ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದಕರ ಹಿನ್ನೆಲೆಯಲ್ಲಿ 178 ಕನ್ನಡಿಗರನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಬೆಂಗಳೂರಿಗೆ ಸುರಕ್ಷಿತವಾಗಿ ಕರೆತಂದರು.
ಕಾಶ್ಮೀರದಲ್ಲಿ ನಡೆದ ದಾಳಿ ನಂತರ ರಾಜ್ಯ ಸರ್ಕಾರದ ಪರವಾಗಿ ಸಚಿವ ಲಾಡ್ ಅವರನ್ನು ಕನ್ನಡಿಗರ ರಕ್ಷಣಾ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳುಹಿಸಿದ್ದರು.
ಕಳೆದ ಎರಡು ದಿನಗಳಿಂದ ಅವಿರತವಾಗಿ, ಬಿಡುವಿಲ್ಲದೆ ಪಹಲ್ಗಾಂನಲ್ಲಿ ಸಚಿವ ಲಾಡ್ ಅವರು ಕನ್ನಡಿಗ ಪ್ರವಾಸಿಗರನ್ನು ಭೇಟ ಮಾಡಿ ಅವರಿಗೆ ರಾಜ್ಯಕ್ಕೆ ಮರಳಲು ಮಾಹಿತಿ ನೀಡಿ ವಿಮಾನ ನಿಲ್ದಾಣಕ್ಕೆ ಬರಲು ತಿಳಿಸಿದ್ದರು. ಇದೀಗ 178 ಕನ್ನಡಿಗ ಪ್ರವಾಸಿಗರು ಶ್ರೀನಗರ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಪಹಲ್ಗಾಂನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಯಾದ ಕನ್ನಡಿಗರ ಕುಟುಂಬಗಳನ್ನೂ ಭೇಟಿ ಮಾಡಿದ್ದ ಸಚಿವ ಲಾಡ್ ಅವರು ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು.
ಬೇರೆ ಬೇರೆ ಸ್ಥಳಗಳಲ್ಲಿ ತಂಗಿದ್ದ ಪ್ರವಾಸಿಗರನ್ನು ಭೇಟಿ ಮಾಡಿ ತಾವು ಯಾವಾಗ ಕರ್ನಾಟಕಕ್ಕೆ ಮರಳಲು ವಿಮಾನದ ಟಿಕೆಟ್ ಗಳನ್ನು ಬುಕ್ ಮಾಡಿದ್ದೀರಿ ಎಂಬ ಮಾಹಿತಿಯನ್ನು ಕಲೆ ಹಾಕಿದ್ದರು. ವಿಮಾನದ ಟಿಕೆಟ್ ಬುಕ್ ಮಾಡದವರಿಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಲಾಡ್ ಅವರು ಪ್ರವಾಸಿಗರೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ.
ಸಚಿವ ಲಾಡ್‌ಗೆ ಅವರಿಗೆ ಕೃತಜ್ಞತೆ
ಕಾಶ್ಮೀರದಿಂದ ಬೆಂಗಳೂರಿಗೆ ಮರಳಲು ವ್ಯವಸ್ಥೆ ಮಾಡಿದ ಸಚಿವ ಸಂತೋಷ್ ಲಾಡ್ ಅವರಿಗೆ ಪ್ರವಾಸಿಗರು ಕೃತಜ್ಷತೆ ಸಲ್ಲಿಸಿದ್ದಾರೆ. ಊರಿಗೆ ಮರಳುವ ಆತಂಕ ಮತ್ತು ಭಯದಲ್ಲಿ ಇದ್ದವರಿಗೆ ದೇವರಂತೆ ಸಚಿವರು ಬಂದು ಇಲ್ಲಿಗೆ ಕರೆತಂದರು. ಇವರ ಸಹಾಯವನ್ನು ಎಂದೂ ಮರೆಯಲಾಗದು ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ.
ಎಲ್ಲಿ ಅವಘಡ ಸಂಭವಿಸಿದ್ದರೂ ಅಲ್ಲಿಗೆ ಲಾಡ್ ಭೇಟಿ
ಕರ್ನಾಟಕದ ಹೊರಗೆ ಯಾವುದೇ ರೀತಿಯ ಅವಘಡಗಳು ಸಂಭವಿಸಿದರೂ ಅಂತಹ ಸಂದರ್ಭದಲ್ಲಿ ಸಂತೋಷ್ ಲಾಡ್ ಅವರು ಭೇಟಿ ನೀಡಿ ಕನ್ನಡಿಗರ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿದಾಗ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರುವ ಜವಾಬ್ದಾರಿಯನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಲಾಡ್ ಅವರಿಗೆ ವಹಿಸಿದ್ದರು.
ಒಡಿಶಾದಲ್ಲಿ ಭಾರಿ ರೈಲು ದುರಂತ ನಡೆದಾಗಲೂ ಸಚಿವ ಲಾಡ್ ಅವರು ಕನ್ನಡಿಗರ ರಕ್ಷಣೆಗೆ ತೆರಳಿದ್ದರು. ಅದಾದ ನಂತರ ವಯನಾಡಿನಲ್ಲಿ ಉಂಟಾಗಿದ್ದ ಜಳಪ್ರಳಯದ ವೇಳೆ ಸ್ವತಃ ಲಾಡ್ ಅವರು ಹೋಗಿದ್ದರು. ಇದೀಗ ಪಹಲ್ಗಾಂಗೂ ಅವರು ಹೋಗಿ ಜನರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.