ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಪ್ರಧಾನಿಯಾದ ದೇವೇಗೌಡರಿಗೆ ಇದೀಗ ಅದೇ ಪ್ರಾದೇಶಿಕ ಪಕ್ಷ ಜೆಡಿಎಸ್ ನ ಅಳಿವು-ಉಳಿವಿನ ಚಿಂತೆ ಶುರುವಾಗಿದೆ. ಬಿಜೆಪಿ ಜೊತೆಗಿನ ಮೈತ್ರಿಯ ಬಳಿಕವಂತೂ ಪಕ್ಷದ ಕಾರ್ಯಕರ್ತರು, ಕಾರ್ಯಚಟುವಟಿಕೆಗಳ ಮೇಲೆ ದೊಡ್ಡಗೌಡರಿಗೆ ಒಳಗೊಳಗೆ ಆತಂಕ ಶುರುವಾದಂತಿದೆ. ರಾಜ್ಯದಲ್ಲಿ ಮತ್ತೆ ಪಕ್ಷವನ್ನ ಸಂಘಟಿಸಲೇಬೇಕು ಅಂತ ದೊಡ್ಡಗೌಡರು ಪಣ ತೊಟ್ಟಿದ್ದಾರೆ. ಪಕ್ಷ ಆಕ್ಟಿವ್ ಆಗಿರಲಿ ಅಂತ ಈ ಇಳಿ ವಯಸ್ಸಿನಲ್ಲಿಯೂ ತಿಂಗಳಿಗೊಂದು ಸಭೆ, ಸಮಾರಂಭ, ಸುದ್ದಿಗೋಷ್ಠಿ ಮಾಡುತ್ತಲೇ ಇದ್ದಾರೆ. ರಾಜ್ಯಸಭೆಯಲ್ಲಂತೂ ರಾಜ್ಯದ ವಿಚಾರಗಳ ಬಗ್ಗೆ ಹರಿತವಾದ ಭಾಷಣದ ಮೂಲಕ ಆಡಳಿತ ಪಕ್ಷಕ್ಕೆ ಚಾಟೀ ಬೀಸುವ ಕೆಲಸವನ್ನ ಮಾಡ್ತಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕೇಂದ್ರದ ಮಂತ್ರಿಯಾದ ಮೇಲೆ ರಾಜ್ಯದ ನಾಯಕರಿಗೆ ಸರಿಯಾಗಿ ಸಿಗ್ತಿಲ್ಲ ಎನ್ನುವ ಆರೋಪ ಪಕ್ಷದ ನಾಯಕರಿಂದಲೇ ಕೇಳಿ ಬರುತ್ತಿದೆ. ಕೆಲವು ಶಾಸಕರು ನೇರವಾಗಿಯೇ ಮಾಧ್ಯಮಗಳ ಮೂಲಕ ತಮ್ಮ ಅಸಮಾಧಾನ ತೋರಿಸಿದ್ದು, ಬೇರೆ ಬೇರೆ ಪಕ್ಷದಿಂದ ಆಹ್ವಾನ ಬಂದಿರೋದಾಗಿ ಹೇಳಿಕೊಂಡಿದ್ದಾರೆ. ಒಂದು ಕಡೆ ಕಾಂಗ್ರೆಸ್ ಆಪರೇಷನ್ ಮಾಡಲು ಮುಂದಾಗ್ತಿದೆ ಅನ್ನೋ ಗುಸು ಗುಸು ಕೇಳಿ ಬರುತ್ತಿದ್ದಂತೆ ದೊಡ್ಡಗೌಡರು ಅಲರ್ಟ್ ಆಗಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಶಾಸಕರು, ಮಾಜಿ ಶಾಸಕರು, ಹಿರಿಯ ನಾಯಕರ ಜೊತೆಗೆ ಸಭೆಗಳನ್ನ ನಡೆಸುವಂತೆ ಸೂಚನೆ ನೀಡಿದ್ದಾರೆ.
ಇದರ ಜೊತೆ ಜೊತೆಗೆ ಜೆಡಿಎಸ್ ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಬೇಕು ಅನ್ನೋದು ಕುಮಾರಸ್ವಾಮಿ ಅವರ ಕನಸು. ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಅನ್ನೋದೆನೋ ದೊಡ್ಡಗೌಡರು ನಿರ್ಣಯ ಮಾಡಿ ಆಗಿದೆ. ಆದರೆ ಎಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಯೂ ಪಕ್ಷಕ್ಕೆ ಸಂಕಷ್ಟ ತಂದೊಡ್ಡುತ್ತದೆ ಎನ್ನುವ ಭಯವೂ ಕೂಡ ಕಾಡುತ್ತಿರೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಪಕ್ಷವೂ ಉಳಿಯಬೇಕು, ನಿಖಿಲ್ ಕುಮಾರಸ್ವಾಮಿ ಪಟ್ಟಕ್ಕೇರಬೇಕು. ಈ ಎರಡು ಕನಸು ಕಟ್ಟಿಕೊಂಡಿರೋ ದೊಡ್ದಗೌಡರು ದೊಡ್ಡಮಟ್ಟದ ಚಿಂತನೆಯನ್ನು ನಡೆಸಿದ್ದಾರೆ. ರಾಜ್ಯದಲ್ಲಿ ಜೆಡಿಸ್ ಪಕ್ಷ ಉಳಿಯಲೇ ಬೇಕು ಎಂದಾದರೆ, ಜೆಡಿಎಸ್ ಸಮಾವೇಶಗಳು ನಡೆಯಲೇಬೇಕು ಎನ್ನೋದು ಕೂಡ ದೊಡ್ಡಗೌಡರು ಪಣ ತೊಟ್ಟಿದ್ದಾರೆ. ರಾಜ್ಯದಲ್ಲಿ ಮೂರು ತಿಂಗಳಲ್ಲಿ ನಾಲ್ಕು ದೊಡ್ಡ ಸಮಾವೇಶ ನಡೆಸೋದಕ್ಕೆ ಸೂಚನೆ ನೀಡಿರೋ ದೇವೇಗೌಡರು, ನಿಖಿಲ್ ಕುಮಾರಸ್ವಾಮಿ ಹೆಗಲಿಗೆ ಜವಾಬ್ದಾರಿ ನೀಡುವ ಜೊತೆಗೆ ಜಿಟಿ ದೇವೇಗೌಡರ ಪುತ್ರ ಹರೀಶ್ ಗೌಡರಿಗೂ ಮಣೆ ಹಾಕಿದ್ದಾರೆ.
ಜೆಡಿಎಸ್ ವಿರೋಧ ಪಕ್ಷದ ನಾಯಕ ಸ್ಥಾನ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರೋ ಜಿ ಟಿ ದೇವೇಗೌಡರು ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ದಿನದಿಂದ ದಿನಕ್ಕೆ ಕಾಂಗ್ರೆಸ್ ಪರ ಹೇಳಿಕೆಗಳು ನೀಡುತ್ತ, ಕುಮಾರಸ್ವಾಮಿ ವಿರುದ್ಧ ಕಿಡಿ ಕಾರುತ್ತಲೇ ಇದ್ದಾರೆ. ಇತ್ತ ಕೋರ್ ಕಮಿಟಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯೂ ಸಂತೃಪ್ತಿ ತಂದಿಲ್ಲ. ಪಕ್ಷದಲ್ಲಿದ್ದರೂ ಕೂಡ ಪಕ್ಷದ ಕಾರ್ಯಚಟುವಟಿಕೆಗಳಿಗೆ ಗೈರಾಗುತ್ತಲೇ ಬುಸುಗುಟ್ಟುವ ಕೆಲಸವನ್ನ ಮಾಡ್ತಿದ್ದಾರೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ದೊಡ್ಡಗೌಡರು, ಎಲ್ಲವನ್ನೂ ಸರಿದಾರಿಗೆ ತರಲು ತೆರೆಮರೆಯಲ್ಲಿ ತಂತ್ರ ಹೂಡಿದ್ದಾರೆ..
ಮೂರು ಬಾರಿ ಚುನಾವಣೆಯಲ್ಲಿ ನಿಂತು ಸೋಲು ಕಂಡಿರುವ ನಿಖಿಲ್ ಕುಮಾರಸ್ವಾಮಿ, ಹರೀಶ್ ಗೌಡ ತಮ್ಮ ಸ್ನೇಹಿತ ಶಾಸಕರನ್ನ ಕಟ್ಟಿಕೊಂಡು ಪಕ್ಷದ ಕಾರ್ಯಕ್ರಮಗಳನ್ನು ಮಾಡಲೇಬೇಕು. ಮಾಡಲಿಲ್ಲ ಎಂದಾದರೆ ನಾನು ಸುಮ್ಮನೇ ಇರಲ್ಲ. ನಾನು ಇನ್ಮೇಲೆ ಯಾರನ್ನು ನಿದ್ದೆ ಮಾಡಲು ಬಿಡಲ್ಲ ಎಂದು ಖಡಕ್ ಸೂಚನೆಯನ್ನು ನೀಡಿದ್ದಾರೆ. ಜಿಟಿ ದೇವೇಗೌಡರ ಅಸಮಾಧಾನವನ್ನ ಹೇಗಾದರೂ ಮಾಡಿ ತಣ್ಣಗಾಗಿಸಲು ಹರೀಶ್ ಗೌಡರಿಗೆ ಪಕ್ಷದಲ್ಲಿ ಗೌರವ ನೀಡಲಾಗಿದೆ ಎನ್ನುವ ಗುಲ್ಲು ಹರಡಿದೆ. ಜೆಡಿಎಸ್ ಸಚೇತಕ ಸ್ಥಾನವನ್ನ ದಿಢೀರ್ ಘೋಷಣೆ ಮಾಡಿದ್ದು, ಇದಕ್ಕೆಲ್ಲ ಕಾರಣ ಅಂತ ಹೇಳಲಾಗುತ್ತಿತ್ತು. ಆದರೆ ಹರೀಶ್ ಗೌಡ, ನಿಖಿಲ್ ಕುಮಾರಸ್ವಾಮಿ ಅಣ್ಣತಮ್ಮಂದಿರಾದರೂ ಒಳ್ಳೆಯ ಸ್ನೇಹಿತರಂತೆ ಇದ್ದಾರೆ. ಹೀಗಾಗಿಯೇ ನಿಖಿಲ್ ಕುಮಾರಸ್ವಾಮಿ ಮತ್ತು ಹರೀಶ್ ಗೌಡಗೆ ಸಮಾವೇಶಗಳ ಜವಾಬ್ದಾರಿ ನೀಡಿರೋ ದೊಡ್ಡಗೌಡರು, ಹಳೇ ಮೈಸೂರು, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಸಮಾವೇಶಗಳನ್ನ ಮಾಡುವ ಮೂಲಕ ರಾಜ್ಯದಲ್ಲಿ ಪಕ್ಷದ ಕಾರ್ಯಚಟುವಟಿಕೆಗಳನ್ನ ನಡೆಸಬೇಕು ಎಂದು ನೇರವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಿ ಮಹಿಳಾ ಸಮಾವೇಶ, ದಲಿತ ನಾಯಕರ ಸಮಾವೇಶ, ಯುವ ನಾಯಕರ ಸಮಾವೇಶದ ಜೊತೆಗೆ ಹಿರಿಯ ನಾಯಕರ ಸಮಾವೇಶಕ್ಕೆ ಮೂರು ತಿಂಗಳುಗಳ ಡೆಡ್ಲೈನ್ ಕೊಟ್ಟಿದ್ದಾರೆ..
ಆರೋಪಗಳನ್ನ ಮೆಟ್ಟಿ ನಿಲ್ಲತ್ತಾ ರೇವಣ್ಣ ಕುಟುಂಬ
ಪ್ರಜ್ವಲ್ ರೇವಣ್ಣ ಪ್ರಕರಣದ ನಂತರ ರಾಜ್ಯದಲ್ಲಿ ಜೆಡಿಎಸ ಪಕ್ಷಕ್ಕಿದ್ದ ಗೌರವ ಕಡಿಮೆಯಾಗಿದೆ. ಮಹಿಳಾ ಮತದಾರರಂತೂ ಎಂತವರ ಕುಟುಂಬದಲ್ಲಿ ಎಂತಹ ಮಕ್ಕಳು ಅಂತ ನೇರವಾಗಿಯೇ ಆಕ್ರೋಶ ಹೊರಹಾಕಿದ್ದರು. ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ, ಸೂರಜ್ ರೇವಣ್ಣ ವಿರುದ್ಧ ದಾಖಲಾದ ಸಾಲು ಸಾಲು ಪ್ರಕರಣಗಳು ದೊಡ್ಡಗೌಡರಿಗೆ, ದೇವೇಗೌಡರ ಕುಟುಂಬಕ್ಕೆ ಮುಜಗರ ತಂದಿತ್ತು. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಮ್ಮ ಕುಟುಂಬ, ಅವರ ಕುಟುಂಬ ಬೇರೆ ಬೇರೆ ಅಂತ ನೇರವಾಗಿಯೇ ಹೇಳಿಕೆ ನೀಡುವ ಮೂಲಕ ಎಲ್ಲವೂ ಸರಿಯಿಲ್ಲ ಎನ್ನೋದನ್ನ ಬೀದಿಗೆ ತಂದಿದ್ದರು. ಸದ್ಯ ಜೈಲಿನಿಂದ ಬಿಡುಗಡೆಯಾಗಿರೋ ಸೂರಜ್ ರೇವಣ್ಣ ತಮ್ಮ ಮೇಲಿನ ಆರೋಪಗಳನ್ನ ತಳ್ಳಿ ಹಾಕುವ ಕೆಲಸ ಮಾಡ್ತಿದ್ದಾರೆ. ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಓಡಾಡ್ತಿರೋ ಸೂರಜ್ ವಿಧಾನ ಪರಿಷತ್ ಕಲಾಪಗಳಲ್ಲಿಯೂ ಆಗಾಗ ಭಾಗಿಯಾಗ್ತಿದ್ದಾರೆ. ಇನ್ನೂ ಹೆಚ್ ಡಿ ರೇವಣ್ಣರಂತೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗೇ ತಮ್ಮ ಪಾಡಿಗೆ ವಿಧಾನಸೌಧಕ್ಕೆ ವಿಸಿಟ್ ಕೊಟ್ಟು, ಎದುರಿಗೆ ಸಿಕ್ಕವರಿಗೆ ಏನಣ್ಣ? ಹೇಗಿದಿರಿ ಬ್ರದರ್ ಎನ್ನುತ್ತ ಏಕಾಂಗಿಯಾಗಿ ಓಡಾಟ ನಡೆಸಿದ್ದಾರೆ. ಜಿಟಿ ದೇವೇಗೌಡರಂತೂ ವಿಧಾನಸೌಧಕ್ಕೆ ಬಂದರೇ ಕಾಂಗ್ರೆಸ್ ಶಾಸಕರ ಜೊತೆಗೆ ಗುಂಪು ಕಟ್ಟಿಕೊಂಡು, ಜೆಡಿಎಸ್ ನಿಂದ ಇಂದೋ ನಾಳೆಯೋ ಕಾಂಗ್ರೆಸ್ ಕೈ ಹಿಡಿಯಲು ಧಾವಂತ ದಲ್ಲಿದ್ದಾರೆ.
ಕೆಲವೇ ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಬಿಡುಗಡೆಯಾಗ್ತಾರೆ ಅಂತ ಮೊನ್ನೆ ಮೊನ್ನೆಯಷ್ಟೇ ಸೂರಜ್ ರೇವಣ್ಣ ಖಾಸಗಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು. ಪ್ರಜ್ವಲ್ ಬಿಡುಗಡೆಯಾಗ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದರೆ, ಒಂದು ವೇಳೆ ಹೊರಗೆ ಬಂದರೆ ಅವರನ್ನ ಹಾಸನದ ಜನತೆ ಹೇಗೆ ಸ್ವೀಕಾರ ಮಾಡ್ತಾರೆ ಅನ್ನೋದು ಬಹಳ ಮುಖ್ಯ. ಪಕ್ಷದ ಉಳಿವಿಗಾಗಿ ಹೋರಾಟ ನಡೆಸುತ್ತಿರೋ ದೊಡ್ಡಗೌಡರ ಕನಸಿಗ ಮೊಮ್ಮಕ್ಕಳ ಕೈಯಲ್ಲಿದ್ದು, ಪಕ್ಷದ ಆಳಿವು ಉಳಿವಿಗೆ ಒಗ್ಗಟ್ಟಿನ ಮಂತ್ರ ಅನಿವಾರ್ಯವೇ ಸರಿ..
ದುರ್ಗೇಶ್ ನಾಯಿಕ, ರಾಜಕೀಯ ವರದಿಗಾರ ಗ್ಯಾರಂಟಿ ನ್ಯೂಸ್ ಬೆಂಗಳೂರು.