ಚಿಕ್ಕಬಳ್ಳಾಪುರ: ಜಿಲ್ಲೆಯ ಮಂಚೇನಹಳ್ಳಿ ಬಳಿ ಕಲ್ಲು ಕ್ವಾರಿ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಭಾರೀ ಸಂಘರ್ಷ ಸಂಭವಿಸಿದೆ. ಈ ಸಂದರ್ಭ ಗಣಿ ಮಾಲೀಕ ಸಕಲೇಶ್ ಎಂಬವರು ಶೂಟಿಂಗ್ ಮಾಡಿದ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ರೈತ ರವಿ ಎಂಬುವವರು ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಂಡಿರಾಮನಹಳ್ಳಿ, ಕನಗಾನಕೊಪ್ಪ, ರಾಯನಕಲ್ಲು ಗ್ರಾಮಗಳ ಬೆಟ್ಟಗುಡ್ಡಗಳಲ್ಲಿ ಕಲ್ಲು ಗಣಿಗಾರಿಕೆ ಪ್ರಾರಂಭವಾಗಲಿದೆ. ಈ ಗಣಿಗಾರಿಕೆಗೆ ಸೌಲಭ್ಯ ಒದಗಿಸಲು ರಸ್ತೆ ನಿರ್ಮಾಣ ನಡೆಯುತ್ತಿದ್ದು, ಲಾರಿಗಳ ಸಂಚಾರಕ್ಕೆ ದಾರಿ ಮಾಡಿಕೊಡುವ ಕಾರ್ಯ ಪ್ರಾರಂಭಿಸಲಾಗಿತ್ತು. ಆದರೆ ಸ್ಥಳೀಯರು, ಈ ಕೆಲಸಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಪರಿಸರ ಹಾನಿ, ರೈತರಿಗೆ ಆಗುವ ತೊಂದರೆಗಳ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇದಕ್ಕೆ ವಿರೋಧಿಸುತ್ತಿದ್ದರು.
ರಸ್ತೆ ನಿರ್ಮಾಣದ ಸಂದರ್ಭ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ವಾಗ್ವಾದ ತೀವ್ರಗೊಂಡು, ಗಲಾಟೆಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಕಲ್ಲು ತೂರಾಟ ಆರಂಭಿಸಿದ ನಂತರ, ಗಣಿ ಮಾಲೀಕ ಸಕಲೇಶ್ ತಮ್ಮ ರಿವಾಲ್ವರ್ ಅನ್ನು ಹೊರತೆಗೆದು ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ರೈತ ರವಿ ಎಂಬುವವರ ತೊಡೆಗೆ ಗುಂಡು ತಾಗಿದ್ದು, ತೀವ್ರ ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.
ಪ್ರತಿಭಟನೆಯ ವೇಳೆ, ಗಣಿ ಮಾಲೀಕ ಸಕಲೇಶ್ ಮೇಲೆ ಯಾರೋ ಕಲ್ಲು ಎಸೆದಿದ್ದಾರೆ. ಈ ಕಾರಣವಾಗಿ ಆತ್ಮರಕ್ಷಣೆಗಾಗಿ ಶೂಟ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಘಟನೆಯ ಬಳಿಕ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸಕಲೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಶಸ್ತ್ರಾಸ್ತ್ರದ ಅಕ್ರಮ ಬಳಕೆ, ಹತ್ಯೆ ಯತ್ನ ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.