ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಪೆರ್ಲದ ಭೀಮನಡಿಯ ಕೃಷಿಕ ಸೆಬಾಸ್ಟಿಯನ್ ಎಂಬುವವರು ಈ ಸಾಧನೆ ಮಾಡಿದ್ಧಾರೆ. 82 ವರ್ಷ ವಯಸ್ಸಿನ ಸೆಬಾಸ್ಟಿಯನ್ ಪಿ.ಆಗಸ್ಟಿನ್ ಎಳನೀರಿನಿಂದ ವೈನ್ ತಯಾರಿಸಿದ್ದಾರೆ. ಎಳನೀರಿನಿಂದ ಜ್ಯೂಸ್, ಶೇಕ್ ಮತ್ತು ಐಸ್‌ಕ್ರೀಮ್ ತಯಾರಿಸಲಾಗುತ್ತಿದೆ. ಆದರೆ ಇದೇ ಎಳನೀರಿನಿಂದ ಉತ್ತಮ ವೈನ್ ಪಡೆಯಬಹುದು ಎಂದು ಸೆಬಾಸ್ಟಿಯನ್ ಸಾಧಿಸಿ ತೋರಿಸಿದ್ದಾರೆ.
ಚೀನಾದಲ್ಲಿ ತೆಂಗಿನ ಕಾಯಿ ನೀರಿನಿಂದ ವೈನ್ ತಯಾರಿಸಲಾಗುತ್ತಿದೆ. ಆದರೆ ಭಾರತದಲ್ಲಿ ಮೊದಲ ಬಾರಿ ಎಳನೀರಿನಿಂದ ವೈನ್ ತಯಾರಿಸಿದ ಖ್ಯಾತಿ ಸೆಬಾಸ್ಟಿಯನ್ ಅವರದ್ದು. ಪೆರ್ಲದ ಕೃಷಿಕ ಮತ್ತು ಉದ್ಯಮಿಯಾಗಿರುವ ಸೆಬಾಸ್ಟಿಯನ್, ತಮ್ಮ ಭೀಮನಡಿಯ 15 ಎಕರೆ ತೆಂಗಿನ ತೋಟದಲ್ಲಿ ಎಳನೀರು ವೈನ್ ತಯಾರಿಸಿ ಮಾರುತ್ತಲೂ ಇದ್ದಾರೆ.
ಎಳನೀರು ವೈನ್ ತಯಾರಿಕೆ ಹೇಗೆ…?
ಸೆಬಾಸ್ಟಿಯನ್ ಅವರ ರಿವರ್ ಐಲ್ಯಾಂಡ್ ವೈನರಿ ಫಾರ್ಮ್‌ನಲ್ಲಿ ಡ್ರ್ಯಾಗನ್ ಫ್ರುಟ್, ಮಾವು, ಬಾಳೆಹಣ್ಣು, ಪಪ್ಪಾಯಿ, ಹಲಸು ಬೆಳೆಸಿದ್ದಾರೆ. 250 ಲೀ. ವೈನ್ ತಯಾರಿಸಲು ಸುಮಾರು 1,000 ಎಳನೀರು ಹಾಗೂ 250 ಕೆಜಿ ಹಣ್ಣುಗಳನ್ನು ಬಳಸುತ್ತಾರೆ. ವೈನ್ ತಯಾರಿಸಲು ಶುದ್ಧ ನೀರಿನ ಬದಲು ತಾಜಾ ಎಳನೀರು ಬಳಸುತ್ತಾರೆ. ಹೀಗಾಗಿ ವೈನ್ ರುಚಿಯಾಗಿರುತ್ತದೆ.
ಕೇವಲ ಶೇ.8-10ರಷ್ಟು ಆಲ್ಕೋಹಾಲ್ ಅಂಶ ಇರುವ ವೈನ್, ದ್ರಾಕ್ಷಿ ವೈನ್‌ಗಿಂತ ಭಿನ್ನ ರುಚಿ ಹೊಂದಿದೆ. ಸುಮಾರು 20 ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಸೆಬಾಸ್ಟಿಯನ್ ಈ ವೈನ್ ಮಾರುಕಟ್ಟೆಗೆ ತರುತ್ತಿದ್ದಾರೆ. 2004ರಲ್ಲಿ ತಮ್ಮ ತೋಟದಲ್ಲಿ ಬೆಳೆದ ವಿದೇಶಿ ಹಣ್ಣುಗಳ ರಸಗಳ ಮಿಶ್ರಣದೊಂದಿಗೆ ಎಳನೀರು ಬೆರೆಸಿ ವೈನ್ ತಯಾರಿಸಿದ್ದರು. 2007ರಲ್ಲಿ ಪೇಟೆಂಟ್ ಪಡೆದಿದ್ದರು. ಕೇರಳದ ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ನೀಡಲಾಗುವ ಕೇರ ಕೇಸರಿ ಪ್ರಶಸ್ತಿಗೆ ಸೆಬಾಸ್ಟಿಯನ್ ಭಾಜನರಾಗಿದ್ದರು. ಈ ಎಳನೀರು ವೈನ್ ತಯಾರಿಸಲು ಹಾಗೂ ದೊಡ್ಡ ಮಟ್ಟದಲ್ಲಿ ಮಾರಾಟ ಮಾಡಲು ರಾಜ್ಯ ಅಬಕಾರಿ ಇಲಾಖೆಯ ಪರವಾನಗಿಯನ್ನೂ ಪಡೆಯಲಾಗಿದೆ. ವಿದೇಶಗಳಲ್ಲೂ ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಲಾಗಿದೆ.
ಸೆಬಾಸ್ಟಿಯನ್ ಹೇಳೋದೇನು..?
ಎಳನೀರು ಬಳಸಿ ವೈನ್ ತಯಾರಿಸೋಕೆ ಅತ್ಯಂತ ಕಡಿಮೆ ಸಮಯ ಸಾಕು. ದ್ರಾಕ್ಷಿ ವೈನ್ ತಯಾರಿಗೆ ಹೋಲಿಸಿದರೆ ಎಳನೀರು ವೈನ್ ತಯಾರಿಕೆಗೆ ಅತ್ಯಂತ ಕಡಿಮೆ ಸಮಯ ಸಾಕಾಗುತ್ತದೆ. ಈ ರೀತಿಯ ವೈನ್ ತಯಾರಿಕೆಗೆ 2007ರಲ್ಲೇ ಅರ್ಜಿ ಹಾಕಿದ್ದೆ. ಆದರೆ 2024ರಲ್ಲಿ ಲೈಸೆನ್ಸ್ ಸಿಕ್ಕಿತು ಎನ್ನುವ ಸೆಬಾಸ್ಟಿಯನ್ ಅವರಿಗೆ ಇದನ್ನು ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡುವ ಕನಸಿದೆ.
ಎಳನೀರು ಎಂದರೆ ರೋಗಿಗಳ ಪಾಲಿಗೆ ಗ್ಲುಕೋಸ್ ಇದ್ದಂತೆ. ಸಾಮಾನ್ಯವಾಗಿ ಡಿಹೈಡ್ರೇಷನ್ ನಿಂದ ಬಳಲುವವರು ಎಳನೀರನ್ನು ಹೆಚ್ಚಾಗಿ ಕುಡಿಯುತ್ತಾರೆ. ವೈದ್ಯರೂ ಕೂಡಾ ಎಳನೀರು ಸಲಹೆ ಮಾಡ್ತಾರೆ. ಬೇಸಗೆಯಲ್ಲಿ ಎಳನೀರು ಕುಡಿಯುವುದು ಧಗೆಯಿಂದ ತಪ್ಪಿಸಿಕೊಳ್ಳಲು ಸಹಕಾರಿಯೂ ಹೌದು. ಈಗ ಅದೇ ಎಳನೀರು ಬಳಸಿ ಆಲ್ಕೋಹಾಲ್ ಮಾದರಿಯಲ್ಲಿ ವೈನ್ ತಯಾರಿಸುವ ಉದ್ಯಮಕ್ಕೆ ಬಂಡವಾಳ ಹೂಡಿಕೆದಾರರೇನೋ ಆಸಕ್ತಿ ತೋರಿಸಿದ್ದಾರೆ. ಆದರೆ ಸರ್ಕಾರದ ಕೆಲವು ಕಠಿಣ ನಿಯಮಗಳು ಇದಕ್ಕೆ ಅಡ್ಡಿ ಬರುತ್ತಿವೆ ಎನ್ನುತ್ತಾರೆ ಸೆಬಾಸ್ಟಿಯನ್.