ರಾಜ್ಯದಲ್ಲಿ ಜಾತಿ ಜನಗಣತಿ ಜಟಾಪಟಿ ಜೋರಾಗಿಯೇ ನಡೆದಿದೆ. ಅಂತೂ ಇಂತು ಜಾತಿ ಜನಗಣತಿ ಜಾರಿಗೆ ನಾಳೆ ಮೂಹೂರ್ತ ಕೂಡಿ ಬಂದಂತೆ ಕಾಣ್ತಿದೆ. ನಾಳೆ ನಡೆಯಲಿರುವ ಸಚಿವ ಸಂಪುಟದಲ್ಲಿ ಜಾತಿ ಜನಗಣತಿ ವರದಿ ವಿಚಾರ ಚರ್ಚೆಗೆ ಬರುತ್ತಿದ್ದು, ದಶಕದ ಬೇಡಿಕೆ ಈಡೇರತ್ತಾ ಅನ್ನೋ ಪ್ರಶ್ನೆ ಮೂಡಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ಈಡೇರಿಸುತ್ತಾರಾ ಎನ್ನೋ ಕುತೂಹಲ ಮೂಡಿದೆ.
ಎಸ್.. ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಸರ್ಕಾರ ವರದಿ ಪಡೆದು, ಜಾರಿಗೆ ಹಿಂದೇಟು ಹಾಕುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿತ್ತು. ವರದಿಯಲ್ಲಿ ಹಲವಾರು ಲೋಪಗಳಾಗಿವೆ. ಕೆಲವು ಸಮುದಾಯಗಳ ಪಂಗಡಗಳನ್ನ ಕೈ ಬೀಡಲಾಗಿದೆ ಎನ್ನುವ ಪರ-ವಿರೋಧ ವಾದ ಮಂಡನೆ ಆಗುತ್ತಲೇ ಬಂದಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಚರ್ಚೆ ನಡೆಯಲಿದ್ದು, ವರದಿ ಜಾರಿಗೆ ಮುಹೂರ್ತ ಕೂಡಿ ಬಂದಂತೆ ಕಾಣುತ್ತಿದೆ. ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಹೆಚ್ ಕಾಂತರಾಜ 2015 ರಲ್ಲಿ ರಾಜ್ಯಾದ್ಯಂತ ನಡೆದಿದ್ದ ಸಮೀಕ್ಷೆಯಲ್ಲಿ ಜಾತಿ ವಿವರ ಸೇರಿದಂತೆ ಒಟ್ಟು 54 ಮಾನದಂಡಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಾಗಿದೆ. ಈ ಸಂಪೂರ್ಣ ಮಾಹಿತಿಯುಳ್ಳ ವರದಿಯನ್ನ ಹಿಂದುಳಿದ ಆಯೋಗ 2024 ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ.
ರಾಜ್ಯದ್ಯಾಂತ ಎಲ್ಲ ಜಿಲ್ಲೆಗಳಿಗೆ ತೆರಳಿ ಸಾಮಾಜಿಕ, ಶೈಕ್ಷಣಿಕದ ಜಾತಿ ಸಮೀಕ್ಷೆಯ ಜೊತೆಗೆ ಸಾಮಾಜಿಕ ಸ್ಥಿತಿಗತಿ, ಆರ್ಥಿಕ, ಉದ್ಯೋಗ, ರಾಜಕೀಯ ಸೇರಿದಂತೆ 54 ಪ್ರಶ್ನೆಗಳನ್ನ ಒಳಗೊಂಡ ಎಲ್ಲ ಅಂಶಗಳನ್ನ ಈ ವರದಿ ಒಳಗೊಂಡಿದೆ. ರಾಜ್ಯ ಸರ್ಕಾರದಕ್ಕೆ ಕಾಂತರಾಜ್ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡು ಅಧ್ಯಯನ ವರದಿ ಸಲ್ಲಿಸುವಂತೆ ಕೆ. ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗಕ್ಕೆ 2023ರ ಜುಲೈ 17ರಂದು ಸರ್ಕಾರ ಪತ್ರ ಬರೆದಿತ್ತು. ಜಯ ಪ್ರಕಾಶ್ ಹೆಗ್ಡೆ ಅವರಿಂದ 2024 ರ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇನ್ನು ಸಮಿಕ್ಷೇಯ ವರದಿ ಸೋರಿಕೆಯಾಗಿದೆ ಅನ್ನೋ ಕೂಗು ಕೂಡ ಕೇಳಿ ಬರ್ತಿದೆ. ರಾಜ್ಯದಲ್ಲಿ ಅಹಿಂದ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಒಕ್ಕಲಿಗ, ಲಿಂಗಾಯತ ಸಮುದಾಯದ ಜನಸಂಖ್ಯೆಯು ಕುಸಿತ ಕಂಡಿರೋ ಆತಂಕ ಎದುರಾಗಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯಗೆ ಜಾತಿ ಜನಗಣತಿ ವರದಿ ತಲೆ ನೋವು ತರುವ ಸಾಧ್ಯತೆಯೂ ಇದೆ.
ಜಾತಿ ಜನಗಣತಿ ಸಮೀಕ್ಷೆಯಲ್ಲಿನ ಸೋರಿಕೆಯಾಗಿರೋ ಅಂಕಿ ಅಂಶಗಳು:
1. ಪರಿಶಿಷ್ಟ ಜಾತಿ (ಎಸ್‌ಸಿ) – 1.08 ಕೋಟಿ 2. ಮುಸ್ಲಿಮರು – 70 ಲಕ್ಷ
3. ಲಿಂಗಾಯಿತರು – 65 ಲಕ್ಷ 4. ಒಕ್ಕಲಿಗರು – 60 ಲಕ್ಷ
5. ಕುರುಬರು – 45 ಲಕ್ಷ 6. ಪರಿಶಿಷ್ಟ ಪಂಗಡ (ಎಸ್‌ಟಿ) – 40.45 ಲಕ್ಷ
7. ಈಡಿಗರು – 15 ಲಕ್ಷ 8. ವಿಶ್ವಕರ್ಮ – 15 ಲಕ್ಷ
9. ಬೆಸ್ತರು – 15 ಲಕ್ಷ 10. ಬ್ರಾಹ್ಮಣರು – 14 ಲಕ್ಷ
11. ಗೊಲ್ಲಯಾದವರು – 10 ಲಕ್ಷ 12. ಅರೆ ಅಲೆಮಾರಿ – 6 ಲಕ್ಷ
13. ಮಡಿವಾಳರು – 6 ಲಕ್ಷ 14. ಸವಿತಾ ಸಮಾಜ – 5 ಲಕ್ಷ
15. ಕುಂಬಾರರು – 5 ಲಕ್ಷ
ಜಾತಿ ಜನಗಣತಿ ವಿಚಾರದಲ್ಲಿ ಜೇನು ಗೂಡಿಗೆ ಕೈ ಹಾಕಿರುವ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಪ್ರಬಲ ಸಮುದಾಯಗಳ ಕೆಲ ನಾಯಕರು ಹೇಗೆ ಪ್ರತಿಕ್ರಿಯೆ ನೀಡ್ತಾರೆ? ಸಚಿವ ಸಂಪುಟ ಸಭೆಯಲ್ಲಿ ಆಕ್ಷೇಪವೂ ಉಂಟಾಗುವ ಸಾಧ್ಯತೆ ಹೆಚ್ಚಾಗಿದ್ದು, ಜಾತಿ ವಿಚಾರದಲ್ಲಿ ಕ್ರಾಂತಿಯನ್ನೇ ಸಿಎಂ ಸಿದ್ದರಾಮಯ್ಯ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ. ನಾಳೆಯ ಸಭೆಯಲ್ಲಿ ವರದಿಯನ್ನು ಅನುಷ್ಠಾನಗೊಳಿಸುತ್ತಾರಾ? ಸಾಧಕ ಭಾದಕಗಳ ಚರ್ಚೆಗೆ ಸಮಯ ನಿಗದಿ ಮಾಡ್ತಾರಾ ಎನ್ನೋ ಕುತೂಹಲ ಮೂಡ್ತಿದೆ.