಮಿತಿಯಲ್ಲಿದೆ. ವಿತ್ತೀಯ ಕೊರತೆ GSDPಯ ಶೇ.3 ರಷ್ಟುನ್ನು ಮೀರಬಾರದು. ಅದು 2.95 % ರಷ್ಟಿದೆ. ಸರ್ಕಾರ ಎಲ್ಲ ಆರ್ಥಿಕ ಮಾನದಂಡಗಳ ಮಿತಿಯೊಳಗಿದೆ. ಆದ್ದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಜನರಿಗೂ ಇದರ ಬಗ್ಗೆ ಅರಿವಿದೆ ಎಂದರು

2024-25 ನೇ ಸಾಲಿನಲ್ಲಿ SCSP ಮತ್ತು TSP ಅಡಿಯಲ್ಲಿ ಒಟ್ಟು 39,121 ಕೋಟಿ ಹಂಚಿಕೆ ಮಾಡಿದ್ದು, ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರದ ಕಟಿಬದ್ದತೆಯನ್ನು ತೋರಿಸುತ್ತದೆ ಎಂದರು.

ಮೈಕ್ರೊ ಹಣಕಾಸಿನ ಸಂಸ್ಥೆಗಳಿಗೆ ನಿಯಂತ್ರಣ ಕಾನೂನುಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಕಾನೂನು ಬಾಹಿರವಾಗಿ ತೊಂದರೆಗೊಳಗಾಗುತ್ತಿದ್ದ ಜನರಿಗೆ ಇದರಿಂದ ರಕ್ಷಣೆ ದೊರೆಯುವಂತಾಗಿದೆ. ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ನಮ್ಮ ಸರ್ಕಾರ 2 ರೂ ನಿಂದ 5 ರೂಗೆ ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಪ್ರೋತ್ಸಾಹ ಧನವನ್ಬು ಹೆಚ್ಚಿಸುವ ತೀರ್ಮಾನವನ್ನು ಸೂಕ್ತ ಸಂದರ್ಭದಲ್ಲಿ ತೆಗೆದುಕೊಳ್ಳಲಾಗುವುದು ಎಂದರು.

ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ವಿವಿ ಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಜೊತೆಗೆ ಶೈಕ್ಷಣಿಕ ಗುಣಮಟ್ಟವನ್ನು ಮೇಲ್ದರ್ಜೆಗೇರಿಸುವ ಸಂಬಂಧ ರಚಿಸಲಾಗಿರುವ ಸಚಿವ ಸಂಪುಟದ ಉಪಸಮಿತಿಯ ವರದಿ ಬಂದ ನಂತರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸದಸ್ಯರ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟನೆಯನ್ನು ಸರ್ಕಾರ ನೀಡಿದ್ದು, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಅಂಗೀಕರಿಸುವಂತೆ ಸದನವನ್ನು ಮುಖ್ಯಮಂತ್ರಿಗಳು ಕೋರಿದರು . ಸದನವು ವಂದನಾ ನಿರ್ಣಯವನ್ನು ಅಂಗೀಕರಿಸಿದೆ ಎಂದು ಸಭಾಪತಿಗಳು ತಿಳಿಸಿದರು.

Exit mobile version