ವರದಿ: ಮೂರ್ತಿ, ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ
ಬೆಂಗಳೂರು: ಬಾಳು ಕೊಡುವುದಾಗಿ ನಂಬಿಸಿ ಪ್ರಿಯಕರ ಕೈಕೊಟ್ಟಿದ್ದರಿಂದ ಮನನೊಂದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್‌ನ ರೇಣುಕಾನಗರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಅಮ್ಮಾಜಾನ್ (35) ಎಂದು ಗುರುತಿಸಲಾಗಿದ್ದು, ಅವರು ಸುಮಾರು 18 ವರ್ಷಗಳ ಹಿಂದೆ ಇಬ್ರಾತ್ ಅಲಿ ಎಂಬಾತನನ್ನು ವಿವಾಹವಾಗಿದ್ದರು. ಇವರಿಗೆ ಎರಡು ಹೆಣ್ಣುಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಪತಿಯನ್ನು ಬಿಟ್ಟು ಅಮ್ಮಾಜಾನ್, ರೋಷನ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದೆ.
ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ ರೋಷನ್ ಪತ್ನಿ ಹಾಗೂ ಅಮ್ಮಾಜಾನ್ ನಡುವೆ ಮಾತಿನ ಚಕಮಕಿ ಹಾಗೂ ಗಲಾಟೆ ನಡೆದಿತ್ತು. ಈ ಗಲಾಟೆಯಿಂದ ಮನನೊಂದ ಅಮ್ಮಾಜಾನ್ ಮದ್ಯಾಹ್ನದ ವೇಳೆಯಲ್ಲಿ ತಾನು ನಡೆಸುತ್ತಿದ್ದ ಕಾಂಡಿಮೆಂಟ್ಸ್ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಅಂಗಡಿಗೆ ಬಂದ ಗ್ರಾಹಕರಿಂದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ಕೊಟ್ಟ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸೀನ್ ಆಫ್ ಕ್ರೈಂ ತಂಡವೂ ಸ್ಥಳಕ್ಕೆ ಭೇಟಿ ನೀಡಿದ್ದು, ಇದೊಂದು ತಾನಾಗಿ ನಡೆದ ಆತ್ಮಹತ್ಯೆಯೇ ಅಥವಾ ಯಾವುದೇ ಸಂಚು ಇದ್ದದೆಯೇ ಎಂಬುದು ತನಿಖೆಯ ನಂತರ ವಿಚಾರ ಬೆಳಕಿಗೆ ಬರಬೇಕಿದೆ.
ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕ್ಕೆ ಪೊಲೀಸರು ಚುರುಕಾಗಿ ತನಿಖೆ ನಡೆಸುತ್ತಿದ್ದಾರೆ.
ಇವತ್ತಿನ ಸಮಾಜದಲ್ಲಿ ಪ್ರೀತಿ, ಪ್ರೇಮ, ಪ್ರಣಯ ಎಂಬುವವುಗಳು ಶುದ್ಧ ಭಾವನೆಗಿಂತಲೂ ಭರವಸೆ, ನಿರೀಕ್ಷೆ ಮತ್ತು ಕೆಲವೊಮ್ಮೆ ಮೋಸಗಳಿಂದ ಕೂಡಿವೆ. ಕೆಲವೊಮ್ಮೆ ಈ ಭಾವನೆಗಳು ನಿಜವಾಗಿಯೂ ಜೀವನ ರೂಪಿಸಬಹುದು, ಆದರೆ ಅನೇಕರಿಗೆ ಇದು ದುಃಖದ ದಾರಿ ಆಗುತ್ತಿದೆ.
ಈ ಪ್ರಕರಣದಲ್ಲಿ ಕೂಡ ಅಮ್ಮಾಜಾನ್ ಎಂಬ ಮಹಿಳೆ, ತನ್ನ ಭವಿಷ್ಯವನ್ನು ಕಟ್ಟಿಕೊಳ್ಳಲು ಹೊಸ ಸಂಬಂಧವೊಂದನ್ನು ನಂಬಿದ್ದರು. ಆದರೆ ಆ ನಂಬಿಕೆಯನ್ನೇ ಆಧಾರ ಮಾಡಿಕೊಂಡ ಪ್ರೇಮ, ಕೊನೆಗೆ ಅವಮಾನ, ಕಲಹ ಮತ್ತು ವೈರೋಧ್ಯಕ್ಕೆ ಕಾರಣವಾಯಿತು. ಪ್ರೇಮದಲ್ಲಿ ಕೈಕೊಟ್ಟ ಪ್ರಿಯಕರ, ಅವನ ಪತ್ನಿಯಿಂದ ಬಂದ ಹಲ್ಲೆ, ಪ್ರತಿಷ್ಠೆಗೆ ಬಿದ್ದ ದಕ್ಕೆ ಇವೆಲ್ಲ ಅಮ್ಮಾಜಾನ್ ಅವರನ್ನು ಆತ್ಮಹತ್ಯೆಯ ದಾರಿ ತೋರಿಸಿತು.
ಪ್ರೀತಿ ಅರ್ಥಪೂರ್ಣವಾಗಬೇಕಾದರೆ, ಅದರಲ್ಲಿ ನಿಷ್ಠೆ, ಸ್ಪಷ್ಟತೆ ಮತ್ತು ಜವಾಬ್ದಾರಿ ಇರಬೇಕು. ಇಲ್ಲದಿದ್ದರೆ ಅದು ಆ ವ್ಯಕ್ತಿಯ ಬದುಕನ್ನೇ ನಾಶಮಾಡಬಲ್ಲದು ಎಂಬುದನ್ನು ಈ ದುರಂತ ನಮಗೆ ನೆನಪಿಸುತ್ತಿದೆ.