ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ‘ಪೋಕ್ಸ್’ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದ್ದು, ಕಾಗ್ನಿಜೆನ್ಸ್ ಮತ್ತು ಸಮನ್ಸ್ ಆದೇಶಕ್ಕೆ ತಡೆ ನೀಡಿದೆ. ಇದಲ್ಲದೆ, ಅವರು ಖುದ್ದು ಹಾಜರಾಗುವ ಅಗತ್ಯವಿಲ್ಲ ಎಂಬ ನಿರ್ಧಾರವನ್ನೂ ಹೈಕೋರ್ಟ್ ಪ್ರಕಟಿಸಿದೆ.
ಸಮನ್ಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಬಿ.ಎಸ್.ಯಡಿಯೂರಪ್ಪ
ಪೋಕ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾರ್ಚ್ 15 ರಂದು ಹಾಜರಾಗುವಂತೆ ಬೆಂಗಳೂರು 1ನೇ ತ್ವರಿತಗತಿ ನ್ಯಾಯಾಲಯ ಸಮನ್ಸ್ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ತೀರ್ಪಿನ ಪ್ರಕಾರ, ಹಾಜರಾತಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.
ಪ್ರಕರಣದ ಹಿನ್ನೆಲೆ
ಹೈಕೋರ್ಟ್ ಈ ಹಿಂದೆ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದರಿಂದಾಗಿ ಅವರ ಬಂಧನಕ್ಕೆ ತಡೆ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆದರೆ ಹೈಕೋರ್ಟ್ ಈಗ ಅವರ ಹಾಜರಾತಿಗೂ ವಿನಾಯಿತಿ ನೀಡಿದೆ.
ಈ ಪ್ರಕರಣ 17 ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದೆ. ಒಬ್ಬ ಮಹಿಳೆ ಈ ಕುರಿತು ದೂರು ದಾಖಲಿಸಿದ್ದು, ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ, ನಂತರ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.