KPSC ಪರೀಕ್ಷೆ ಲೋಪ: ಉಪ್ಪು ತಿಂದವರು ನೀರು ಕುಡಿಯಲೇಬೇಕು: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

111 (20)

ಬೆಂಗಳೂರು: KPSC ಪರೀಕ್ಷೆ ಲೋಪ ಸಂಬಂಧ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಸಿ.ಎಂ.ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

KPSC ಪರೀಕ್ಷೆಯಲ್ಲಿ ಭಾಷಾಂತರದಲ್ಲಿ ಆದ ಲೋಪದ ಕಾರಣಕ್ಕೆ ಅಭ್ಯರ್ಥಿಗಳಿಗೆ ಆಗಿರುವ ಸಮಸ್ಯೆ ಬಗ್ಗೆ ವಿರೋಧ ಪಕ್ಷದ ನಿಲುವಳಿ ಸೂಚನೆ ಮೇಲೆ ಕೆಪಿಎಸ್‌ಸಿ ಕುರಿತ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರ ನೀಡಿದರು.

ADVERTISEMENT
ADVERTISEMENT

ಈ ಕುರಿತು ಇಂದು ಸದನದಲ್ಲಿ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, KPSC ಸದಸ್ಯರ ಸಂಖ್ಯೆ ಕಡಿಮೆ ಮಾಡುವುದು, ಸದಸ್ಯರ ಆಯ್ಕೆಗೆ ಸರ್ಚ್ ಕಮಿಟಿ ರಚಿಸುವುದು, ಮುಂದೆ ಆದಷ್ಟು ಪ್ರಾಮಾಣಿಕವಾಗಿ ಇರುವವರನ್ನು ನೇಮಕ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡೋಣ. ಮರು ಪರೀಕ್ಷೆ ಮಾಡಿ ಎಂದು ಸೂಚನೆ ಕೊಡಲು ಈಗ ಸಾಧ್ಯವಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ. ಮರು ಪರೀಕ್ಷೆಗೆ ನ್ಯಾಯಾಲಯ ಸೂಚನೆ ಕೊಟ್ಟರೆ ಮರು ಪರೀಕ್ಷೆ. ಮರು ಪರೀಕ್ಷೆ ಬಗ್ಗೆ ಕೋರ್ಟ್ ಸೂಚನೆ ಬರದಿದ್ದರೆ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದರು.

ತಪ್ಪು ಭಾಷಾಂತರದಿಂದ ಅನ್ಯಾಯಕ್ಕೆ ಒಳಗಾದವರ ಪರವಾಗಿ ನಾವಿದ್ದೇವೆ UPSC ಮಾದರಿಯಲ್ಲಿ KPSC ಪರೀಕ್ಷೆ , ನೇಮಕಾತಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ. KPSC ನಲ್ಲಿ ಹಲವು ಬಾರಿ ನಾನಾ ಗೊಂದಲಗಳಾಗಿ, ನ್ಯಾಯಾಲಯಗಳ ಮೆಟ್ಟಿಲು ಏರಿರುವ ಚರಿತ್ರೆ ಇದೆ ಭ್ರಷ್ಟಾಚಾರ KPSC ಯಿಂದ ಹೊರಗೆ ಹೋಗಬೇಕು. ಇದರ ಬಗ್ಗೆ ಎರಡು ಮಾತಿಲ್ಲ ಎಂದರು.

ಮುಖ್ಯಮಂತ್ರಿಗಳ. ಉತ್ತರದ ಇತರೆ ಹೈಲೈಟ್ಸ್….

1. ದಿನಾಂಕ 4/3/2025 ರಂದು ವಿರೋಧ ಪಕ್ಷದ ಸದಸ್ಯರು ನಿಲುವಳಿ ಸೂಚನೆಯನ್ನು ಮಂಡಿಸಿದ್ದಾರೆ. ನಿಲುವಳಿ ಸೂಚನೆಯನ್ನು ನಿಯಮ 69 ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಕುರಿತು ವಿರೋಧ ಪಕ್ಷದ ನಾಯಕರಾದಿಯಾಗಿ ಹಲವರು ಮಾತನಾಡಿದ್ದಾರೆ. ನಿಲುವಳಿ ಸೂಚನೆಯು ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಭಾಷಾಂತರದಲ್ಲಿ ಉಂಟಾಗಿರುವ ಲೋಪಗಳ ಕುರಿತು ಹಾಗೂ ಪರೀಕ್ಷೆಗಳು ನಡೆದು ಸಂದರ್ಶನಗಳನ್ನು ಮಾಡದೆ ಲೋಪ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು ಕೆ.ಪಿ.ಎಸ್.ಸಿ.ಯನ್ನು ರೋಗಗ್ರಸ್ತ ಸಂಸ್ಥೆಯೆAದು ಹಾಗೂ ಹುದ್ದೆಗಳಿಗೆ ರೇಟ್ ಫಿಕ್ಸ್ ಮಾಡುವ ಬಗ್ಗೆ ಮಾತನಾಡಿದ್ದಾರೆ.

2. ಆರ್.ಅಶೋಕ್ ಮತ್ತು ವಿರೋಧ ಪಕ್ಷದ ಸದಸ್ಯರುಗಳು ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಸ್ತುತ ನಡೆಯುತ್ತಿರುವ ಗೆಜೆಟೆಡ್ ಪ್ರೊಬೇಷರ‍್ಸ್ ಪರೀಕ್ಷೆಯಲ್ಲಿ ಕನ್ನಡ ಅನುವಾದಗಳನ್ನು ತಪ್ಪು ಮಾಡಲಾಗಿದೆ. ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ತಪ್ಪು ಮಾಡಿದ ಕಾರಣದಿಂದ ಉಂಟಾಗಿರುವ 30 ಕೋಟಿ ರೂ ನಷ್ಟವನ್ನು ತಪ್ಪಿತಸ್ಥರಿಂದ ವಸೂಲು ಮಾಡಬೇಕು. ಪರೀಕ್ಷೆ ನಡೆಸಲು ಈ ಹಿಂದೆ ಮಾಡಿರುವ ಅಧಿಸೂಚನೆಯನ್ನು ರದ್ದು ಮಾಡಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಕೆಪಿಎಸ್‌ಸಿಯ ಸಮಗ್ರ ಬದಲಾವಣೆಯಾಗಬೇಕು ಎಂದೂ ಸಹ ಸಲಹೆ ನೀಡಿದ್ದಾರೆ.

3. ಕೆಪಿಎಸ್‌ಸಿ ಸರಿಯಾಗಬೇಕು ಎಂಬ ಈ ಸದನದ ಕಳಕಳಿ ಸರಿಯಾಗಿದೆ. ನಮ್ಮ ಸರ್ಕಾರದ ಕಳಕಳಿ ಕೂಡ ಅದೇ ಆಗಿದೆ. ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಗಳು ಕಳಂಕರಹಿತವಾಗಿರಬೇಕು, ದಕ್ಷರೂ, ಪ್ರಾಮಾಣಿಕರೂ ಆದ ಅಧಿಕಾರಿಗಳು ರಾಜ್ಯದ ಆಡಳಿತ ಸೇವೆಗೆ ಬರಬೇಕು ಎಂಬ ಉದ್ದೇಶ, ಕಳಕಳಿ ನಮ್ಮದೂ ಆಗಿದೆ.

4. ಮೈಸೂರು ಅರಸರ ಅವಧಿಯಲ್ಲಿ ಮೈಸೂರು ಸಿವಿಲ್ ಸರ್ವಿಸ್ ಎಂಬುದು ದೇಶದಲ್ಲಿಯೆ ಪ್ರತಿಷ್ಠಿತ ಸೇವೆಯಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದವರು ಈ ಕುರಿತು ಗಮನಾರ್ಹ ಕೆಲಸ ಮಾಡಿದ್ದಾರೆ. ಆಯೋಗವು ತನ್ನ ಹಿಂದಿನ ಮರ್ಯಾದೆ ಹಾಗೂ ವೈಭವವನ್ನು ಮರಳಿ ತರುವ ಕೆಲಸ ಮಾಡಬೇಕು. ದೊಡ್ಡ ಪರಂಪರೆಯುಳ್ಳ ಕರ್ನಾಟಕ ಆಡಳಿತ ಸೇವೆಗೆ ಸೇರಬಯಸುವ ಅಧಿಕಾರಿಗಳ ಆಯ್ಕೆ ಮಾಡಿಕೊಡುವುದರಲ್ಲಿ ಆಯೋಗವು ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಿದೆ.

5. ಕೆಪಿಎಸ್‌ಸಿಯನ್ನು ಸರಿಪಡಿಸಬೇಕು. ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತವಾದ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಿ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಡಬೇಕು ಎಂಬ ಉದ್ದೇಶದಿಂದ 2013 ರ ಜುಲೈನಲ್ಲಿ ನಮ್ಮ ಸರ್ಕಾರವೇ ಪಿ.ಸಿ ಹೋಟಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದೆವು. ಸಮಿತಿಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾಗಿದ್ದ ಕೌಶಿಕ್ ಮುಖರ್ಜಿ ಮತ್ತು ಸಂಜೀವ್ ಕುಮಾರ್ ಅವರು ಸದಸ್ಯರಾಗಿದ್ದರು. ಈ ಸಮಿತಿಯು ನೀಡಿದ್ದ ಬಹುಪಾಲು ಶಿಫಾರಸ್ಸುಗಳನ್ನು ನಾವು ಅನುಷ್ಠಾನಕ್ಕೆ ತಂದಿದ್ದೆವು.

6. 1997 ರಿಂದ 2011 ರವರೆಗಿನ ಹಲವು ಪರೀಕ್ಷೆಗಳಲ್ಲಿ ನಡೆದಿದ್ದ ಅವ್ಯವಸ್ಥೆಗಳ ಕಾರಣದಿಂದಲೇ ಈ ಸಮತಿಯನ್ನು ರಚಿಸಿದ್ದೆವು. ಹೋಟಾ ಸಮಿತಿಯ ಶಿಫಾರಸ್ಸುಗಳಲ್ಲಿ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಹೊರ ರಾಜ್ಯದವರಾಗಿರಬೇಕು ಎಂಬ ಅಂಶವೂ ಇತ್ತು. ಅದನ್ನೂ ಅನುಷ್ಠಾನ ಮಾಡಲಾಗಿದೆ. ಈ ಅಧಿಕಾರಿಗಳಿಗೆ ಕನ್ನಡದ ಜ್ಞಾನದ ಕೊರತೆಯೂ ಇರುತ್ತದೆ. ಜನರ ಸಂಪರ್ಕ ಹೆಚ್ಚು ಇರದ, ನೆಂಟರು, ಇಷ್ಟರು ಮುಂತಾದ ಬಾಧ್ಯತೆಗಳಿಲ್ಲದವರು ಈ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಆಗಬೇಕೆಂಬುದು ಪಿ.ಸಿಹೋಟಾ ಸಮಿತಿಯ ಶಿಫಾರಸ್ಸು. ಸದುದ್ದೇಶದ ಕಾರಣದಿಂದ ಇದನ್ನು ಮಾಡಲಾಗಿದೆ. ಹಾಗಿದ್ದರೆ ಸಮಸ್ಯೆಗಳೆಲ್ಲಿ ಆಗಿವೆ ಎಂದು ಅಧಿಕಾರಿಗಳಲ್ಲಿ ಕೇಳಿದೆ. ಪ್ರಶ್ನೆಗಳನ್ನು ತಯಾರಿಸುವ ಕರ್ನಾಟಕದ ಅಧ್ಯಾಪಕರುಗಳಿಗೆ ಕನ್ನಡ ಅನುವಾದ ಮಾಡಲಾಗದ ದುಸ್ಥಿತಿ ಇದೆ ಎಂದರು. ಇಂಗ್ಲೀಷಿನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ನಂತರ ಕನ್ನಡಕ್ಕೆ ಅನುವಾದ ಮಾಡಲಾಗುತ್ತಿದೆ ಎಂದರು.

7. ಇದನ್ನೆಲ್ಲ ಆಯೋಗವು ಸೂಕ್ಷö್ಮವಾಗಿ ನಿಭಾಯಿಸಬೇಕು. ಈ ಕಾರಣಕ್ಕೆ ಆಯೋಗವನ್ನು ನೇಮಿಸಲಾಗಿರುತ್ತದೆ. ಸಿದ್ಧಪಡಿಸುವ ಪ್ರಶ್ನೆಗಳು ಪರೀಕ್ಷೆಗೆ ಮೊದಲು ಯಾರಿಗೂ ಗೊತ್ತಾಗಬಾರದು ಜೊತೆಗೆ ಪ್ರಶ್ನೆ ಪತ್ರಿಕೆ ಗುಣ ಮಟ್ಟದ್ದಾಗಿರಬೇಕು. ಈ ಷರತ್ತಿನೊಡನೆ ಆಯೋಗವು ಪರೀಕ್ಷೆ ನಡೆಸಬೇಕು. ಆದರೆ ಪದೇ ಪದೇ ಎಡಹುತ್ತಿದೆ.

8. ಲೋಕಸೇವಾ ಆಯೋಗಗಳ ಕುರಿತು ಸರ್ಕಾರಗಳು ನೇರವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಇದು ಸಂವಿಧಾನಬದ್ಧವಾದ ಸಂಸ್ಥೆಯಾಗಿದೆ. ಲೋಕ ಸೇವಾ ಆಯೋಗಗಳು ಆರ್ಟಿಕಲ್ 315 ರಂತೆ ರಚನೆಯಾಗಿವೆ. ಲೋಕ ಸೇವಾ ಆಯೋಗಗಳ ಸದಸ್ಯರನ್ನು ತೆಗೆದು ಹಾಕಲು ಸುಪ್ರೀಂಕೋರ್ಟಿನ ಒಪ್ಪಿಗೆಯೊಂದಿಗೆ ರಾಷ್ಟçಪತಿಗಳು ಆರ್ಟಿಕಲ್ 317 ರಂತೆ ತೆಗೆದು ಹಾಕಬೇಕು.

9. ಹಾಗೆಂದು ಹೇಳಿ ನಾವು ಕೈಕಟ್ಟಿ ಕೂತುಕೊಳ್ಳುವಂತೆ ಇಲ್ಲ. ಏನಾದರೂ ಮಾಡಲೇಬೇಕು. ಸದನದ ಸದಸ್ಯರು ಮಾತನಾಡಸುವಾಗ ಸಲಹೆಗಳನ್ನು ನೀಡಿದ್ದರೆ ಉತ್ತಮವಿತ್ತು. ಆದರೂ ಸಹ ನಮ್ಮ ಸರ್ಕಾರ ಲೋಕ ಸೇವಾ ಆಯೋಗವನ್ನು ಸರಿದಾರಿಗೆ ತರಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತದೆ.

10. ಆರ್. ಅಶೋಕ ರವರು ಉತ್ತರ ಪ್ರದೇಶದಲ್ಲಿ 25 ಕೋಟಿ ಜನಸಂಖ್ಯೆ ಇರಬಹುದು, ಅಲ್ಲಿ ಕೇವಲ 8 ಜನ ಸದಸ್ಯರಿದ್ದಾರೆ. ಆದರೆ, ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆಯಲ್ಲಿ 16 ಜನ ಸದಸ್ಯರಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಕೆ.ಪಿ.ಎಸ್.ಸಿ.ಯ ಸದಸ್ಯರ ಸಂಖ್ಯೆ ಅಧ್ಯಕ್ಷರೂ ಸೇರಿದಂತೆ 14 ರಿಂದ 16 ಕ್ಕೆ ಏರಿಸಿದ್ದು ಬೊಮ್ಮಾಯಿಯವರ ಸರ್ಕಾರ. ಇರಲಿ ಈ ಕುರಿತೂ ಕೂಡ ನಾವು ಏನಾದರೂ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು.

11. ನಾವು ಕೆಪಿಎಸ್‌ಸಿ ಸಿಬ್ಬಂದಿಗಳ ನೇಮಕ, ವರ್ಗಾವಣೆ ಇತ್ಯಾದಿಗಳ ಕುರಿತಂತೆ ನಿಯಮಗಳಿಗೆ ಹಲವಾರು ತಿದ್ದುಪಡಿ ತರಲು ಉದ್ದೇಶಿಸಿದ್ದೇವೆ. ಪ್ರಯತ್ನಗಳನ್ನು ಪ್ರಾರಂಭಿಸಲಾಗಿದೆ.

ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯ ವಿಷಯ:-

12. 384 ಹುದ್ದೆಗಳ ಗೆಜೆಟೆಡ್ ಪ್ರೊಬೆಷನರ್ ಪೂರ್ವಭಾವಿ ಪರೀಕ್ಷೆಯನ್ನು ಆಯೋಗವು ಮೊದಲಿಗೆ ದಿನಾಂಕ:27-08-2024 ರಂದು ನಡೆಸಿದ್ದು, ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳ ಕನ್ನಡ ಭಾಷಾಂತರದಲ್ಲಿನ ಲೋಪದೋಷಗಳು ಉಂಟಾಗಿರುವ ಬಗ್ಗೆ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲು, ಆಯೋಗವು ವಿಷಯ ತಜ್ಞರುಗಳ ಸಮಿತಿಗಳನ್ನು ರಚಿಸಿದೆ. ಸದರಿ ಸಮಿತಿಯು ಭಾಷಾಂತರದ ಲೋಪದಿಂದಾಗಿ ಎರಡೂ ಪತ್ರಿಕೆಗಳಿಂದ ಒಟ್ಟು 10 ಪ್ರಶ್ನೆಗಳ ಕೀ-ಉತ್ತರಗಳು ಪರಿಷ್ಕೃತಗೊಳ್ಳಲಿವೆ ಎಂಬ ಅಭಿಪ್ರಾಯವನ್ನು ನೀಡಿದ್ದರು.

13. ಆದಾಗ್ಯೂ, ಆಯೋಗವು ಮರು ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿ, ದಿನಾಂಕ:29-12-2024ರAದು ಮರುಪರೀಕ್ಷೆಯನ್ನು ನಡೆಸಲಾಗಿರುತ್ತದೆ. ಸದರಿ ಮರು ಪರೀಕ್ಷೆಯಲ್ಲಿಯೂ ಸಹ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ಬಾಷಾಂತರದಲ್ಲಿ ಲೋಪವಿರುವುದಾಗಿ ದೂರುಗಳು ಸ್ವೀಕೃತವಾದ ಹಿನ್ನೆಲೆಯಲ್ಲಿ ಆಯೋಗವು ವಿಷಯ ತಜ್ಞರುಗಳ ಸಮಿತಿಗಳನ್ನು ಮತ್ತೊಮ್ಮೆ ರಚಿಸಿದ್ದು, ಸದರಿ ಸಮಿತಿಯು ಎರಡೂ ಪತ್ರಿಕೆಗಳನ್ನು ಪರಿಶೀಲಿಸಿ, ಒಟ್ಟು 6 ಪ್ರಶ್ನೆಗಳು ತಪ್ಪಾಗಿದ್ದು, ಕೃಪಾಂಕ ನೀಡಬಹುದೆಂದು ಅಭಿಪ್ರಾಯಿಸಿರುತ್ತಾರೆ.

14. ಇಂತಹ ಪ್ರಕರಣಗಳಲ್ಲಿ ವಿಷಯ ತಜ್ಞರ ಸಮಿತಿಯು ನೀಡುವ ಅಭಿಪ್ರಾಯಗಳನ್ನು ಪರಿಗಣಿಸುವುದನ್ನು ಉತ್ತರ ಪ್ರದೇಶ ಸರ್ವಿಸ್ ಕಮಿಷನ್ V/s ರಾಹುಲ್ ಸಿಂಗ್ ಪ್ರಕರಣ ಸಂಖ್ಯೆ:C.A.No.5838/2018, ದಿನಾಂಕ:14-06-2018 ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಎತ್ತಿ ಹಿಡಿದಿದೆ.

15. ಈ ಹಿಂದಿನ ಪರೀಕ್ಷೆಗಳ ತುಲನಾತ್ಮಕ ದತ್ತಾಂಶ ವಿಶ್ಲೇಷಣೆಯನ್ವಯ 2023-24ನೇ ಸಾಲಿನಲ್ಲಿ ಕನ್ನಡ ಮಾಧ್ಯಮ ಪರೀಕ್ಷೆಯನ್ನು ತೆಗೆದುಕೊಂಡು ಮುಖ್ಯ ಪರೀಕ್ಷೆಗೆ ಅರ್ಹರಾದ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಸಂಖ್ಯೆಯು ಕಳೆದ ಸಾಲಿನ ನೇಮಕಾತಿಗೆ ಹೋಲಿಸಿದಲ್ಲಿ ಶೇ.6.50 ರಷ್ಟು ಹೆಚ್ಚಳವಾಗಿರುತ್ತದೆಂದು ಆಯೋಗವು ಮಾಧ್ಯಮಗಳಿಗೆ ಪ್ರಕಟ ಮಾಡಿದೆ.

16. ಈಗಾಗಲೇ ಮುಖ್ಯ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಿ, ಆಯೋಗವು ಅಧಿಸೂಚನೆಯನ್ನು ಹೊರಡಿಸಿದ್ದು, ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ: A.No.285-308/2025 ದಾಖಲಿಸಿದ್ದು, ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಕರಣ ಬಾಕಿ ಇರುತ್ತದೆ.

17. ಪ್ರಸ್ತುತ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಈ ಹಂತದಲ್ಲಿ ಸರ್ಕಾರವು ಯಾವುದೇ ನಿರ್ಣಯವನ್ನು ಕೈಗೊಳ್ಳುವುದು ನ್ಯಾಯೋಚಿತವಾಗಿರುವುದಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ನಂತರ ಆಯೋಗವು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವು ಆಯೋಗಕ್ಕೆ ಸೂಚನೆ ನೀಡುತ್ತದೆ. ಈ ಹಂತದಲ್ಲಿ ಸರ್ಕಾರವು ಯಾವುದೇ ಕ್ರಮಗಳನ್ನು ಕೈಗೊಳ್ಳಲು ಬರುವುದಿಲ್ಲ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರ ನೇಮಕಾತಿ ಪ್ರಕರಣ.

18. ಆಯೋಗವು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರು 25 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಯನ್ನು ನಡೆಸಿ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ:31-01-2024 ರಂದು ಪ್ರಕಟಿಸಿರುತ್ತದೆ. ತಾತ್ಕಾಲಿಕ ಆಯ್ಕೆಪಟ್ಟಿಗೆ ಶ್ರೀ ಆನಂದ್ ಎಸ್.ಸಿದ್ಧಾರೆಡ್ಡಿ ಇವರು ದಿನಾಂಕ:25-09-2023 ರಂದು ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಶೀಲಿಸುವ ಸಲುವಾಗಿ ಆಯೋಗದಲ್ಲಿರುವ ಸದಸ್ಯರುಗಳನ್ನೊಳಗೊಂಡ ಸದಸ್ಯರ ಸಮಿತಿಯನ್ನು ಆಯೋಗವು ರಚಿಸಿ ಅಂತಿಮ ವರದಿಯನ್ನು ಈ ಕೆಳಕಂಡ ಪ್ರಮುಖ ಶಿಫಾರಸ್ಸುಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸಿರುತ್ತದೆ.

1. 10 ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ರದ್ದುಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು.
2. ಇನ್ನುಳಿದ ಕಳಂಕರಹಿತ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಜಾರಿ ಮಾಡುವುದು.
3. ಸದರಿ ಸಮಿತಿಯ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯುವ ಸಲುವಾಗಿ ಹೆಚ್ಚಿನ ತನಿಖೆಯನ್ನು ಪೊಲೀಸ್/ ಸಿಐಡಿ ಮುಖಾಂತರ ಮಾಡಿಸುವುದು.

19. ಆಯ್ಕೆಯಾದ ಅಭ್ಯರ್ಥಿ ಶ್ರೀ ವಿಶ್ವಾಸ್.ಎಸ್ ಇವರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ:W.P.NO.5310/2025 ಅನ್ನು ದಾಖಲಿಸಿದ್ದು, ಈ ಸಂಬಂಧ ನ್ಯಾಯಾಲಯವು “ಈ ಪ್ರಕರಣದಲ್ಲಿ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮಕೈಗೊಳ್ಳದಂತೆ ” ನಿರ್ದೇಶನ ನೀಡಿದೆ. ಪ್ರಕರಣ ಇತ್ಯರ್ಥ ಆದ ಕೂಡಲೇ ಈ ಕುರಿತು ಕ್ರಮವಹಿಸಲಾಗುವುದು.

20. ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ನೇಮಕಾತಿ ಪ್ರಕ್ರಿಯೆ ಸಂಬಂಧಿಸಿದಂತೆ, ಈ ಕೆಳಕಂಡ ಸುಧಾರಣೆಗಳನ್ನು ಮಾಡಲು ಸರ್ಕಾರವು ಮುಂದಾಗಿದೆ.

21. ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಎಲ್ಲಾ ಪರೀಕ್ಷೆಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಸಲಾಗುತ್ತಿದೆ. ಪ್ರತಿ ಅಭ್ಯರ್ಥಿಗೂ ವೈಯಕ್ತಿಕ ಒಎಂಆರ್ ಹಾಳೆಯನ್ನು ಬಾರ್ ಕೋಡ್ ನೊಂದಿಗೆ ನೀಡಲಾಗುತ್ತಿದ್ದು, ನಂತರ ಅತ್ಯಂತ ಗೌಪ್ಯವಾಗಿ ಸ್ಕಾö್ಯನ್ ಮಾಡಲಾಗುತ್ತಿದೆ.

Exit mobile version