ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಭಯಾನಕ ಭಯೋತ್ಪಾದಕ ದಾಳಿ ನಡೆದಿದೆ. ಈ ಘಟನೆಯಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಗೆ ಸೇರಿದ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ತಮ್ಮ ಕುಟುಂಬದೊಂದಿಗೆ ಪ್ರವಾಸದಲ್ಲಿದ್ದ ವೇಳೆ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.
ಮಂಜುನಾಥ್ ರಾವ್ ತಮ್ಮ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತ್ ಜೊತೆ ಜಮ್ಮು-ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಮಂಗಳವಾರ ಮಧ್ಯಾಹ್ನ ಪಹಲ್ಗಾಮ್‌ನ ಬೈಸರನ್ ಕಣಿವೆಯ ಬಳಿ ಕುಟುಂಬದೊಂದಿಗೆ ರಸ್ತೆ ಬದಿಯಲ್ಲಿ ಪಾನಿಪೂರಿ ತಿನ್ನುತ್ತಾ ಇದ್ದಾಗ, ಸೇನಾ ಸಮವಸ್ತ್ರ ಧರಿಸಿದ ಇಬ್ಬರು ಭಯೋತ್ಪಾದಕರು ಅವರ ಬಳಿ ಬಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಉಗ್ರರು ಮೊದಲು ಮಂಜುನಾಥ್ ರಾವ್ ಅವರ ಹೆಸರು ಮತ್ತು ಧರ್ಮವನ್ನು ಕೇಳಿದ ಬಳಿಕ ತಕ್ಷಣವೇ ಅವರ ತಲೆಗೆ ಗುಂಡು ಹಾರಿಸಿದ್ದಾರೆ.
ಈ ಘಟನೆಯಲ್ಲಿ ಮಂಜುನಾಥ್ ರಾವ್ ಮಾತ್ರವಲ್ಲದೇ ಇನ್ನೂ ಕನಿಷ್ಠ 12 ಮಂದಿ ಪ್ರವಾಸಿಗರು ಮತ್ತು ಸ್ಥಳೀಯರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವು ಮಕ್ಕಳೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಉಗ್ರರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಹೆಲಿಕಾಪ್ಟರ್‌ಗಳ ಸಹಾಯದಿಂದ ಪಹಲ್ಗಾಮ್ ಸುತ್ತಮುತ್ತಲ ಪ್ರದೇಶವನ್ನು ನಿಖರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ದಾಳಿಯ ಕುರಿತಾಗಿ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಪಹಲ್ಗಾಮ್‌ಗೆ ಭೇಟಿ ನೀಡುವಂತೆ ಅವರು ಶಾ ಅವರಿಗೆ ಸೂಚಿಸಿದ್ದಾರೆ. ಇದರ ಬಳಿಕ ಶಾ ಅವರು ದೆಹಲಿಯಲ್ಲಿ ತುರ್ತು ಸಭೆ ಕರೆದಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ.
ಅಮಿತ್ ಶಾ ಇದೇ ತಿಂಗಳ 6 ರಿಂದ 8ರವರೆಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಭದ್ರತಾ ವ್ಯವಸ್ಥೆಯ ಸಮೀಕ್ಷೆ ನಡೆಸಿದ ಅವರು, ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರದ ಯೋಜನೆಗಳನ್ನು ಘೋಷಿಸಿದ್ದರು..