ಬೆಂಗಳೂರು, ಏಪ್ರಿಲ್ 21: ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಡಿಆರ್ಡಿಓನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮತ್ತು ಬೈಕ್ ಸವಾರ ವಿಕಾಸ್ ನಡುವೆ ಗಲಾಟೆ ಶುರುವಾಗಿತ್ತು. ನಂತರ ಬೈಕ್ ಸವಾರನೇ ಹಲ್ಲೆ ಮಾಡಿದ್ದಾನೆ ಎಂದು ವಿಂಗ್ ಕಮಾಂಡರ್ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಹರಿಬಿಡಲಾಗಿತ್ತು. ಆದರೆ ಈ ಘಟನೆಯ ಸತ್ಯ ಸಿಸಿಟಿವಿಯಲ್ಲಿ ಬಯಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ನಾಲ್ಕು ಸಿಸಿಟಿವಿ ವಿಡಿಯೋದಲ್ಲಿ ಇದರ ಸತ್ಯ ಹೊರಬಂದಿದ್ದು, ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅವರೇ ಮೊದಲನೆಯದಾಗಿ ಬೈಕ್ ಸವಾರ ವಿಕಾಸ್ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯದಲ್ಲಿ ಕಂಡುಬಂದಿದೆ. ಈ ಘಟನೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಶಿಲಾದಿತ್ಯ ಬೋಸ್ ವಿಕಾಸ್ ಅವರೇ ತಮಗ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಹಾಕಿದ್ದರು.
ಆದರೆ ನಿಜಾಂಶ ಬೇರೆಯಾಗಿದ್ದು, ಶಿಲಾದಿತ್ಯ ಬೋಸ್ ತಮ್ಮ ಕಾರಿನಿಂದ ಇಳಿದು ನಡುರಸ್ತೆಯಲ್ಲೇ ಬೈಕ್ ಸವಾರನನ್ನು ತಡೆದು, ಅವನನ್ನು ರಸ್ತೆಗೆ ಕೆಡವಿದ ನಂತರ ಕಾಲಿನಿಂದ ಒದ್ದಿದ್ದಾರೆ. ಈ ವೇಳೆ ಅವರು ವಿಕಾಸ್ ಅವರ ಮೊಬೈಲ್ ಅನ್ನು ಎಸೆದು ಬಿಸಾಕಿರುವ ದೃಶ್ಯವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕರು ಮಧ್ಯ ಪ್ರವೇಶಿಸಿ ಅವರನ್ನು ನಿಲ್ಲಿಸಲು ಪ್ರಯತ್ನಿಸಿದರೂ, ಬೋಸ್ ಅವರು ಹಲ್ಲೆ ಮುಂದುವರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಂಗ್ ಕಮಾಂಡರ್ ಮತ್ತು ಬೈಕ್ ಸವಾರನ ಗಲಾಟೆ ವಿಡಿಯೋ ವೈರಲ್ ಆದ ಬಳಿಕ, ರಾಷ್ಟ್ರ ಮಟ್ಟದ ಮಾಧ್ಯಮಗಳು ಇದನ್ನು “ಬೆಂಗಳೂರುದಲ್ಲಿ ಭಾಷಾತ್ಮಕ ಕಲಹ” ಎಂಬ ಶೀರ್ಷಿಕೆಯಲ್ಲಿ ಪ್ರಸಾರ ಮಾಡಿದ್ದವು. ಆದರೆ ಸಿಸಿಟಿವಿ ದೃಶ್ಯಗಳ ಹೊರಬಂದಿದ್ದು, ಸತ್ಯ ತಿಳಿದಿದೆ. ಇದರಿಂದಾಗಿ ಬೋಸ್ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಿದ್ದು, ಪ್ರಕರಣ ತನಿಖೆಗೆ ಒಳಪಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.