ಮಹೇಶ್ ಕುಮಾರ್ ಕೆ.ಎಲ್. ಕಂಟೆಂಟ್ ಎಡಿಟರ್, ಗ್ಯಾರಂಟಿ ನ್ಯೂಸ್
ಡಿಕೆ ಶಿವಕುಮಾರ್ ರಾಜಕೀಯ ಅಷ್ಟು ಸುಲಭವಾಗಿ ಅರ್ಥವಾಗುವಂಥದ್ದಲ್ಲ. ಆದರೆ ಡಿಕೆ ಶಿವಕುಮಾರ್ ಟೀಕೆಗಳಿಗೆಲ್ಲ ಕೇರ್ ಮಾಡಿದವರಲ್ಲ. ಡಿಕೆ ಇಡೋ ಹೆಜ್ಜೆಯೇ ವಿಭಿನ್ನ. ಅವರು ರೆಗ್ಯುಲರ್ ಮಾದರಿಯ ಪೊಲಿಟಿಷಿಯನ್ ಅಲ್ಲ. ಮಾಮೂಲಿ ಸಿದ್ಧಾಂತಗಳನ್ನು ಫಾಲೋ ಮಾಡೋದೇ ಇಲ್ಲ.ಅದರಲ್ಲೂ ಕಾಂಗ್ರೆಸ್ಸಿಗರದ್ದೆಲ್ಲ ಒಂದು ಸ್ಟೈಲ್ ಆದ್ರೆ ಡಿಕೆ ಶಿವಕುಮಾರ್ ಸ್ಟೈಲೇ ಬೇರೆ.
ಕುಂಭಮೇಳದಲ್ಲೂ ಡಿಫರೆಂಟ್ ಡಿಕೆ..!
ಡಿಕೆ ಶಿವಕುಮಾರ್ ಸ್ಟೈಲೇ ಬೇರೆ.. ಡಿಕೆ ರಾಜಕೀಯವೇ ಬೇರೆ. ಡಿಕೆ ಶಿವಕುಮಾರ್ ಅವರು ಇರೋದು ಕಾಂಗ್ರೆಸ್ಸಿನಲ್ಲಿ. ಅವರೀಗ ಕೆಪಿಸಿಸಿ ಅಧ್ಯಕ್ಷರೂ ಹೌದು. ಕಾಂಗ್ರೆಸ್ಸಿನಲ್ಲಿರೋ ಬಹುತೇಕರು ನನಗೆ ನನ್ನ ಆತ್ಮವೇ ದೇವರು ಎನ್ನುತ್ತಾರೆ. ಎಲೆಕ್ಷನ್ ಟೈಮಿನಲ್ಲಿ ಮಾತ್ರ ದೇವಸ್ಥಾನಕ್ಕೆ ಹೋಗ್ತಾರೆ. ಆದರೆ ಡಿಕೆ ಶಿವಕುಮಾರ್ ಹಾಗಲ್ಲ. ವೇದ ಪಂಡಿತರೂ ನಾಚುವಂತೆ ಸಂಸ್ಕೃತ ಶ್ಲೋಕ ಹೇಳುವ ಡಿಕೆ ಶಿವಕುಮಾರ್ ಅಪ್ಪಟ ದೈವಭಕ್ತ.
ಮಳೆಗಾಗಿ ಹೋಮ ಹವನಗಳನ್ನೂ ಮಾಡಿಸ್ತಾರೆ. ಕುಂಭಮೇಳಕ್ಕೂ ಹೋಗ್ತಾರೆ. ಶಿವಪೂಜೆಯನ್ನೂ ಹೋಮ, ಹವನ ಎಲ್ಲವನ್ನೂ ಮಾಡ್ತಾರೆ. ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿದ್ರೆ ಪಾಪ ತೊಳ್ಕೊಂಡ್ ಹೋಗುತ್ತೆ ಅಂತಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಹೇಳಿದ್ರೆ, ಅದು ಅವರ ನಂಬಿಕೆ. ನನ್ನ ನಂಬಿಕೆ ನನ್ನದು ಅಂತಾರೆ ಡಿಕೆ. ಅಜ್ಜಯ್ಯನ ಪೀಠದ ಮಹಾಭಕ್ತರಾಗಿರುವ ಡಿಕೆ ಶಿವಕುಮಾರ್, ತಾವು ನಾಸ್ತಿಕರಲ್ಲ ಅಂತ ಪದೇ ಪದೇ ಹೇಳಿಕೊಳ್ತಾರೆ.
ಜ್ಯೋತಿಷ್ಯವನ್ನೂ ನಂಬುವ ಡಿಕೆ ಶಿವಕುಮಾರ್..!
ರಾಜ್ಯ ರಾಜಕೀಯದಲ್ಲಿ ಜ್ಯೋತಿಷ್ಯ, ಕುಂಡಲಿಗಳನ್ನೆಲ್ಲ ನಂಬುವವರು ಯಾರು ಅಂದ್ರೆ ಎಲ್ಲರೂ ದೇವೇಗೌಡರ ಕಡೆ ಕೈತೋರಿಸ್ತಾರೆ. ಬಹುತೇಕ ರಾಜಕಾರಣಿಗಳು ಜ್ಯೋತಿಷ್ಯವನ್ನ ನಂಬ್ತಾರೆ. ಹೊರಗೆ ನಾನು ನಾಸ್ತಿಕವಾದಿ ಅಂತಾ ಹೇಳಿಕೊಳ್ಳುವವರ ಮಧ್ಯೆ ಡಿಕೆ ಶಿವಕುಮಾರ್ ಫುಲ್ ಡಿಫರೆಂಟು. ಅವರು ಅಜ್ಜಯ್ಯನ ಪೀಠದ ಜ್ಯೋತಿಷ್ಯವಾಣಿ, ರಾಜಗುರು ಎಂದೇ ಕರೆಸಿಕೊಳ್ಳುವ ದ್ವಾರಕಾಥ್ ಅವರ ಭವಿಷ್ಯ ಎಲ್ಲವನ್ನೂ ನಂಬುತ್ತಾರೆ. ನಾನು ಜ್ಯೋತಿಷ್ಯವನ್ನ ನಂಬ್ತೇನೆ ಅಂಥಾ ಬಹಿರಂಗವಾಗಿಯೇ ಹೇಳ್ಕೊಳ್ಳೋ ಡಿಕೆ ಶಿವಕುಮಾರ್, ರಾಹುಕಾಲ, ಶುಭಘಳಿಗೆ, ಮುಹೂರ್ತ ಎಲ್ಲವನ್ನೂ ನಂಬ್ತಾರೆ.
ವೇದಾಂತಿ ರಾಜಕಾರಣಿ..!
ಡಿಕೆ ಶಿವಕುಮಾರ್ ವೇದಾಂತವನ್ನೂ ಮಾತಾಡ್ತಾರೆ. ಅದನ್ನ ಎಲ್ಲರೂ ಒಪ್ಪುತ್ತಾರೋ.. ಬಿಡುತ್ತಾರೋ.. ಬೇರೆ. ಡಿಕೆ ಶಿವಕುಮಾರ್ ಹೇಳೋದು ಅವರದ್ದೇ ವೇದಾಂತ. ಟೀಕೆಗಳಿಗೆ ತಲೆಕೆಡಿಸಿಕೊಳ್ಳಲ್ಲ. ಡಿಕೆ ಶಿವಕುಮಾರ್ ಇಷ್ಟೊಂದು ವೇದಾಂತವನ್ನು ಎಲ್ಲಿಂದ ಕಲಿತರು ಎಂದರೆ ಡಿಕೆ ಶಿವಕುಮಾರ್ ಸುಮ್ಮನೆ ನಗುತ್ತಾರಷ್ಟೇ. ಅವರಿಗೆ ವೇದ, ವೇದಾಂತ, ರಾಜಕೀಯ, ಚದುರಂಗ ಎಲ್ಲವೂ ಗೊತ್ತು. ವರ್ತನೆಯಲ್ಲಿ ಮಾತ್ರ ಡೈರೆಕ್ಟ್ ಹಿಟ್ ಮಾಡೆಲ್. ಇದನ್ನು ತಿದ್ದಿಕೊಳ್ಳಿ, ರಾಜಕೀಯವಾಗಿ ಲಾಭವಾಗುತ್ತದೆ ಎಂದು ಅದೆಷ್ಟು ಜನ ಹೇಳಿದ್ದಾರೋ.. ಏನೋ.. ಅಲ್ಲಿಯೂ ಡಿಕೆ ಶಿವಕುಮಾರ್ ಕಂಪ್ಲೀಟ್ ಡಿಫರೆಂಟ್. ತಾವು ಇರೋದೇ ಹೀಗೇ ಎನ್ನುವಂತೆ ವರ್ತಿಸ್ತಾರೆ.
ಹಿಂದೂ.. ಹಿಂದುತ್ವ..!
ಡಿಕೆ ಶಿವಕುಮಾರ್ ಅವರು ಕುಕ್ಕರ್ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಅರೆಸ್ಟ್ ಆದ ಆರೋಪಿ ಶಾರೀಕ್ ಪರ ಅವರು ನನ್ನ ಬ್ರದರ್ಸ್ ಎಂದಿದ್ದದ್ದು ಭಾರೀ ಸುದ್ದಿಯಾಗಿತ್ತು. ಡಿಕೆ ಶಿವಕುಮಾರ್ ಹಿಂದೂ ವಿರೋಧಿ ಎಂದು ಬಿಂಬಿಸಲಾಗಿತ್ತು. ಇನ್ನು ಡಿಕೆ ಶಿವಕುಮಾರ್ ಇರೋ ಕಾಂಗ್ರೆಸ್ಸಿನಲ್ಲಿ ಬಹುತೇಕ ಜನ ಹಿಂದೂ ಧರ್ಮವನ್ನ, ಹಿಂದುತ್ವವನ್ನ ಒಪ್ಪೋದಿಲ್ಲ. ಅದು ಬಿಜೆಪಿ ಸೇರಿದಂತೆ ಇತರೆ ಪಕ್ಷಗಳ ಆರೋಪವೂ ಹೌದು. ಹಿಂದೂ ಧರ್ಮವನ್ನ, ಹಿಂದೂ ಧರ್ಮದ ಮೌಢ್ಯವನ್ನ ಅವರದ್ದೇ ಪಕ್ಷದ ನಾಯಕರು ಟೀಕೆ ಮಾಡ್ತಾ ಇದ್ರೆ, ಡಿಕೆ ಶಿವಕುಮಾರ್ ಹೇಳೋದೇ ಬೇರೆ. ನಾನು ಹಿಂದೂ. ಹಿಂದೂ ಆಗಿಯೇ ಹುಟ್ಟಿದ್ದೇನೆ. ಹಿಂದೂ ಆಗಿಯೇ ಸಾಯ್ತೇನೆ ಅಂತಾರೆ.
ಎದುರಾಳಿಗಳ ಜೊತೆ ಸ್ನೇಹ..!
ಡಿಕೆ ಶಿವಕುಮಾರ್ ಹೋರಾಟಕ್ಕೆ ಬಂದರೆ ಯಡಿಯೂರಪ್ಪರನ್ನೂ ನೋಡಲ್ಲ, ದೇವೇಗೌಡರನ್ನೂ ನೋಡಲ್ಲ. ಮೋದಿಯನ್ನೂ ಬಿಡಲ್ಲ. ಆದರೆ ಅದು ಜಸ್ಟ್ ಪಾಲಿಟಿಕ್ಸ್. ರಾಜಕೀಯದ ಹೊರಗೆ ಬಂದ್ರೆ, ಡಿಕೆ ಯಡಿಯೂರಪ್ಪ, ದೇವೇಗೌಡ, ಮೋದಿ ಎಲ್ಲರ ಜೊತೆಯಲ್ಲೂ ಚೆನ್ನಾಗಿಯೇ ಇರ್ತಾರೆ. ಕುಂಭಮೇಳಕ್ಕೆ ಹೋಗಿದ್ದ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನ, ಯೋಗಿ ಸರ್ಕಾರ ಮಾಡಿದ್ದ ವ್ಯವಸ್ಥೆಗಳನ್ನ ಹೊಗಳಿದ್ರು. ಆದರೆ ಕಾಂಗ್ರೆಸ್ಸಿಗರು ಯೋಗಿ ಆದಿತ್ಯನಾಥ್ ಅವರನ್ನ ಟೀಕೆ ಮಾಡ್ತಿದ್ರೆ, ಡಿಕೆ ಡಿಫರೆಂಟ್. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಯಾರು ಅಂತಾನೇ ಗೊತ್ತಿಲ್ಲ ಅಂದಿದ್ದ ಸದ್ಗುರು ಜೊತೆ ವೇದಿಕೆ ಹಂಚಿಕೊಳ್ತಾರೆ. ರಾಹುಲ್ ಗಾಂಧಿ ಪದೇ ಪದೇ ಟೀಕೆ ಮಾಡೋ ಅಂಬಾನಿ ಕುಟುಂಬದ ಮದುವೆಗೂ ಹೋಗಿ ಬರ್ತಾರೆ.
ಈಗ ಡಿಕೆ ಶಿವಕುಮಾರ್ ಅವರ ಈ ವ್ಯಕ್ತಿತ್ವವೇ ಚರ್ಚೆಯಾಗ್ತಾ ಇದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕುಂಭಮೇಳವನ್ನ ಟೀಕೆ ಮಾಡಿದ್ರು. ರಾಹುಲ್ ಗಾಂಧಿ, ಸೋನಿಯಾ, ಪ್ರಿಯಾಂಕಾ ಯಾರೂ ಕೂಡಾ ಕುಂಭಮೇಳಕ್ಕೆ ಹೋಗಲಿಲ್ಲ. ಅದೇ ಕುಂಭಮೇಳಕ್ಕೆ ಡಿಕೆ ಶಿವಕುಮಾರ್ ಹೋಗಿ ಬಂದು, ಯೋಗಿಯನ್ನ ಹೊಗಳಿದ್ದೂ ಆಯ್ತು.
ಇನ್ನು ಈಗ ಸದ್ಗುರು ಮತ್ತು ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡು ನಾನೇ ಬೇರೆ.. ನನ್ನ ಸ್ಟೈಲೇ ಬೇರೆ ಅನ್ನೋ ಮೆಸೇಜ್ ಕೊಟ್ಟಿದ್ದಾರೆ ಡಿಕೆ ಶಿವಕುಮಾರ್.
ಮಹೇಶ್ ಕುಮಾರ್ ಕೆ.ಎಲ್. ಕಂಟೆಂಟ್ ಎಡಿಟರ್, ಗ್ಯಾರಂಟಿ ನ್ಯೂಸ್