ವರದಿ: ಮೂರ್ತಿ,ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ
ನೆಲಮಂಗಲದ ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯೋರ್ವನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಅಪಹರಿಸಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕೂಡ್ಲೂರು ಗ್ರಾಮದ ನಿವಾಸಿಯಾದ ದಿಲೀಪ್ ಕುಮಾರ್ (42) ಎಂಬುವವರನ್ನು ಕಿಡ್ನಾಪ್ ಮಾಡಲಾಗಿದೆ.
ಬೆಂಗಳೂರು ಕಾಮಾಕ್ಷಿಪಾಳ್ಯದ ಶೋಭಾ ಎಂಬುವರು ದಿಲೀಪ್ ಕುಮಾರ್ ಅವರ ಮೊದಲ ಪತ್ನಿಯಾಗಿದ್ದು, ಅವರೇ ಈ ಅಪಹರಣಕ್ಕೆ ಸುಪಾರಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದಿಲೀಪ್ ಕುಮಾರ್ ತಮ್ಮ ಎರಡನೇ ಪತ್ನಿ ಅಮೃತ ಜೊತೆಗೆ ಬಲೋನೋ ಕಾರಿನಲ್ಲಿ ನೆಲಮಂಗಲಕ್ಕೆ ಆಗಮಿಸಿದ್ದರು. ಈ ವೇಳೆ, ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿ, ಲಾಂಗ್ ಮೂಲಕ ತೀವ್ರ ಹಲ್ಲೆ ಮಾಡಿ, ಅವರ ಕಾರಿನಲ್ಲೇ ದಿಲೀಪ್ ಕುಮಾರ್ ಅವರನ್ನು ಬಲವಂತವಾಗಿ ಕಿಡ್ನಾಪ್ ಮಾಡಿದ್ದಾರೆ.
ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ನಾಕಬಂಧಿ ಜಾರಿಗೊಳಿಸಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.ಪೊಲೀಸರು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹಣಕಾಸಿನ ವಿಚಾರಕ್ಕೆ ವ್ಯಕ್ತಿಯ ಭೀಕರ ಕೊಲೆ
ಹಣಕಾಸಿನ ವಿಚಾರಕ್ಕೆ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಅಪಹರಿಸಿ, ರಾಮನಗರ ಜಿಲ್ಲೆಯ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಾಳು ಗ್ರಾಮದ ಚಿರಂತ್ ಶಾಲೆ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಬೆಂಗಳೂರಿನ ಚಿಕ್ಕಬ್ಯಾಲಕೆರೆ ಗ್ರಾಮದ ನಿವಾಸಿ ಚಂದ್ರಶೇಖರ್ (40) ಕೊಲೆಯಾದ ದುರ್ದೈವಿ. ಇಂದು ಬೆಳಿಗ್ಗೆ ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಸಾತನೂರು ಠಾಣೆಯ ಪೊಲೀಸರು ಮಹಜರು ನಡೆಸಿ ಪರಿಶೀಲನೆ ಕೈಗೊಂಡರು. ನಂತರ ಸುತ್ತಲಿನ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಯಿತು. ಮೃತನ ಪೋಷಕರಿಗೆ ಕೂಡ ಮಾಹಿತಿ ನೀಡಲಾಯಿತು.
ಚಂದ್ರಶೇಖರ್ ಅವರ ಬಟ್ಟೆ ಮತ್ತು ಮೃತದೇಹದ ಚಹರೆಯಿಂದ ಗುರುತಿಸಲು ಸಾಧ್ಯವಾಯಿತು. ಅಪಹರಣ ಮಾಡಿದ ಕಾರಿನಲ್ಲಿ ದುಷ್ಕರ್ಮಿಗಳು ಚಾಕು ಹಾಗೂ ಕಲ್ಲುಗಳನ್ನು ಉಪಯೋಗಿಸಿ ಬರ್ಬರವಾಗಿ ಹತ್ಯೆ ನಡೆಸಿರುವುದು ಪತ್ತೆಯಾಗಿದೆ.
ಹತ್ಯೆಗೆ ಮುಂಚೆಯೇ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್ ಪೋಷಕರು ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಹುಡುಕಾಟದ ಸಂದರ್ಭದಲ್ಲಿ ಈ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಅರೋಪಿಗಳ ಪತ್ತೆಗೆ ಸೋಲದೇವನಹಳ್ಳಿ ಹಾಗೂ ಸಾತನೂರು ಪೊಲೀಸರು ಎರಡು ಪ್ರತ್ಯೇಕ ತಂಡಗಳನ್ನು ನೇಮಿಸಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ.