ಬಜೆಟ್ ಬಜೆಟ್ ಬಜೆಟ್.. ಪ್ರತಿ ಬಾರಿ ಬಜೆಟ್ ಮಂಡನೆ ಆದಾಗಲೂ ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಆಫರ್ ಗಳನ್ನ ಕೊಡುತ್ತೆ ಸರ್ಕಾರ. ಆದ್ರೆ ಅವುಗಳ ಪೈಕಿ ಎಷ್ಟು ಕಾರ್ಯರೂಪಕ್ಕೆ ಬಂದಿವೆ ಅನ್ನೋದು ಮುಖ್ಯವಾಗುತ್ತೆ. ಹೌದು.. ಸದ್ಯ 16ನೇ ಬಜೆಟ್ ನ ಮಂಡಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಬಾರಿಯ ಬಜೆಟ್ ನಲ್ಲಿ ಸ್ಯಾಂಡಲ್ ವುಡ್ ಗಾಗಿ ಒಂದಷ್ಟು ವಿಷಯಗಳ ಮಂಡನೆ ಆಗಿರೋದು ವಿಶೇಷ ಅನಿಸಿದೆ.
90 ವರ್ಷಗಳ ಇತಿಹಾಸವಿರೋ ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದು ಫಿಲ್ಮ್ ಸಿಟಿ ಇಲ್ಲ ಅನ್ನೋದು ನೋವಿನ ಸಂಗತಿ. ಪ್ರತಿ ಬಜೆಟ್ ನಲ್ಲೂ ಫಿಲ್ಮ್ ಸಿಟಿ ಬಗ್ಗೆ ಪ್ರಸ್ತಾಪ ಆಗುತ್ತೆ. ಆದ್ರೆ ಈ ಬಾರಿ ಸಿಎಂ ಸಿದ್ದು ಲೆಕ್ಕದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ನೂರಾರು ಕೋಟಿ ಮೀಸಲಿಟ್ಟಿರೋದು ಪಕ್ಕಾ ಆಗಿದೆ. ಮೈಸೂರಿನಲ್ಲಿ 150 ಎಕರೆ ಸ್ಥಳ ನಿಗದಿ ಆಗಿತ್ತು. ಅದಕ್ಕೆ ಸದ್ಯದಲ್ಲೇ ಹಂತ ಹಂತವಾಗಿ 500 ಕೋಟಿ ಫಂಡ್ಸ್ ರಿಲೀಸ್ ಮಾಡಿ, ಕೆಲಸ ಕಾರ್ಯಗಳನ್ನ ಆರಂಭಿಸೋ ಭರವಸೆ ನೀಡಿದ್ದಾರೆ ಸಿಎಂ.
ಇನ್ನು ಏಕರೂಪ ಟಿಕೆಟ್ ದರ ನೀತಿಯನ್ನ ತರೋಕೆ ಚಿಂತಿಸಿದೆ ಸರ್ಕಾರ. ಹೌದು.. ಸಿಂಗಲ್ ಸ್ಕ್ರೀನ್ ಗಳಂತೆ ಮಲ್ಟಿಪ್ಲೆಕ್ಸ್ ಗಳಲ್ಲೀ 200 ರೂಪಾಯಿ ಟೆಕೆಟ್ ದರ ಮಾಡಲು ಪ್ಲ್ಯಾನ್ ಮಾಡ್ತಿದೆ ಸರ್ಕಾರ. ಪರಭಾಷಾ ಚಿತ್ರಗಳ ರಿಲೀಸ್ ವೇಳೆ, ಮನಸೋ ಇಚ್ಚೆ ಟಿಕೆಟ್ ದರವನ್ನ 800 ರೂಪಾಯಿಗಳಿಂದ ರಿಂದ 1500ರೂಗಳ ವರೆಗೆ ಏರಿಸುತ್ತವೆ ಮುಂಬೈ ಮೂಲದ ಮಲ್ಟಿಪ್ಲೆಕ್ಸ್ ಕಂಪೆನಿಗಳು. ಆದ್ರೀಗ ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣ ಮಾದರಿಯಲ್ಲಿ 200ರೂಪಾಯಿಗೆ ಟಿಕೆಟ್ ದರವನ್ನು ಫಿಕ್ಸ್ ಮಾಡೋ ಮನಸ್ಸು ಮಾಡಿದೆ. ಇದೊಂಥರ ಚಿತ್ರ ಪ್ರೇಮಿಗಳಿಗೆ ಖುಷಿ ತಂದರೂ, ಮಲ್ಟಿಪ್ಲೆಕ್ಸ್ ಮಂದಿಗೆ ಮಾಸ್ಟರ್ ಸ್ಟ್ರೋಕ್ ನೀಡಿದಂತಾಗಿದೆ.
ಅಲ್ಲದೆ, ಕನ್ನಡ ಸಿನಿಮಾಗಳ ರಕ್ಷಣೆಗಾಗಿ ಒಂದು ಪ್ರತ್ಯೇಕ ಲೈಬ್ರರಿಯನ್ನ ಮಾಡುವುದಾಗಿ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಥಿಯೇಟರ್ ನಿರ್ಮಾಣ ಆಗಲಿದ್ದು, ಎರಡೂವರೆ ಎಕರೆ ಪ್ರದೇಶದಲ್ಲಿ ಬಹುಪಯೋಗಿ ಥಿಯೇಟರ್ ನಿರ್ಮಿಸೋದಾಗಿ ಹೇಳಿದ್ದಾರೆ ಸಿಎಂ. ವಿಶೇಷ ಅಂದ್ರೆ ತಂತ್ರಜ್ಞಾನ ಬೆಳೆದಂತೆ ಸಿನಿಮಾಗಳು ಇಂದು ಬರೀ ಥಿಯೇಟರ್ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಾಗಾಗಿ ಕನ್ನಡ ಸಿನಿಮಾಗಳ ಉಳಿವಿಗಾಗಿ, ಚಿತ್ರರಂಗದ ಬೆಳವಣಿಗೆಗಾಗಿ ಪ್ರತ್ಯೇಕ ಓಟಿಟಿ ಪ್ಲಾಟ್ ಫಾರ್ಮ್ ಆರಂಭಿಸಲಿದೆಯಂತೆ ಸರ್ಕಾರ. ಒಟ್ಟಾರೆ ಸಿದ್ದು ಲೆಕ್ಕದಲ್ಲಿ ನಮ್ಮ ಚಂದನವನಕ್ಕೂ ಒಂದು ದೊಡ್ಡ ಮೊತ್ತದ ಹಣ ಮೀಸಲಿಟ್ಟಿರೋದು ಇಡೀ ಕನ್ನಡ ಚಿತ್ರರಂಗಕ್ಕೆ ಖುಷಿ ತಂದಿದೆ. ಮೊನ್ನೆಯಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಕಿಡಿ ಕಾರುತ್ತಿತ್ತು ಚಿತ್ರರಂಗ. ಆದ್ರೀಗ ಸಿಎಂ ಸಿದ್ದರಾಮಯ್ಯನವರು ಬಜೆಟ್ ನಲ್ಲಿ ಚಿತ್ರರಂಗಕ್ಕೆ ನೀಡ್ತಿರೋ ಬಂಪರ್ ಆಫರ್ ಗಳಿಂದ ಇಡೀ ಸ್ಯಾಂಡಲ್ ವುಡ್ ದಿಲ್ ಖುಷ್ ಆಗಿದೆ. ಆದ್ರೆ ಇವೆಲ್ಲವೂ ಮತ್ತೊಂದು ಬಜೆಟ್ ಒಳಗಾಗಿ ಕಾರ್ಯರೂಪಕ್ಕೆ ಬರಬೇಕು ಅನ್ನೋದು ಚಿತ್ರರಂಗದ ಆಶಯವಾಗಿದೆ.
– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್