ಬೆಂಗಳೂರು: ರಾಜ್ಯದಲ್ಲಿ ಉಷ್ಣತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕರ್ನಾಟಕ ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಎಚ್ಚರಿಕೆ ಮತ್ತು ಮಾರ್ಗದರ್ಶನವನ್ನು ಹೊರಡಿಸಿದೆ. ಇತ್ತೀಚಿನ ಗರಿಷ್ಠ ತಾಪಮಾನವು 40°C ಅನ್ನು ಮುಟ್ಟಿದ್ದು, ಇದರಿಂದ ಸಾರ್ವಜನಿಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎನ್ನಲಾಗುತ್ತಿದ್ದು, ಇದರಿಂದ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಿದೆ. ಬಿಸಿಲಿನ ದುಷ್ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಈ ಸಲಹೆಗಳನ್ನು ಪಾಲಿಸಬೇಕು.
ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?
- ಹವಾಮಾನ ಮುನ್ಸೂಚನೆಗಳನ್ನ ಪಾಲಿಸಿ: ರೇಡಿಯೋ, ಟಿವಿ, ದಿನಪತ್ರಿಕೆಗಳ ಮೂಲಕ ಬಿಸಿಲಿನ ಮುನ್ಸೂಚನೆಗಳನ್ನು ಗಮನಿಸಿ.
- ನೀರನ್ನು ಹೆಚ್ಚು ಕುಡಿಯಿರಿ: ಬಾಯಾರಿಕೆಯಿಲ್ಲದಿದ್ದರೂ, ಸಾಕಷ್ಟು ನೀರು ಸೇವಿಸಿ. ಶುದ್ಧ ನೀರಿನೊಂದಿಗೆ, ನಿಂಬೆಹಣ್ಣು ನೀರು, ಮಜ್ಜಿಗೆ, ಲಸ್ಸಿ, ತಣ್ಣೀರು ಪಾನೀಯಗಳನ್ನು ಸೇವಿಸಿ.
- ಸರಿಯಾದ ಬಟ್ಟೆ ಧರಿಸಿ: ಹಗುರವಾದ, ಬಿಳಿ ಬಣ್ಣದ, ಹತ್ತಿ ಬಟ್ಟೆಗಳನ್ನು ಧರಿಸಿ. ಬಿಸಿಲು ತಡೆಯುವಂತೆ ರಂಧ್ರವುಳ್ಳ ಬಟ್ಟೆಗಳು ಉತ್ತಮ.
- ಬಿಸಿಲಿನ ಪ್ರಭಾವದಿಂದ ತಪ್ಪಿಸಿಕೊಳ್ಳಲು, ಟೋಪಿ, ಕನ್ನಡಕ, ಬೂಟು ಅಥವಾ ಚಪ್ಪಲಿ ಧರಿಸಿ.
- ಪ್ರಯಾಣದ ಸಮಯ ಗಮನಿಸಿ: ಬಹುತೇಕ ದೂರದ ಪ್ರಯಾಣವನ್ನು ರಾತ್ರಿ ಅಥವಾ ಬೆಳಗ್ಗೆಯ ಸಮಯದಲ್ಲಿ ಮಾಡಿ. ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ನೀರು ಹೊಂದಿರಲಿ.
- ಆಹಾರದ ಮೇಲೆ ಗಮನಹರಿಸಿ: ಕಲ್ಲಂಗಡಿ, ಕರಬೂಜ, ಎಳನೀರು, ಕಿತ್ತಳೆ, ದ್ರಾಕ್ಷಿ, ಅನನಾಸ್, ಸೌತೆಕಾಯಿ ಇತ್ಯಾದಿ ತಂಪಾದ ಆಹಾರವನ್ನು ಸೇವಿಸಿ.
- ಶ್ರಮಿಕರು ಮತ್ತು ಗರ್ಭಿಣಿಯರು ಎಚ್ಚರಿಕೆಯಿಂದಿರಲಿ: ಬಿಸಿಲಿನಲ್ಲಿ ಕೆಲಸ ಮಾಡುವವರು ವಿಶ್ರಾಂತಿ ತೆಗೆದುಕೊಳ್ಳಿ. ಗರ್ಭಿಣಿಯರು ಮತ್ತು ಆರೋಗ್ಯ ಸಮಸ್ಯೆಯಿರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.
- ಪಕ್ಷಿ-ಪ್ರಾಣಿಗಳಿಗೆ ನೀರು ಒದಗಿಸಿ: ಸಾಕುಪ್ರಾಣಿಗಳು ಹಾಗೂ ಹಕ್ಕಿಗಳಿಗೆ ನೆರಳಿನಲ್ಲಿ ನೀರು ಮತ್ತು ಆಹಾರ ಒದಗಿಸಿ.
- ಸ್ನಾನ ಮತ್ತು ತಂಪಾದ ವಾತಾವರಣ: ತಣ್ಣೀರಿನಲ್ಲಿ ಸ್ನಾನ ಮಾಡಿ. ಮನೆಯೊಳಗೆ ತಂಪಾಗಿರಲು, ಒದ್ದೆಯಾದ ಬಟ್ಟೆಗಳನ್ನು ಬಳಸಿ.
- ಕೇಳಸ ಸಮಯ ಸರಿಹೊಂದಿಸಿ: ತಂಪಾದ ವೇಳೆಯಲ್ಲಿ ಕೆಲಸ ಮಾಡಿ. ಕೆಲಸದ ಸ್ಥಳದ ಬಳಿ ಕುಡಿಯುವ ನೀರಿನ ವ್ಯವಸ್ಥೆ ಇರಲಿ.
ಏನು ಮಾಡಬಾರದು?
- ವಾಹನಗಳಲ್ಲಿ ಮಕ್ಕಳನ್ನು/ಪ್ರಾಣಿಗಳನ್ನು ಬಿಡಬೇಡಿ: ನಿಲ್ಲಿಸಿದ ವಾಹನಗಳಲ್ಲಿ ಹೆಚ್ಚಿನ ತಾಪಮಾನದಿಂದ ತಕ್ಷಣದ ಅಪಾಯ ಉಂಟಾಗಬಹುದು.
- ಕಪ್ಪು ಬಟ್ಟೆ ಧರಿಸಬೇಡಿ: ಬಿಗಿಯಾದ ಹಾಗೂ ಕಪ್ಪು ಬಣ್ಣದ ಬಟ್ಟೆಗಳು ಹೆಚ್ಚಿನ ಉಷ್ಣತೆಯನ್ನು ಹೀರಿಕೊಳ್ಳುತ್ತವೆ.
- ಹಗಲು ಸಮಯದಲ್ಲಿ ಶ್ರಮದಾಯಕ ಕೆಲಸ ಮಾಡಬೇಡಿ: ಮಧ್ಯಾಹ್ನ 12 ರಿಂದ 3ರ ಮಧ್ಯೆ ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ.
- ಅಡುಗೆ ಮಾಡುವಾಗ ಸೂಕ್ತ ಗಾಳಿಯಾಡುವ ವ್ಯವಸ್ಥೆ ಇರಲಿ: ಅಡುಗೆ ಮಾಡುವಾಗ ಹೆಚ್ಚುವರಿ ತಾಪಮಾನ ಉಂಟಾಗದಂತೆ ಗಮನವಿರಲಿ.
- ಆಲ್ಕೋಹಾಲ್, ಚಹಾ, ಕಾಫಿ ಸೇವನೆ ತಪ್ಪಿಸಿ: ಇವು ದೇಹವನ್ನು ನಿರ್ಜಲೀಕರಿಸುವ ಕಾರಣ, ಬದಲಿಗೆ ನೈಸರ್ಗಿಕ ತಂಪು ಪಾನೀಯಗಳನ್ನು ಸೇವಿಸಿ.
- ಹಳೆಯ ಮತ್ತು ಹೆಚ್ಚು ಪ್ರೋಟೀನ್ ಆಹಾರ ಸೇವಿಸಬೇಡಿ: ಬಿಸಿಲಿನಲ್ಲಿ ಇಂತಹ ಆಹಾರಗಳು ಬೇಗನೇ ಹಾಳಾಗಬಹುದು.
- ಚಪ್ಪಲಿ ಇಲ್ಲದೇ ಹೋಗಬೇಡಿ: ಬಿಸಿಗಲ್ಲು ಅಥವಾ ಭೂಮಿಯ ತಾಪಮಾನ ಹೆಚ್ಚಾಗಿರುವುದರಿಂದ ಕಾಲು ಸುಡುವ ಅಪಾಯವಿರುತ್ತದೆ.
- ಮಧ್ಯಪಾನ ಮತ್ತು ಸಕ್ಕರೆಪಾನೀಯಗಳನ್ನು ಸೇವಿಸಬೇಡಿ: ಇವು ದೇಹದ ತಾಪಮಾನ ಹೆಚ್ಚಿಸಿ, ನಿರ್ಜಲೀಕರಣ ಉಂಟುಮಾಡುತ್ತವೆ.
ಆರೋಗ್ಯ ಇಲಾಖೆಯ ಈ ಸಲಹೆಗಳನ್ನು ಪಾಲಿಸುವ ಮೂಲಕ ಬಿಸಿಲಿನ ಪ್ರಭಾವದಿಂದ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.