ಬೆಂಗಳೂರು, ಏಪ್ರಿಲ್ 1: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಟೂರ್ನಿಯ ಹೊಸ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ತವರಿನಲ್ಲಿ ಮೊದಲ ಪಂದ್ಯವನ್ನು ಆಡಲು ಸಜ್ಜಾಗಿದೆ. ಬುಧವಾರ, ಏಪ್ರಿಲ್ 2ರಂದು ಗುಜರಾತ್ ಟೈಟನ್ಸ್ ವಿರುದ್ಧ ನಡೆಯುವ ಈ ಮಹತ್ವದ ಪಂದ್ಯಕ್ಕಾಗಿ ಬೆಂಗಳೂರು ಮೆಟ್ರೋ ತನ್ನ ಸಂಚಾರ ಸೇವೆಗಳನ್ನು ವಿಸ್ತರಿಸುವ ಘೋಷಣೆ ಮಾಡಿದೆ. ಬಿಎಂಆರ್ಸಿಎಲ್ (BMRCL) ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಮಧ್ಯರಾತ್ರಿ 12.30ರವರೆಗೆ ಮೆಟ್ರೋ ಸೇವೆ ವಿಸ್ತರಣೆ
ಐಪಿಎಲ್ ಪಂದ್ಯಾವಳಿಯ ಪ್ರಯುಕ್ತ ಬೆಂಗಳೂರು ಮೆಟ್ರೋ ತನ್ನ ಸೇವೆಗಳನ್ನು ರಾತ್ರಿ 12.30ರವರೆಗೆ ವಿಸ್ತರಿಸಿದೆ. Bengaluru Metro Rail Corporation Limited (BMRCL) ಈ ನಿರ್ಧಾರವನ್ನು ಕ್ರಿಕೆಟ್ ಅಭಿಮಾನಿಗಳಿಗೆ ಅನುಕೂಲವಾಗುವಂತೆ ತೆಗೆದುಕೊಂಡಿದೆ. ಮೆಟ್ರೋ ಸೇವೆಯ ವಿಸ್ತರಣೆಗೊಂದು ನಿರ್ದಿಷ್ಟ ದಿನಾಂಕವನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ಜನರು ತಡರಾತ್ರಿ ಬಹುಸಂಖ್ಯೆಯಲ್ಲಿ ಮೆಟ್ರೋ ಪ್ರಯಾಣವನ್ನು ಬಳಸಿಕೊಳ್ಳಬಹುದಾಗಿದೆ.
ಬೆಂಗಳೂರು ಮೆಟ್ರೋ ಆಡಳಿತ ಮಂಡಳಿಯ ಪ್ರಕಾರ, ಈ ವಿಶೇಷ ಸೇವೆ ನೀಡುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದರೊಂದಿಗೆ, ನಗರದಲ್ಲಿ ಸಂಚಾರ ದಟ್ಟಣೆಯ ಪ್ರಮಾಣವೂ ಕಡಿಮೆಯಾಗಲಿದೆ. ಮೆಟ್ರೋ ಸೇವೆಯ ವಿಸ್ತರಣೆ ಇಂತಹ ಹೆಚ್ಚಿನ ಸಾರ್ವಜನಿಕ ಈವೆಂಟ್ಗಳಿಗೆ ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕ್ರಿಕೇಟ್ ಪ್ರೇಮಿಗಳಿಗೆ ಶುಭಸುದ್ದಿ- ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2025 ಪಂದ್ಯಗಳಿಗೆ ಮೆಟ್ರೋ ಸೇವೆಯನ್ನು ಮರುದಿನ ಮುಂಜಾನೆ 12.30ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಪ್ರಕಟನೆಯನ್ನು ಪರಿಶೀಲಿಸಿ pic.twitter.com/6QEKgv0eaZ
— ನಮ್ಮ ಮೆಟ್ರೋ (@OfficialBMRCL) April 1, 2025
ಮೆಟ್ರೋ ರೈಲು ಸೇವೆ ವಿಸ್ತರಣೆ ದಿನಾಂಕಗಳು
ನಮ್ಮ ಮೆಟ್ರೋ ಈ ಕೆಳಗಿನ ದಿನಾಂಕಗಳಲ್ಲಿ ಮಧ್ಯರಾತ್ರಿ 12.30ರವರೆಗೆ ಕಾರ್ಯನಿರ್ವಹಿಸಲಿದೆ:
- ಏಪ್ರಿಲ್: 2, 10, 18, 24
- ಮೇ: 3, 13, 17
ಈ ದಿನಗಳಲ್ಲಿ ಎಲ್ಲಾ ನಾಲ್ಕು ಟರ್ಮಿನಲ್ ನಿಲ್ದಾಣಗಳಾದ ಕಾಡುಗೋಡಿ, ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ರಾತ್ರಿ 12.30ಕ್ಕೆ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣದಿಂದ ಎಲ್ಲಾ ಮಾರ್ಗಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 01.15ಕ್ಕೆ ಹೊರಡಲಿದ್ದು, ಇದು ಆಟದ ನಂತರ ಸಂಚಾರ ಮಾಡಲು ಅಭಿಮಾನಿಗಳಿಗೆ ಹೆಚ್ಚು ಅನುಕೂಲ ಮಾಡಿಕೊಡಲಿದೆ.
ಆರ್ಸಿಬಿ ವಿರುದ್ಧ ಗುಜರಾತ್ ಟೈಟನ್ಸ್
ಐಪಿಎಲ್ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆರ್ಸಿಬಿ ಈ ಪಂದ್ಯವನ್ನು ಜಯಿಸುವುದರ ಮೂಲಕ ತನ್ನ ಉತ್ತಮ ಫಾರ್ಮ್ ಮುಂದುವರಿಸಲು ಉತ್ಸುಕವಾಗಿದೆ. ತಂಡ ಈಗಾಗಲೇ ಬೆಂಗಳೂರು ತಲುಪಿದ್ದು, ಪಂದ್ಯಕ್ಕಾಗಿ ತೀವ್ರ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ರಾತ್ರಿ 7:30ಕ್ಕೆ ಆರಂಭವಾಗಲಿದ್ದು, ಟಾಸ್ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ. ಆರ್ಸಿಬಿ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಲು ಕಾತರರಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಐಪಿಎಲ್ ಪಂದ್ಯಾವಳಿಯ ಸಂದರ್ಭದಲ್ಲಿ ರಸ್ತೆ ಸಂಚಾರದಲ್ಲಿ ಭಾರಿ ತೊಂದರೆಯುಂಟಾಗಬಹುದು. ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಗೆ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ವೈಯಕ್ತಿಕ ವಾಹನಗಳ ಬಳಕೆ ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆ ಅಥವಾ ಮೆಟ್ರೋ ಸೇವೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲು ವಿನಂತಿ ಮಾಡಿದ್ದಾರೆ. ಇದರಿಂದ ಸಂಚಾರದ ಸುಗಮವಾಗಲಿದ್ದು, ವಾಹನ ದಟ್ಟಣೆ ತಪ್ಪಿಸಲು ಸಹಾಯವಾಗಲಿದೆ.