ರಾಜ್ಯದಲ್ಲಿ ಅನಧಿಕೃತ ಹಾಗೂ ನೋಂದಣಿಯಾಗದಿರುವ ವಾಹನಗಳ ಸಂಚಾರವನ್ನು ಗಂಭೀರವಾಗಿ ಪರಿಗಣಿಸಿ, ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 5, 1989ರ ನಿಯಮ 46(2)ರ ಪ್ರಕಾರ, ಮರು ನೋಂದಣಿಗೆ ವಾಹನವನ್ನು ಸಂಬಂಧಿಸಿದ ನೋಂದಣಿ ಪ್ರಾಧಿಕಾರದ ಮುಂದೆ ಭೌತಿಕವಾಗಿ ಹಾಜರುಪಡಿಸಬೇಕಾಗಿರುತ್ತದೆ.
ವಾಹನ ಮರು ನೋಂದಣಿ ಕುರಿತು ಮೋಟಾರು ವಾಹನ ಕಾಯ್ದೆ 1988ರ ಕಲಂ 47 (1) ರ ಪ್ರಕಾರ, ಒಂದು ರಾಜ್ಯದಲ್ಲಿ ನೋಂದಾಯಿತ ಮೋಟಾರು ವಾಹನವನ್ನು ಹನ್ನೆರಡು ತಿಂಗಳುಗಳಿಗಿಂತ ಹೆಚ್ಚಿನ ಅವಧಿಗೆ ಮತ್ತೊಂದು ರಾಜ್ಯದಲ್ಲಿ ಕಾರ್ಯಾಚರಣೆ ಮಾಡಿದಲ್ಲಿ, ಅಂತಹ ವಾಹನದ ಮಾಲೀಕರು, ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 54ರ ಪ್ರಕಾರ ಮೂಲ ನೋಂದಣಿ ಪ್ರಾಧಿಕಾರದಿಂದ ನಮೂನೆ-28 ರಲ್ಲಿ ನಿರಾಕ್ಷೇಪಣಾ ಪತ್ರ (ಎನ್.ಒ.ಸಿ.) ಪಡೆದು, 30 ದಿನಗಳ ಒಳಗಾಗಿ ಹಾಗೂ ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 81ರಡಿ ನಿಗದಿತ ಶುಲ್ಕ ಹಾಗೂ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ತೆರಿಗೆ ಷೆಡ್ಯೂಲ್ ನಲ್ಲಿ ನಿಗದಿಪಡಿಸಿದ ತೆರಿಗೆ ಪಾವತಿಸಿ ಮರು ನೋಂದಣಿ ಸಂಖ್ಯೆ ಪಡೆಯುವ ಸಲುವಾಗಿ ಅರ್ಜಿ ನಮೂನೆ-ಕೆ.ಎಂ.ವಿ.-27 ಮತ್ತು ಸಿ.ಎಂ.ವಿ.27ನ್ನು ಸಂಬಂಧಿಸಿದ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ ಎಂದು ತಿಳಿಸಿದರು.