ಬೆಂಗಳೂರು, ಏಪ್ರಿಲ್ 16: ಇಂದು ಕೂಡ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದ ಹಲವೆಡೆ ಮೋಡದ ವಾತಾವರಣ ಇರಲಿದೆ. ಇತ್ತೀಚೆಗೆ ಭಾರೀ ಬಿಸಿ ಹವಾಮಾನದಿಂದ ಕಂಗೆಟ್ಟಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ. ಚಂಡಮಾರುತದ ಸಣ್ಣ ಪ್ರಭಾವದಿಂದಾಗಿ ರಾಜ್ಯದ ಕೆಲವೆಡೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆಯಾಗಲಿರುವ ಜಿಲ್ಲೆಗಳು
ದಕ್ಷಿಣ ಕನ್ನಡ, ಉಡುಪಿ, ಹಾವೇರಿ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಈಗಾಗಲೇ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಾಗಿದೆ. ಕೆಲವೆಡೆ ಈಗಾಗಲೇ ಮಳೆಯು ಶುರುವಾಗಿದೆ.
ಬೆಂಗಳೂರು ನಗರದಲ್ಲೂ ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಇಂದು ಕೂಡ ಮೋಡ ಮುಸುಕಿದ ವಾತಾವರಣ ಮುಂದುವರೆಯಲಿದೆ. HAL ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 33.1°C ಹಾಗೂ ಕನಿಷ್ಠ 20.4°C ದಾಖಲಾಗಿದೆ. ನಗರದಲ್ಲಿ 34.1°C ಗರಿಷ್ಠ ಮತ್ತು 21.0°C ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕೆಐಎಎಲ್‌ನಲ್ಲಿ ಗರಿಷ್ಠ 34.6°C ಮತ್ತು ಕನಿಷ್ಠ 22.4°C ಉಷ್ಣಾಂಶವಿದೆ.
ಮಳೆಯಾದ ಪ್ರದೇಶಗಳು
ಬೆಂಗಳೂರು, ಹೆಸರಘಟ್ಟ, ಎಂಎಂ ಹಿಲ್ಸ್, ಶೃಂಗೇರಿ, ಭಾಗಮಂಡಲ, ನಾಪೋಕ್ಲು, ಬಂಡೀಪುರ, ಕುಶಾಲನಗರ, ಹಾರಂಗಿ, ಕಳಸ, ಬೇಗೂರು ಹಾಗೂ ಕೆಆರ್ ನಗರದಲ್ಲಿ ಮಳೆ ಈಗಾಗಲೇ ದಾಖಲಾಗಿದೆ.
ಒಣಹವೆಯಲ್ಲಿರುವ ಜಿಲ್ಲೆಗಳು
ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆಯು ಮುಂದುವರೆದಿದೆ.
ಒಣಹವೆ ಜಿಲ್ಲೆಗಳ ಮಾಹಿತಿ
ಕಲಬುರಗಿಯಲ್ಲಿ ಇಂದು 41.0°C ಗರಿಷ್ಠ ಉಷ್ಣಾಂಶ ದಾಖಲಾಗಿದೆ. ವಿಜಯಪುರದಲ್ಲಿ 39.4°C, ಬಾಗಲಕೋಟೆಯಲ್ಲಿ 37.8°C, ಧಾರವಾಡದಲ್ಲಿ 37.6°C ಉಷ್ಣಾಂಶ ದಾಖಲಾಗಿದೆ. ರಾಯಚೂರಿನಲ್ಲಿ ಗರಿಷ್ಠ 39.4°C ಹಾಗೂ ಕನಿಷ್ಠ 25.4°C ಉಷ್ಣಾಂಶ ದಾಖಲಾಗಿದೆ.
ಕರಾವಳಿ ಹಾಗೂ ಮಲೆನಾಡು ಪ್ರದೇಶದ ಉಷ್ಣಾಂಶ
ಹೊನ್ನಾವರ: ಗರಿಷ್ಠ 33.8°C, ಕನಿಷ್ಠ 25.7°C, ಕಾರವಾರ: ಗರಿಷ್ಠ 36.2°C, ಕನಿಷ್ಠ 26.5°C, ಪಣಂಬೂರು: ಗರಿಷ್ಠ 33.8°C, ಕನಿಷ್ಠ 22.7°C ಉಷ್ಣಾಂಶ ದಾಖಲಾಗಿದೆ.
ಕರ್ನಾಟಕದ ಹವಾಮಾನ ಮಿಶ್ರ ಪ್ರಭಾವ ಹೊಂದಿದ್ದು, ಕೆಲವು ಜಿಲ್ಲೆಗಳಲ್ಲಿ ಮೋಡದಿಂದ ಮಳೆ ಕರೆದಿದ್ದರೆ, ಇನ್ನೂ ಕೆಲವೆಡೆ ಬಿಸಿ ಉಷ್ಣತೆ ಮುಂದುವರೆದಿದೆ.