ಉದ್ಯೋಗ ಮೇಳ ಆಯೋಜನೆ ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದು: ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ

Film (52)

ಉದ್ಯೋಗ ಮೇಳ ಆಯೋಜಿಸಿರುವುದು ರಾಜ್ಯಕ್ಕೆ ಹಾಗೂ ದೇಶಕ್ಕೆ ಒಳ್ಳೆಯದು ಎಂದು ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮತ್ತು ಮಹಾನಗರ ಪಾಲಿಕೆ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಯ ಕೆಸಿಟಿ ಕಾಲೇಜು ಆವರಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ ( ಯುವ ಸಮೃದ್ದಿ ಸಮ್ಮೇಳನ) ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ADVERTISEMENT
ADVERTISEMENT

ಕೇಂದ್ರದಲ್ಲಿ ಕೌಶಲ್ಯಾಭಿವೃದ್ದಿ ಸಚಿವರಾಗಿದ್ದಾಗ ಕರ್ನಾಟಕದಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರಗಳನ್ನು ಜರ್ಮನ್ ಸಹಯೋಗದಲ್ಲಿ ತೆರಯಲು ಜರ್ಮನ್ ಚಾನ್ಸಲರ್ ಮಾರ್ಕಲ್ ಅವರೊಂದಿಗೆ ಚರ್ಚೆ ನಡೆಸಿದ್ದೆ. ಅದಕ್ಕೆ ಅವರು ಒಪ್ಪಿದ್ದರಿಂದ ಒಂದು ಬೆಂಗಳೂರಿನಲ್ಲಿ ಮತ್ತೊಂದು ಕಲಬುರಗಿ ಯಲ್ಲಿ ಸ್ಥಾಪಿಸಲಾಗಿತ್ತು.ಅಲ್ಲಿ ತರಬೇತಿ ಪಡೆದವರಲ್ಲಿ ಸಾವಿರಾರು ಜನರು ಉದ್ಯೋಗ ಪಡೆದಿದ್ದಾರೆ.

ಕೈಗಾರಿಕಾ ಸಚಿವರಾಗಿದ್ದಾಗ ಜಿಟಿಟಿಸಿ ಕೇಂದ್ರ ಸ್ಥಾಪಿಸಿದೆ.ಜಿಟಿಟಿಸಿ ಕೇಂದ್ರದಲ್ಲಿ ಸರ್ಟಿಫಿಕೇಟ್ ಪಡೆದವರಿಗೆ ದೇಶದ ಯಾವುದೇ ಭಾಗದಲ್ಲಿ ಕೆಲಸ ಸಿಗುತ್ತದೆ. ಕಾರ್ಮಿಕ ಸಚಿವರಾಗಿದ್ದಾಗ ಐಟಿಐ ಸ್ಥಾಪನೆ ಮಾಡಿದೆ 1952-2009 ರವರೆಗೆ 5,000 ಐಟಿಐ ಕಾಲೇಜುಗಳಿದ್ದವು. ಮತ್ತಷ್ಟು ಐಟಿಐ ಕೇಂದ್ರ ಸ್ಥಾಪಿಸುವಂತೆ ಮನವಿ ಮಾಡಿದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮೂರು ಐಟಿಐ ಕೊಟ್ಟರು. ಅಂದಿನ ಕೇಂದ್ರಗಳಲ್ಲಿ‌ ಶೀಫ್ಟ್ ಆಧಾರದ ಮೇಲೆ ತರಬೇತಿ ನೀಡಲಾಗುತ್ತಿತ್ತು. ನನ್ನ ಅವಧಿಯಲ್ಲಿ ಸಿಂಗಲ್ ವಿಂಡೋ ಸ್ಥಾಪನೆ ಮಾಡಿ ಕುಶಲ ಕಾರ್ಮಿಕರ ಸಂಖ್ಯೆ ಹೆಚ್ಚಳ ಮಾಡಲು ಲಕ್ಷಾಂತರ ಜನರಿಗೆ ತರಬೇತಿ‌ ನೀಡಲಾಗಿತ್ತು ಎಂದು ನೆನಪಿಸಿಕೊಂಡರು.

ಕಾರ್ಖಾನೆ ಗಳು ಯುವಕರಿಗೆ ಕೌಶಲ್ಯತೆ ಹೆಚ್ಚಿಸಲು ತರಬೇತಿ ನೀಡಬೇಕು. ಬೆಂಗಳೂರಿನಲ್ಲಿ ಕೌಶಲ್ಯ ಅಭಿವೃದ್ದಿ ತರಬೇತಿ ಕೇಂದ್ರಗಳಿವೆ. ಯುವಕರು ಅಲ್ಲಿ ತರಬೇತಿ ಪಡೆದುಕೊಳ್ಳಬೇಕು. ಹಾಗಾಗಿ ಅಂತಹ ಯುವಕರು ಕೇವಲ ಪದವಿ ಓದಿದರೆ ಮಾತ್ರ ಕೆಲಸ ಸಿಗುವುದಿಲ್ಲ. ಅದರ ಜೊತೆಗೆ ತಾಂತ್ರಿಕತೆ ಹಾಗೂ ಕೌಶಲ್ಯ ಅಭಿವೃದ್ದಿ ಹೆಚ್ಚಿಸುವ ತರಬೇತಿ ಹೊಂದಿದಾಗ ಮಾತ್ರ ಕೆಲಸ ಸಿಗುತ್ತವೆ. ಅಂತಹ ತರಬೇತಿ ಕೇಂದ್ರಗಳನ್ನು ಕಾಂಗ್ರೆಸ್ ಅವಧಿಯಲ್ಲಿ ತೆರೆಯಲಾಗಿತ್ತೇ ಹೊರತು ಮೋದಿ ಅವಧಿಯಲ್ಲಿ ಅಲ್ಲ ಎಂದು ಕುಟುಕಿದರು.

ಹೈ- ಕ ಭಾಗಕ್ಕೆ ಆರ್ಟಿಕಲ್ 371 ಜಾರಿಗೆ ತರವಲ್ಲಿ ಅಂದಿನ ಗೃಹ ಸಚಿವ ಅಧ್ವಾನಿ ಅಧ್ವಾನ ಮಾಡಿಬಿಟ್ಟಿದ್ದರು. ಆದರೆ ಯುಪಿಎ ಸರ್ಕಾರ ಸದಸ್ಯ ಬಲದ ಬೆಂಬಲವಿಲ್ಲದಿದ್ದರೂ ಕೂಡಾ ಇತರೆ ಸಂಸದರೊಂದಿಗೆ ಮಾತುಕತೆ ನಡೆಸಿ ಆರ್ಟಿಕಲ್ 371(1) ಜಾರಿಗೆ ತಂದಿದೆ.. ಸುಮ್ಮನೆ ಕೂತರೆ ಯಾವುದೂ‌ ಸಿಗುವುದಿಲ್ಲ. ಬಿ.ಆರ್.ಪಾಟೀಲ್ ತರಹ ಆಗಾಗ ಸೌಂಡ್ ಮಾಡುತ್ತಿದ್ದರೆ ಏನಾದರೂ ಸಿಗುತ್ತದೆ. ಯಾವುದೇ ಯೋಜನೆಯಾಗಲಿ ಅದರ ಬಳಕೆ ಮಾಡಿಕೊಳ್ಳಬೇಕು. ಈ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ದಿಯಾಗಿಲ್ಲ. ಸಿಎಂ, ಡಿಸಿಎಂ ಬಂದಿದ್ದಾರೆ, ಅವರು ಸ್ವಲ್ಪ‌‌ ಮನಸು ಮಾಡಿ‌ ಈ ಭಾಗದ ಕೈಗಾರಿಕೆ ಅಭಿವೃದ್ದಿಗೆ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಮೋದಿ ನಮ್ಮ ಭಾಗಕ್ಕೆ ಒಳ್ಳೆಯದು ಮಾಡಿಲ್ಲ, ಮಾಡುವುದು ಇಲ್ಲ. ಕಡೇಚೂರಿನಲ್ಲಿ ರೈಲು ಭೋಗಿ ಕಾರ್ಖಾನೆ ತಂದಿದ್ದೇವೆ. ಜಾಗ,‌ನೀರು, ವಿದ್ಯುತ್ ಪುಕ್ಕಟೆಯಾಗಿ ಕೊಟ್ಟಿದ್ದೇವೆ. ಆದರೆ ಮೋದಿ ಅನುದಾನ ಬಿಡುಗಡೆ ಮಾಡಿ ಅಲ್ಲಿ ಕೈಗಾರಿಕೆಗಳ ಅಭಿವೃದ್ದಿ ಯಾಕೆ ಮಾಡುತ್ತಿಲ್ಲ. ಈ ವಿಚಾರದಲ್ಲಿ ಅವರು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿ, ಈ ಭಾಗದಲ್ಲಿ ರೇಲ್ವೆ ಕಾರ್ಖಾನೆ ಅಭಿವೃದ್ದಿ ಸೇರಿದಂತೆ ಬೇರೆ ಬೇರೆ ಕೈಗಾರಿಕೆಗಳ‌ ಅಭಿವೃದ್ದಿಗೆ ಅವರು‌ ಸಹಕರಿಸಬೇಕು ಎಂದು ಆಗ್ರಹಿಸಿದರು.

ಶ್ರೀನಿವಾಸ ಸರಡಗಿ ಗ್ರಾಮದ ಜನರು ಒಪ್ಪಿಗೆ ಮೇಲೆ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಜಮೀನು ಕೊಟ್ಟಿದ್ದಾರೆ. ಈಗ ನೋಡಿದರೆ ಇಲ್ಲಿ ವಿಮಾನಗಳೇ ಬರುತ್ತಿಲ್ಲ. ವಿಮಾನ ನಿಲ್ದಾಣ ನಮ್ಮ ಸ್ಥಳೀಯ ರೈತರು ಜಾಗ ಕೊಟ್ಟಿದ್ದರಿಂದ ನಿರ್ಮಾಣವಾಗಿದೆ. ಇಲ್ಲಿ ನಿರಂತರ ವಿಮಾನ ಸೇವೆ ಒದಗಿಸಲು ಮೋದಿ ಮನಸು ಮಾಡಲಿ ಎಂದರು.

ನ್ಯಾಷನಲ್‌ ಹೆರಾಲ್ಡ್ ಪತ್ರಿಕೆಯನ್ನು 1937 ರಲ್ಲಿ ನೆಹರು ಅವರು ಸ್ಥಾಪಿಸಿ ಜನರು ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಲು ಪ್ರಯತ್ನಿಸಿದ್ದರು. ಅಂತಹ ಪತ್ರಿಕೆಯ ಮೇಲೆ ಇಡಿ ದಾಳಿ ನಡೆಸಿ ಸೋನಿಯಾಗಾಂಧಿ ಅವರ ಮೇಲೆ ಕೇಸು ದಾಖಲಿಸಲಾಗಿದೆ. ನಿಮಗೆ ನಾಚಿಕೆಯಾಗಬೇಕು.ನಿಮ್ಮ ಆರ್ಗನೈಸರ್ ದೇಶದ ಜನರ ಒಗ್ಗಟ್ಟು ಕೆಡಿಸುವ ಕೆಲಸ ಮಾಡುತ್ತಿದೆ. ಈಗ ವಕ್ಫ್ ಆಗಿದೆ. ಮುಂದೆ ಕ್ರಿಶ್ಚಿಯನ್‌ ಅವರ 7 ಕೋಟಿ ಹೆಕ್ಟರ್ ಜಮೀನಿನ ಮೇಲೆ‌ ಕಣ್ಣು ಬಿದ್ದಿದೆ ಎಂದು ಆರ್ಗನೈಜರ್ ಬರೆದಿದೆ. ಆದರೆ ಇತ್ತೀಚಿಗೆ ಆ ಮಾತನ್ನು ವಾಪಸ್ ಪಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯರವರು ಇತ್ತೀಚಿಗೆ ಬಾಬಾ ಸಾಹೇಬರ ಹೆಸರು ಹೇಳುತ್ತಿದ್ದಾರೆ. ಕಾಂಗ್ರೆಸ್ ಬಾಬಾಸಾಹೇಬರನ್ನು ಅಪಮಾನಿಸಿದೆ ಎಂದು ಆರೋಪಿಸಿದ್ದಾರೆ. ನೀವು ಅವರ ಹೆಸರು ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ನಾವು ಸಂವಿಧಾನ ರಚನೆ ಮಾಡುವ ಜವಾಬ್ದಾರಿ ಕೊಟ್ಟಿದ್ದೇವು.‌ ಹಾಗೆ ನೋಡಿದರೆ ಬಾಬಾಸಾಹೇಬರ ಹೆಸರನ್ನು ನೀವು ಹಾಳು ಮಾಡಿದ್ದೀರಿ ಎಂದು ಬಿಜೆಪಿ ಮೇಲೆ ಹರಿಹಾಯ್ದ ಖರ್ಗೆ, ದೇಶ ಒಡೆಯುವ ಪ್ರಯತ್ನಗಳಿಂದ ಹಾಗೂ ಇಡಿಗಳಿಂದ ಕೇಸು ದಾಖಲಿಸಿ ಕಾಂಗ್ರೆಸ್ ಪಕ್ಷವನ್ನು ಬಗ್ಗಿಸುವ ಪ್ರಯತ್ನ ಮಾಡಿದರೆ ನಾವು ಮಣಿಯುವುದಿಲ್ಲ. ಗಾಂಧಿ ಕುಟುಂಬದಲ್ಲಿ ಎರಡು ಜೀವ ಹೋಗಿವೆ. ಆದರೆ ಹೆದರಿಲ್ಲ, ನಿಮ್ಮ ಇಡಿ, ಸಿಬಿಐ ಕೇಸುಗಳಿಗೆ ಹೆದರುವುದಿಲ್ಲ ಎಂದು ಗುಡುಗಿದರು.

ಜನರು ನಿಮಗೆ ಆಶೀರ್ವಾದ ಮಾಡಿ ಅಧಿಕಾರದಲ್ಲಿ ಕೂಡಿಸಿದ್ದಾರೆ. ನಿಮ್ಮಲ್ಲಿ ಏನೇ ಬೇಧ ಬಾವ ಇರಲಿ ನೀವು ಒಂದಾಗಿರಬೇಕು, ನೀವು ಜಾಗೃತರಾಗಿರಬೇಕು ಇಲ್ಲದಿದ್ದರೆ ಮೋದಿ- ಶಾ ನಿಮ್ಮ ಮೇಲೆ ದಾಳಿ ಮಾಡುತ್ತಾರೆ, ನಿಮ್ಮನ್ನು ಹೆದರಿಸುತ್ತಾರೆ ಎಂದು ರಾಜ್ಯ ಸರ್ಕಾರಕ್ಕೆ ಕಿವಿ ಮಾತು ಹೇಳಿದ ಅವರು ನಾವು ಅವರ ಯಾವುದೇ ದಾಳಿಗೆ ಹೆದರದೆ ಬಿಜೆಪಿ ಸರ್ಕಾರವನ್ನು ಓಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Exit mobile version