Garantee Exclusive : ಜಾತಿಗಣತಿ ವರದಿ ವಿಚಾರದಲ್ಲಿ ಶಾಮನೂರು ಪಕ್ಕಾ ಪ್ಲಾನ್

123 2025 04 27t111707.839

ಕ್ಯಾಬಿನೆಟ್ ಸಭೆಯಲ್ಲಿ ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ: “ನಾವು ಹೇಳಿದ್ದನ್ನೇ ಮಾತನಾಡಿ, ನಾವು ಕೊಟ್ಟ ಪತ್ರವನ್ನೇ ಸಲ್ಲಿಸಿ.” ಇದು ಯಾರ ಸೂಚನೆ? ಯಾರು ಈ ರೀತಿ ಸಚಿವರನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಪ್ರಶ್ನೆ ಈಗ ರಾಜ್ಯ ರಾಜಕೀಯದಲ್ಲಿ ಕಾಡುತ್ತಿದೆ.

ರಾಜ್ಯ ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಕೋಣಪ್ಪ ರೆಡ್ಡಿ ಅವರು ‘ಗ್ಯಾರಂಟಿ ನ್ಯೂಸ್’ಗೆ ನೀಡಿದ ಹೇಳಿಕೆಯಲ್ಲಿ, ಜಾತಿಗಣತಿ ವರದಿಯನ್ನು ಒಕ್ಕಲಿಗ ಮತ್ತು ವೀರಶೈವ ಲಿಂಗಾಯತ ಸಮುದಾಯಗಳು ತೀವ್ರವಾಗಿ ವಿರೋಧಿಸುತ್ತವೆ ಎಂದು ತಿಳಿಸಿದ್ದಾರೆ. “ಈ ವರದಿಯನ್ನು ನಾವು ಒಪ್ಪುವುದಿಲ್ಲ. ಕ್ಯಾಬಿನೆಟ್ ಸಭೆಯಲ್ಲಿ ಈ ಎರಡು ಪ್ರಬಲ ಸಮುದಾಯಗಳ ಸಚಿವರು ತಮ್ಮ ವಿರೋಧವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕು. ನಾವೇ ಸಚಿವರಿಗೆ ಒಂದು ನೋಟ್ ತಯಾರಿಸಿ ಕೊಡುತ್ತೇವೆ. ಆ ನೋಟ್‌ನಂತೆ ಸಿಎಂ ಅವರ ಬಳಿ ಮಾತನಾಡಬೇಕು. ಈ ನೋಟ್ ಇಂದು ಅಥವಾ ನಾಳೆಯೊಳಗೆ ಸಚಿವರ ಕೈಸೇರುತ್ತದೆ,” ಎಂದು ರೆಡ್ಡಿ ಹೇಳಿದ್ದಾರೆ.

ADVERTISEMENT
ADVERTISEMENT

ಶಾಮನೂರು ನಿವಾಸದಲ್ಲಿ ಗೇಮ್ ಪ್ಲಾನ್
ನಿನ್ನೆ ಶಾಮನೂರು ಶಿವಶಂಕರಪ್ಪ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ವಿವರವಾದ ಚರ್ಚೆ ನಡೆದಿದೆ. ಜಾತಿಗಣತಿ ವರದಿಯ ವಿರುದ್ಧ ಒಕ್ಕಲಿಗ ಸಂಘ ಮತ್ತು ವೀರಶೈವ ಲಿಂಗಾಯತ ಮಹಾಸಭಾದ ನಿಲುವನ್ನು ಅಂತಿಮಗೊಳಿಸಲಾಗಿದೆ. “ಈ ವರದಿಯಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಅಂಕಿಅಂಶಗಳನ್ನು ಕಡಿಮೆ ಮಾಡಲಾಗಿದೆ. ಆದರೆ ಕುರುಬ ಸಮುದಾಯದ ಅಂಕಿಅಂಶಗಳನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸಲಾಗಿದೆ. ಇಂತಹ ವರದಿಯನ್ನು ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಕೂರಿಸಿ ಬರೆಸಲಾಗಿದೆ ಎಂಬ ಆರೋಪವಿದೆ,” ಎಂದು ಕೋಣಪ್ಪ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಉಗ್ರ ಹೋರಾಟದ ಎಚ್ಚರಿಕೆ
“ಈ ಜಾತಿಗಣತಿ ವರದಿಯನ್ನು ಜಾರಿಗೆ ತಂದರೆ, ರಾಜ್ಯದಾದ್ಯಂತ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಉಗ್ರ ಹೋರಾಟ ನಡೆಸಲಿವೆ. ಈ ವರದಿಯ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ತಮ್ಮ ಸಮಾಜಕ್ಕೆ ದ್ರೋಹ ಬಗೆಯದೆ, ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ವಿಶ್ವಾಸವಿದೆ,” ಎಂದು ರೆಡ್ಡಿ ತಿಳಿಸಿದ್ದಾರೆ.

ಸಚಿವರಿಗೆ ರಿಮೋಟ್ ಕಂಟ್ರೋಲ್?
ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ನಾಯಕರು ಕ್ಯಾಬಿನೆಟ್ ಸಚಿವರಿಗೆ ಸೂಚನೆ ನೀಡುವ ಮೂಲಕ ರಾಜಕೀಯವಾಗಿ ತಮ್ಮ ಒತ್ತಡವನ್ನು ತೋರಿಸುತ್ತಿದ್ದಾರೆ. “ನಮ್ಮ ಸಮುದಾಯದ ನಿಲುವನ್ನು ಕ್ಯಾಬಿನೆಟ್‌ನಲ್ಲಿ ಸಚಿವರು ಘೋಷಿಸಬೇಕು. ಈ ವರದಿಯನ್ನು ಒಪ್ಪದಿರುವುದೇ ನಮ್ಮ ಅಂತಿಮ ನಿರ್ಧಾರ,” ಎಂದು ಈ ಎರಡು ಸಮುದಾಯಗಳ ನಾಯಕರು ಒಕ್ಕೊರಲಿನಿಂದ ಹೇಳಿದ್ದಾರೆ.

ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಜಾತಿಗಣತಿ ವರದಿಯ ಸುತ್ತಲಿನ ವಿವಾದ ಮುಂದಿನ ದಿನಗಳಲ್ಲಿ ರಾಜಕೀಯ ತಾಪಮಾನವನ್ನು ಇನ್ನಷ್ಟು ಏರಿಸುವ ಸಾಧ್ಯತೆಯಿದೆ.

Exit mobile version