ರಾಜ್ಯ ಸರ್ಕಾರವು ಗೊಲ್ಲ ಸಮುದಾಯದ ಜನಸಂಖ್ಯೆಯನ್ನು ತಪ್ಪಾಗಿ ತೋರಿಸಲಾಗಿದೆ. ವರದಿಯಲ್ಲಿ ಕೇವಲ 10 ಲಕ್ಷ ಜನಸಂಖ್ಯೆ ಇದೆ ಅಂತಾ ಹೇಳಿರುವುದನ್ನ ಒಪ್ಪಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಹೇಳಿದ್ದಾರೆ. ಇದನ್ನು ಸರ್ಕಾರವು ಕೊಡಲೇ ಸರಿ ಪಡಿಸಬೇಕು ಎಂದು ಗೊಲ್ಲ ಸಮುದಾಯದ ಮೀಸಲಾತಿ ಹಕ್ಕುಗಳ ವಿಚಾರ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಗೊಲ್ಲ ಸಮುದಾಯದ ಜನ ಸಂಖ್ಯೆ ಸುಮಾರು 30 ಲಕ್ಷಕಿಂತ ಹೆಚ್ಚಾಗಿರುತ್ತದೆ, ನಮ್ಮ ಸಮುದಾಯವನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಿದ್ದು ಒಟ್ಟಾರೆಯಾಗಿ ಗೊಲ್ಲರು ಅತೀ ಹಿಂದುಳಿದ ವರ್ಗಗಳಲ್ಲಿ ಇವೆ.
“ಈಗಾಗಲೇ 95 ಜಾತಿಗಳು ಪ್ರವರ್ಗ-1 ರಲ್ಲಿ ಇದ್ದವು. ಈಗ ಆ ಸಂಖ್ಯೆಯನ್ನು 147 ಜಾತಿಗಳವರೆಗೆ ವಿಸ್ತರಿಸಲಾಗಿದೆ. ಆದರೆ ಗೊಲ್ಲ ಸಮುದಾಯದಲ್ಲಿರುವ ಉಪಜಾತಿಗಳ ನಡುವೆ ಭೇದ ಮಾಡಲಾಗಿದೆ. ಗೊಲ್ಲರನ್ನು 1ಎ ವಿಭಾಗಕ್ಕೆ ಸೇರಿಸಿದ್ದ, ಯಾದವ್ ಸಮುದಾಯವನ್ನು ಮಾತ್ರ 1ಬಿ ವಿಭಾಗಕ್ಕೆ ಸೇರಿಸಿರುವುದು ನ್ಯಾಯವಲ್ಲ” ಎಂದು ಹೇಳಿದರು.
“ಗೊಲ್ಲ-ಯಾದವ ವಿಭಜನೆ ಅನ್ಯಾಯ”
ಗೊಲ್ಲ ಸಮುದಾಯದಲ್ಲಿ 28ಕ್ಕೂ ಹೆಚ್ಚು ಉಪಜಾತಿಗಳಿವೆ. ಇವುಗಳಲ್ಲಿ ಯಾದವ್, ಹಣಬಾರ್, ಕಾಡುಗೊಲ್ಲ ಮುಂತಾದ ಪ್ರಮುಖ ಸಮುದಾಯಗಳು ಸೇರಿವೆ. “ನಾವು ಎಲ್ಲರೂ ಗೊಲ್ಲರ ಪರಂಪರೆಯವರು. ನಮ್ಮ ನಡುವೆ ವಿಭಾಗವನ್ನೆಬ್ಬಿಸಿ, ಬೇರೆ ಬೇರೆ ವರ್ಗಗಳಲ್ಲಿ ಹಾಕಿದರೆ, ಅದು ನಮ್ಮ ಹಕ್ಕುಗಳ ಮೇಲೆ ತೀವ್ರ ಹಾನಿಯನ್ನು ಉಂಟುಮಾಡುತ್ತದೆ,” ಎಂದು ಅವರು ಹೇಳಿದ್ದಾರೆ.
ಸರಕಾರದ ವರದಿಯಲ್ಲಿ ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯವನ್ನು ಪ್ರವರ್ಗ 1ಎ ಯಲ್ಲಿ ಸೇರಿಸಲಾಗಿದೆ. ಆದರೆ ಯಾದವ್ ಸಮುದಾಯವನ್ನು ಮಾತ್ರ 1ಬಿ ಗೆ ವರ್ಗಾವಣೆ ಮಾಡಿರುವುದು, ಗೊಲ್ಲ ಸಮುದಾಯವನ್ನು ಉದ್ದೇಶಪೂರ್ವಕವಾಗಿ ವಿಭಜಿಸುವ ನಡೆ ಎಂದು ನಾಗರಾಜ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ..
“ಕ್ರೀಮಿ ಲೇಯರ್ ನಿರ್ಧಾರ ಸರಿಯಲ್ಲ”
ಸರಕಾರದ ವರದಿಯ ಪ್ರಕಾರ, ಪ್ರವರ್ಗ 1ಎ ಯಲ್ಲಿ ಬರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಜಾತಿಗಳಿಗೆ “ಕ್ರೀಮಿ ಲೇಯರ್” ನಿಯಮವನ್ನು ಅಳವಡಿಸಲು ಶಿಫಾರಸು ಮಾಡಲಾಗಿದೆ. “ನಮ್ಮ ಸಮುದಾಯವು ಶತಮಾನಗಳಿಂದ ಹಿಂದುಳಿದ ಸ್ಥಿತಿಯಲ್ಲಿದೆ. ಶಿಕ್ಷಣ, ಉದ್ಯೋಗ, ಆರ್ಥಿಕ ಅಭಿವೃದ್ಧಿಯಲ್ಲಿ ಬಹುತೇಕ ಭಾಗ ಹಿಂದುಳಿದೆಯೆಂದರೆ, ಅವರಿಗೆ ಯಾವ ಆಧಾರದ ಮೇಲೆ ಕ್ರೀಮಿ ಲೇಯರ್ ಹೇರಲಾಗುತ್ತಿದೆ?” ಎಂದು ಅವರು ಪ್ರಶ್ನಿಸಿದರು.
“ತೆಲಂಗಾಣ ಮಾದರಿಯಲ್ಲಿ ಮೀಸಲಾತಿ ವಿಸ್ತರಣೆ ಅಗತ್ಯ”
ನಾಗರಾಜ್ ಯಾದವ್ ಅವರು ತೆಲಂಗಾಣ ಮಾದರಿಯನ್ನು ಉದಾಹರಣೆಯಾಗಿ ನೀಡಿದರು. “ಅಲ್ಲಿ ಹೇಗೆ ಮೀಸಲಾತಿಯನ್ನು ಸಮುದಾಯದ ಜನಸಂಖ್ಯೆ ಆಧಾರದ ಮೇಲೆ ವಿಸ್ತರಿಸಲಾಗಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿಯೂ ಆಗಬೇಕು. 147 ಜಾತಿಗಳನ್ನು ಪ್ರವರ್ಗ 1 ರಲ್ಲಿ ಸೇರಿಸಿದ್ದಕ್ಕೆ ಕನಿಷ್ಠ 8% ರಿಂದ 10% ವರೆಗೆ ಮೀಸಲಾತಿ ನೀಡಬೇಕು” ಎಂದು ಒತ್ತಡ ಹೇರಿದರು.
“ಸರ್ಕಾರ ಎಚ್ಚರವಾಗಬೇಕು, ಇಲ್ಲವಾದರೆ ಹೋರಾಟ”
“ಈ ವರದಿಯಲ್ಲಿ ಕೊನೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು, ಸರ್ಕಾರವು ಸ್ಪಷ್ಟ ಹಾಗೂ ಸಮಾನತೆಯ ಅಭಿಪ್ರಾಯ ಸಂಗ್ರಹಿಸಬೇಕು. ಇತರ ಹಿಂದುಳಿದ ಸಮುದಾಯಗಳ ಹಕ್ಕುಗಳಿಗೆ ಧಕ್ಕೆ ಉಂಟುಮಾಡಬಾರದು. ಇಲ್ಲವಾದರೆ, ನಾವು ಹೋರಾಟಕ್ಕೆ ಇಳಿಯುವುದು ಅನಿವಾರ್ಯ” ಎಂದು ನಾಗರಾಜ್ ಯಾದವ್ ಎಚ್ಚರಿಸಿದರು.