ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಲಿದೆ. ರಾಜ್ಯದಲ್ಲೂ ಸರ್ಕಾರ ಸ್ಲೀಪರ್ ಸೆಲ್‌ಗಳನ್ನು ಪತ್ತೆ ಹಚ್ಚಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನಮಗೆಲ್ಲರಿಗೂ ದುಃಖದ ದಿನ. ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ, ಅಭಿವೃದ್ಧಿಗೆ ದಾರಿ ಮಾಡಿದ್ದರು. ನಾನು ಕೂಡ ಎರಡು ವರ್ಷಗಳ ಹಿಂದೆ ಅಲ್ಲಿಗೆ ಭೇಟಿ ನೀಡಿದ್ದೆ. ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯುತ್ತಿತ್ತು. ಬಹುಸಂಖ್ಯಾತ ಮುಸ್ಲಿಮರು ಪ್ರತಿ ದಿನ 10,000 ರೂ. ಸಂಪಾದನೆ ಮಾಡುತ್ತಿದ್ದೇವೆ ಎಂದು ಖುಷಿಯಿಂದ ಹೇಳಿಕೊಂಡಿದ್ದರು. ಆದರೆ ಈಗ ಪಾಕಿಸ್ತಾನ ಪ್ರೇರಿತವಾದ ಭಯೋತ್ಪಾದಕ ಸಂಘಟನೆ ಈ ಕೆಲಸ ಮಾಡಿರುವುದು ಖಂಡನೀಯ ಎಂದರು.
ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಿದೆ. ಸ್ಲೀಪರ್ ಸೆಲ್‌ಗಳನ್ನು ಪತ್ತೆ ಮಾಡಬೇಕು. ಜಾಮೀನು ಪಡೆದು ಹೊರಗೆ ಬಂದ ಭಯೋತ್ಪಾದಕರ ಮೇಲೆ ನಿಗಾ ವಹಿಸಬೇಕು. ಅಂಥವರನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಈ ಘಟನೆಯಲ್ಲಿ 28 ಹಿಂದೂಗಳು ಮೃತರಾಗಿದ್ದಾರೆ. 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಡೀ ದೇಶ ಸಂತ್ರಸ್ತರ ಕುಟುಂಬದ ಜೊತೆಗೆ ಇದೆ. ಪಾಪರ್ ಆಗಿರುವ ಪಾಕಿಸ್ತಾನವೇ ಈ ಕೃತ್ಯವನ್ನು ಮಾಡಿದೆ. ಜಮ್ಮು-ಕಾಶ್ಮೀರ ಎಂದರೆ ಪ್ರವಾಸೋದ್ಯಮದ ಕೇಂದ್ರ. ಇಲ್ಲಿ ಕೇಂದ್ರ ಸರ್ಕಾರದ ಕ್ರಮಗಳಿಂದ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು ಎಂದರು.
ಬೆಂಗಳೂರಿನ ಭರತ್ ಭೂಷಣ್, ಶಿವಮೊಗ್ಗದ ಮಂಜುನಾಥ್ ಈ ಘಟನೆಯಲ್ಲಿ ಮೃತರಾಗಿರುವುದು ದುಃಖಕರ. ವಿಷಯ ತಿಳಿದ ಕೂಡಲೇ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕರೆ ಮಾಡಿ ಕನ್ನಡಿಗರ ಸುರಕ್ಷತೆ ಬಗ್ಗೆ ವಿಚಾರಿಸಿದ್ದೇನೆ. ಉಳಿದ ಕನ್ನಡಿಗರ ಜೊತೆ ಸಂಪರ್ಕವೇರ್ಪಡಿಸಿ ಸಹಾಯ ನೀಡುವ ಬಗ್ಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.
ಸ್ಲೀಪರ್ ಸೆಲ್‌ಗಳು
ಭಯೋತ್ಪಾದಕರು ಮುಸ್ಲಿಮರನ್ನು ಮುಟ್ಟದೆ ಹಿಂದೂಗಳನ್ನೇ ಹುಡುಕಿ ಗುರಿ ಮಾಡಿ ಕೊಂದಿದ್ದಾರೆ. ಸ್ಥಳೀಯರು ಸ್ಲೀಪರ್ ಸೆಲ್‌ಗಳಾಗಿ ಇದಕ್ಕೆ ಬೆಂಬಲ ನೀಡಿದ್ದಾರೆ. ಕರ್ನಾಟಕ, ಬೆಂಗಳೂರಿನಲ್ಲೂ ಸ್ಲೀಪರ್ ಸೆಲ್‌ಗಳಿದ್ದಾರೆ. ಉಗ್ರರು ಬಂದಾಗ ಅವರಿಗೆ ವೋಟರ್ ಐಡಿ ಮಾಡಿಕೊಡುವ ದಂಧೆಯೂ ಇದೆ. ಇದು ಹಿಂದೂಗಳಿಗೆ ಎಚ್ಚರಿಕೆಯ ಗಂಟೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ. ಭಾರತ ಜಗತ್ತಿನಲ್ಲೇ ಬಲಿಷ್ಠ ಸೇನಾಪಡೆ ಹೊಂದಿದೆ ಎಂದರು.
ಬಿಜೆಪಿ ಕಚೇರಿ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ಶ್ರದ್ಧಾಂಜಲಿ ಸಭೆ ನಡೆಸಲಿದೆ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂದು ಈಗ ತೋರಿಸಬೇಕಿದೆ. ಬಿಜೆಪಿಯ ಎಲ್ಲರೂ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡಲಿದ್ದಾರೆ ಎಂದು ಹೇಳಿದರು.