ಸರ್ಕಾರ ಜನರ ಋಣ ತೀರಿಸುವ ಕೆಲಸ ಮಾಡುತ್ತಿದೆ: ಡಿ.ಕೆ ಶಿವಕುಮಾರ್

Untitled design 2025 04 27t213920.069

ದೇವನಹಳ್ಳಿ, ಏ.27: “ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದರ ಜತೆಗೆ, ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ರಾಜ್ಯದ ಜನರ ಋಣ ತೀರಿಸುವ ಕೆಲಸ ಮಾಡುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ದೇವನಹಳ್ಳಿಯಲ್ಲಿ ಭಾನುವಾರ ನಡೆದ ಸಾಧನಾ ಸಮಾವೇಶ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ADVERTISEMENT
ADVERTISEMENT

“ಇದು ಸಾಧನೆಯ ಸಮಾವೇಶ. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಈಶ್ವರ. ರಾಜ್ಯದ ಮತದಾರರು 136 ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ನಮಗೆ ಅಧಿಕಾರ ಕೊಟ್ಟಿದ್ದೀರಿ. ಇಬ್ಬರು ಪಕ್ಷೇತರರು ಹಾಗೂ ಮತ್ತಿಬ್ಬರು ಶಾಸಕರು ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಆಮೂಲಕ ನಮ್ಮದು 140 ಸಂಖ್ಯಾಬಲದ ಸರ್ಕಾರ. ಈ ಸರ್ಕಾರ ಇಂದು ನಿಮ್ಮ ಋಣ ತೀರಿಸುವ ಕೆಲಸ ಮಾಡಿದೆ” ಎಂದು ತಿಳಿಸಿದರು.

“ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಮುನಿಯಪ್ಪ ಅವರ ನೇತೃತ್ವದಲ್ಲಿ ಶರತ್ ಬಚ್ಛೆಗೌಡ ಶ್ರೀನಿವಾಸ್ ವೆಂಕಟರಮಣಪ್ಪ ಅವರ ಸಹಕಾರ ಪರಿಷತ್ ಸದಸ್ಯರಾದ ರಾಮೋಜಿ ಗೌಡರು ಹಾಗೂ ರವಿ ಅವರ ಬೆಂಬಲದೊಂದಿಗೆ ಜಿಲ್ಲೆಯಲ್ಲಿ ಅದ್ಭುತವಾದ ಸಾಧನೆ ಮಾಡಲಾಗಿದೆ” ಎಂದರು.

“ದೀಪ ಮಾತನಾಡುವುದಿಲ್ಲ, ಬೆಳಕನ್ನು ಮಾತ್ರ ನೀಡುತ್ತದೆ. ದೀಪದೊಳಗಿರುವ ಎಣ್ಣೆ ಹಾಗೂ ಬತ್ತಿ ಉರಿದು ಬೆಳಕು ನೀಡುತ್ತದೆ. ಎಷ್ಟೇ ಸಮಸ್ಯೆ ಬಂದರೂ ನಿಮ್ಮ ಬದುಕು ಬದಲಿಸಬೇಕು ಎಂದು ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ 90% ಜನರಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಹಸಿದವರಿಗೆ ಅನ್ನ, ಮಹಿಳೆಯರಿಗೆ 2 ಸಾವಿರ ಆರ್ಥಿಕ ನೆರವು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ” ಎಂದು ಹೇಳಿದರು.

“ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ ಗಗನಕ್ಕೆ ಏರಿ, ಆದಾಯ ಪಾತಾಳಕ್ಕೆ ಕುಸಿದು ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಅವರ ಬದುಕು ರಕ್ಷಣೆಗೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಈ ಯೋಜನೆ ಜಾರಿಗೆ ಅನುಮೋದನೆ ನೀಡಲಾಯಿತು” ಎಂದರು.

“ಹಸಿದವನಿಗೆ ಅನ್ನದ ಬೆಲೆ, ಕಷ್ಟ ಅನುಭವಿಸದವನಿಗೆ ತಾಳ್ಮೆ ಬೆಲೆ ತಿಳಿಯುತ್ತದೆ. ಸೋತವನಿಗೆ ಗೆಲುವಿನ ದಾರಿ ತಿಳಿಯುತ್ತದೆ. ಅದೇ ರೀತಿ ಕಳೆದ ಸರ್ಕಾರದಲ್ಲಿ ಜನ ಅನುಭವಿಸಿದ ಕಷ್ಟ ನೋಡಿ ನಾವು ಈ ಯೋಜನೆಗಳನ್ನು ನೀಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪುಟಾಣಿ ಮಕ್ಕಳಿಂದ ವೃದ್ಧಾರವರೆಗೆ ಎಲ್ಲಾ ವರ್ಗದ ಜನರಿಗೂ ಯೋಜನೆಗಳನ್ನು ನೀಡುತ್ತಾ ಬಂದಿದೆ. ಬಿಜೆಪಿ ಸರ್ಕಾರ ಯಾವುದಾದರೂ ಒಂದು ಇಂತಹ ಕಾರ್ಯಕ್ರಮ ನೀಡಿತ್ತಾ?” ಎಂದು ಪ್ರಶ್ನಿಸಿದರು.

“ಕೇಂದ್ರದಲ್ಲಿ ಯುಪಿಎ ಸರ್ಕಾರ ಶಿಕ್ಷಣದ ಹಕ್ಕು, ಆಹಾರ ಭದ್ರತೆ, ಮಾಹಿತಿ ಹಕ್ಕು, ಉದ್ಯೋಗ ಖಾತರಿ ಯೋಜನೆಗಳನ್ನು ನೀಡಿದೆ. ಇದೆಲ್ಲವೂ ಜನರಿಗಾಗಿ ಮಾಡಿದ ಯೋಜನೆ. ರಾಜ್ಯವನ್ನು ಪೋಡಿ ಸಮಸ್ಯೆ ಮುಕ್ತರಾಜ್ಯ ಮಾಡಲು ಕಂದಾಯ ಇಲಾಖೆಯಲ್ಲಿ ವಿಭಿನ್ನ ಯೋಜನೆ ರೂಪಿಸಲಾಗಿದೆ. ನೀವು ಕೊಟ್ಟ ಶಕ್ತಿಯಿಂದ ನಮ್ಮ ಸರ್ಕಾರ ಉತ್ತಮ ಆಡಳಿತಕ್ಕೆ ಮಾದರಿಯಾಗಿದೆ. ಕಾಂಗ್ರೆಸ್ ಪಕ್ಷ ಜನಪರ ಯೋಜನೆಗಳ ಜತೆಗೆ ಸಂವಿಧಾನ ನೀಡಿದೆ, ಆಮೂಲಕ ಜನರಿಗೆ ಶಕ್ತಿ, ರಕ್ಷಣೆ ನೀಡಿದೆ” ಎಂದರು.

“4 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಧ್ಯೆಯದೊಂದಿಗೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ” ಎಂದು ಹೇಳಿದರು.

“ಬಿಜೆಪಿ ಹಾಗೂ ದಳದವರಿಗೆ ನಿಮ್ಮ ಸಾಕ್ಷಿಗುಡ್ಡೆ ಏನು ಎಂದು ಕೇಳುತ್ತಿದ್ದೇನೆ.ರೈತರು, ಮಹಿಳೆಯರು, ಯುವಕರ ಬದುಕಿಗಾಗಿ ಏನು ಮಾಡಿದ್ದೀರಿ? ನಿಮಗೆ ಅಸೂಯೆ ಹೆಚ್ಚಾಗಿದೆ. ಹೀಗಾಗಿ ಏನಾದರೂ ಮಾಡಿ ಈ ಸರ್ಕಾರ ತೆಗೆಯಬೇಕು ಎಂದು ಕೇಂದ್ರ ಸಚಿವರು ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಇಬ್ಬರೂ ಜೋಡಿಯಾಗಿದ್ದಾರೆ. ಇನ್ನೂ ನಾಲ್ಕು ಜನ ಸೇರಿ ಜೋಡಿಯಾಗಲಿ. 2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದು ಸವಾಲು ಹಾಕಿದರು.

ರೈತರ ವಿರುದ್ಧ ಬಿಜೆಪಿ ಪ್ರತಿಭಟನೆ

ವಿರೋಧ ಪಕ್ಷದವರು ಯಾರಿಗೋಸ್ಕರ ಹೋರಾಟ ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ದನ ಕಾರುಗಳ ಮೇವು, ಇಂಡಿ, ಬೂಸಾ ಬೆಲೆ ಹೆಚ್ಚಾಗಿದೆ ಎಂದು ರೈತರು ಕಂಗಾಲಾಗಿದ್ದರು. ಅವರಿಗೆ ನೆರವಾಗಲು ನಮ್ಮ ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಿದೆ. ನಮ್ಮ ರಾಜ್ಯದಲ್ಲಿ ಬೆಲೆ ಏರಿಕೆಯಾದರೂ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲೇ ಹಾಲಿನ ಬೆಲೆ ಕಡಿಮೆ ಇದೆ. ರೈತರ ನೆರವಿಗೆ ಧಾವಿಸಿದ ನಮ್ಮ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ. ಆಮೂಲಕ ಬಿಜೆಪಿ ರೈತರ ವಿರುದ್ಧ ಹೋರಾಟ ಮಾಡುತ್ತಿದೆ” ಎಂದು ವಾಗ್ದಾಳಿ ನಡೆಸಿದರು.

“ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದರ ವಿರುದ್ಧ ಹೋರಾಡಲು ಬಿಜೆಪಿಯಿಂದ ಸಾಧ್ಯವಾಗಲಿಲ್ಲ. ನಿಜವಾಗಲೂ ಜನರು ಆಕ್ರೋಶ ವ್ಯಕ್ತಪಡಿಸಬೇಕಿರುವುದು ಬಿಜೆಪಿ ವಿರುದ್ಧ” ಎಂದು ಹರಿಹಾಯ್ದರು.

“ಪ್ರಜೆಗಳನ್ನು ಕಡೆಗಣಿಸಿ ಯಾವುದೇ ಕೆಲಸ ಮಾಡಿದರೂ ಪ್ರಯೋಜನವಿಲ್ಲ. ಪ್ರಜೆಗಳಿಗೋಸ್ಕಕರ ಕಾರ್ಯಕ್ರಮಗಳನ್ನು ನೀಡಬೇಕು ಎಂಬುದು ನಮ್ಮ ಆಲೋಚನೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಮೀಸಲಿಡಲಾಗಿದೆ. ಇದಕ್ಕೆ ನೀವು ಬೆಂಬಲವಾಗಿ ನಿಲ್ಲಬೇಕು. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಬೇಕು. ಈ ಭಾಗದ ಕಾಂಗ್ರೆಸ್ ಶಾಸಕರ ಅಭಿವೃದ್ಧಿ ಕೆಲಸಗಳು ಮಾದರಿಯಾಗಿವೆ. ಬಹಳ ಪ್ರಾಮಾಣಿಕತೆಯಿಂದ ಈ ಶಾಸಕರು ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

“ಚುನಾವಣೆ ಸಮಯದಲ್ಲಿ ನಾನು ಪ್ರಚಾರ ಮಾಡುವಾಗ ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈ ಅಧಿಕಾರದಲ್ಲಿ ಇದ್ದ ಕಾರಣ ಈ ಯೋಜನೆಗಳು ಜಾರಿಯಾಗಿವೆ” ಎಂದು ತಿಳಿಸಿದರು.

Exit mobile version