ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ; ಬಿಜೆಪಿಯಿಂದ ರಾಜಕೀಯ ದೌರ್ಜನ್ಯ: ಡಿಸಿಎಂ ಡಿ.ಕೆ.ಶಿವಕುಮಾರ್

ಜೆಎಸಿ ಮುಂದಿನ ಸಭೆ ತೆಲಂಗಾಣದಲ್ಲಿ

Untitled design 2025 03 22t200824.553

“ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಲು ಬಿಜೆಪಿ ಮುಂದಾಗಿರುವುದು ಕೇವಲ ತಾಂತ್ರಿಕ ಕಾರಣವಲ್ಲ, ನಮ್ಮ ಮೇಲೆ ಮಾಡುತ್ತಿರುವ ರಾಜಕೀಯ ದೌರ್ಜನ್ಯ, ಪ್ರಹಾರ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಚೆನ್ನೈನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಹಾಗೂ ನಂತರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು. ಈ ವೇಳೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಪೊನ್ನಣ್ಣ, ಬಿಎಂಆರ್ ಡಿಎ ಆಯುಕ್ತ ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.

ADVERTISEMENT
ADVERTISEMENT

“ಪ್ರಜಾಪ್ರಭುತ್ವದ ಹಾಗೂ ಒಕ್ಕೂಟ ವ್ಯವಸ್ಥೆ ಮೇಲಿನ ವ್ಯವಸ್ಥಿತ ದಾಳಿ ಮತ್ತು ಬೆದರಿಕೆ. ಈ ವಿಚಾರದ ಮೇಲೆ ಜೆಎಸಿ (Joint Action Committee)ಯ ಬಲವರ್ಧನೆಗೆ ದೆಹಲಿಯಲ್ಲಿ ಕಚೇರಿ ಸ್ಥಾಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಮುಂದಿನ ಸಭೆ ತೆಲಂಗಾಣದಲ್ಲಿ ನಡೆಯಲಿದೆ” ಎಂದರು.

“ಪಂಜಾಬ್, ಕೇರಳ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದಿಂದ ನಾನು, ತೆಲಂಗಾಣ ಹಾಗೂ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಭಾಗವಸಿದ್ದೆವು. ಕಾಂಗ್ರೆಸ್ ಹೈಕಮಾಂಡ್ ಸಹ ಈ ವಿಚಾರವಾಗಿ ಸಹಮತ ವ್ಯಕ್ತಪಡಿಸಿದೆ” ಎಂದು ಹೇಳಿದರು.

“ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಯಾವುದೇ ಭಾಗದಲ್ಲಿಯೂ ಸಂಸತ್ ಸ್ಥಾನಗಳು ಕಡಿಮೆಯಾಗಲು ನಾವು ಬಿಡುವುದಿಲ್ಲ. ಒರಿಸ್ಸಾ ಮಾಜಿ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು ಸಹ ಆನ್ ಲೈನ್ ಮೂಲಕ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದರು.

“ಇದು ದಕ್ಷಿಣ ಹಾಗು ಉತ್ತರ ಭಾರತದ ನಡುವಿನ ಜಗಳವಲ್ಲ. ಭಾರತದ ಸಾರ್ವಭೌಮತ್ವವನ್ನು ಕಾಪಾಡುವ ಜವಾಬ್ದಾರಿ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಈ ವಿಚಾರವನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಇದರ ಬಗ್ಗೆ ಚರ್ಚೆಯಾಗಬೇಕು.‌ ನಮ್ಮ ಒಕ್ಕೂಟ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಬೇಕು ಎಂದು ಹೇಳಿದ್ದಾರೆ” ಎಂದು ತಿಳಿಸಿದರು.

“ಒಟ್ಟಾಗಿ ತೆರಿಗೆ ಹಾಗೂ ಅನುದಾನ ಅನ್ಯಾಯದ ಬಗ್ಗೆ ಒಗ್ಗಟ್ಟಾಗಿ ದನಿ ಎತ್ತಬೇಕು. 2002 ರಲ್ಲಿ 84 ನೇ ತಿದ್ದುಪಡಿ ವೇಳೆ ವಾಜಪೇಯಿ ಅವರು ಅಂದು ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರ ನಡೆದುಕೊಳ್ಳಬೇಕು” ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ತಮಿಳುನಾಡಿನಲ್ಲಿ ಯಾವುದೇ ಸ್ಥಾನಗಳು ಇಲ್ಲದ ಕಾರಣಕ್ಕೆ ಮಾತನಾಡುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಕಪ್ಪು ಬಾವುಟ ತೋರಿಸುತ್ತೇವೆ ಎಂದು ಹೇಳಿದ್ದರು.‌ ನಾನು ಸಹ ತೋರಿಸಲಿ ಎಂದು ಕಾಯುತ್ತಿದ್ದೇನೆ. ಕಪ್ಪು ಬಾವುಟ ಶನಿಯ ಸಂಕೇತ. ತಮಿಳುನಾಡಿನ ಗಡಿಯಲ್ಲಿ ಇರುವ ಶನೇಶ್ವರ ದೇವಸ್ಥಾನಕ್ಕೆ ನಾನು ಆಗಾಗ್ಗೆ ಭೇಟಿಕೊಡುತ್ತಾ ಇರುತ್ತೇನೆ. ಇದು ಶನಿಯ ಸಂಕೇತ” ಎಂದರು.

ಕ್ಷೇತ್ರಗಳು ಕಡಿಮೆಯಾಗಲು ಜನಸಂಖ್ಯೆಯೇ ಕಾರಣವಾಗುತ್ತಿದೆಯೇ ಎಂದಾಗ, “ಇಂದಿರಾಗಾಂಧಿ ಅವರ ಕಾಲದಿಂದಲೂ ನಾವು ಜನಸಂಖ್ಯೆ ನಿಯಂತ್ರಣಕ್ಕೆ ನಾವು ಆದ್ಯತೆ ಕೊಟ್ಟಿದ್ದೆವು. ಈಗ ಅದೇ ಕಾರಣಕ್ಕೆ ಗುರಿಯಾಗಿದ್ದೇವೆ” ಎಂದರು.

“ಹೆಚ್ಚು ಮಕ್ಕಳು ಮಾಡಿಕೊಳ್ಳಿ ಎಂದು ನಾನು ಕರೆ ನೀಡುವುದಿಲ್ಲ. ಏಕೆಂದರೆ ಅದು ಆಯಾಯ ಸಂಸಾರದ ವೈಯಕ್ತಿಕ ವಿಚಾರ. ಎಷ್ಟು ಮಕ್ಕಳನ್ನು ಹೊಂದಬೇಕು ಎನ್ನುವುದನ್ನು ಹೇರಬಾರದು” ಎಂದರು.

ಮೇಕೆದಾಟು ವಿಚಾರವಾಗಿ ಕೇಳಿದಾಗ, “ನಾನು ರಾಜಕೀಯ ಸಭೆಗೆ ಬಂದಿದ್ದೇನೆ. ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಮೇಕೆದಾಟು ಅಣೆಕಟ್ಟಿನಿಂದ ಹೆಚ್ಚು ತಮಿಳುನಾಡಿಗೆ ಉಪಯೋಗವಿದೆ ನಂತರ ಕರ್ನಾಟಕಕ್ಕೆ” ಎಂದರು.

Exit mobile version